ನವದೆಹಲಿ: ದೆಹಲಿ ಮತ್ತು ಮುಂಬೈ ನಗರವನ್ನು ಹಿರೋಶಿಮಾ ನಾಗಸಾಕಿ ಮಾಡುತ್ತೇವೆ. ಹೀಗೆಂದು ಹೇಳಿರುವುದು ಬೇರಾರು ಅಲ್ಲ ಇಂಟೆಲಿಜೆನ್ಸ್ ಮಾಜಿ ಮಹಾ ನಿರ್ದೇಶಕ ಹಮೀದ್ ಗುಲ್ ಅವರು, ಇದು ಅಸಲಿ ಅಥವಾ ನಕಲಿಯೋ ಎಂಬುದು ತಿಳಿದುಬಂದಿಲ್ಲ. ಆದರೆ, ಐಎಸ್ಐ ಮಾಜಿ ಮಹಾನಿರ್ದೇಶಕ ಹಮೀದ್ ಗುಲ್ ಅವರದೆಂದು ಹೇಳಲಾಗುತ್ತಿರುವ ಟ್ವಿಟರ್ ಖಾತೆಯ ಮೂಲಕ ಈ ಎಚ್ಚರಿಕೆ ಸಂದೇಶ ರವಾನೆಯಾಗಿದೆ.
ಭಾರತ ಸರಿದಾರಿಗೆ ಬರಬೇಕು ಇಲ್ಲವೇ ಹಿರೋಶಿಮಾ ಮತ್ತು ನಾಗಸಾಕಿಯಂತೆಯೇ ಮುಂಬೈ, ದೆಹಲಿಯನ್ನು ಮಾಡಲಾಗುತ್ತದೆ ಎಂದು ಐಎಸ್ಐ ಮಾಜಿ ಮಹಾನಿರ್ದೇಶಕ ಹಮೀದ್ ಗುಲ್ ಅವರದೆಂದು ಹೇಳಲಾಗುತ್ತಿರುವ ಟ್ವಿಟರ್ ಖಾತೆಯಲ್ಲಿ ಈ ಸಂದೇಶ ಹಾಕಲಾಗಿದ್ದು, ಭಾರತಕ್ಕೆ ಎಚ್ಚರಿಕೆ ನೀಡಿದೆ.
ಹಿರೋಶಿಮಾ ನಗರದ ಮೇಲೆ ಅಮೆರಿಕ ಅಣು ಬಾಂಬ್ ಹಾಕಿ ಸಮರ ಸಾರಿ ಇಂದಿಗೆ 70 ವರ್ಷಕಳೆದಿರುವ ಹಿನ್ನೆಲೆಯಲ್ಲೇ ಈ ಎಚ್ಚರಿಕೆ ಸಂದೇಶ ರವಾನೆಯಾಗಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.
ಹಮೀದ್ ಗುಲ್ ಅವರು ಭಾರತಕ್ಕೆ ಎಚ್ಚರಿಕೆ ನೀಡುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ ಪಾಕಿಸ್ತಾನದ ಖಾಸಗಿ ಮಾಧ್ಯಮವೊಂದರಲ್ಲಿ ಮಾತನಾಡಿದ್ದ ಅವರು, ನರೇಂದ್ರ ಮೋದಿ ಯಾರು. ಆತ ನಮ್ಮ ಎದುರಿಗೆ ಏನೂ ಅಲ್ಲ. ದೇವರ ದಯೆ ಇದೀಗ ನಮ್ಮ ಬಳಿ ಎಲ್ಲಾ ರೀತಿಯ ಸಂಪನ್ಮೂಲ, ಯೋಜನೆಗಳು, ತಂತ್ರಜ್ಞಾನಗಳಿವೆ. ಇದಿಷ್ಟು ಸಾಕು ಭಾರತವನ್ನು ಛಿದ್ರಗೊಳಿಸಲು ಎಂದು ಬೆದರಿಕೆ ನೀಡಿದ್ದರಲ್ಲದೇ, ಇದೇ ವೇಳೆ ಪಾಕಿಸ್ತಾನ ಪ್ರಧಾನಿ ಅವರು ಭಾರತದ ಕುರಿತು ಮೃದು ನಿಲುವು ತಾಳುತ್ತಿದ್ದಾರೆಂದು ಕಟುವಾಗಿ ಟೀಕಿಸಿದ್ದರು.
ಇದೀಗ ಹಮೀದ್ ಗುಲ್ ಅವರದೇ ಎನ್ನಲಾಗುತ್ತಿರುವ ಟ್ವಿಟರ್ ಖಾತೆಯಲ್ಲಿಯೂ ಬಹಿರಂಗವಾಗಿ ಭಾರತಕ್ಕೆ ಎಚ್ಚರಿಕೆ ನೀಡುವ ಸಂದೇಶವೊಂದು ರವಾನೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಈ ಕುರಿತಂತೆ ಸಾಮಾಜಿಕ ಜಾಲತಾಣದಾದ್ಯಂತ ಹಲವು ವಿರೋಧಗಳು ವ್ಯಕ್ತವಾಗುತ್ತಿವೆ.