ಒಂದು ಕಾಲದಲ್ಲಿ ಬಾಲಿವುಡ್ ಚಿತ್ರರಂಗವನ್ನು ಅಕ್ಷರಶಃ ಮಹಾರಾಜನಂತೆ ಆಳಿದ್ದ ರಾಜೇಶ್ ಖನ್ನಾ ಅವರ ಸಾವಿನ ಬಳಿಕ ಅವರ ಆಸ್ತಿ ಕುರಿತು ಜಟಾಪಟಿ ಈಗ ಮತ್ತೊಂದು ತಿರುವು ಪಡೆದುಕೊಂಡಿದೆ.
ರಾಜೇಶ್ ಖನ್ನಾ ಅವರ ಜೊತೆ 10 ವರ್ಷಗಳಿಂದ ಲಿವ್ ಇನ್ ರಿಲೇಶನ್ ಶಿಪ್ ಸಂಬಂಧವಿಟ್ಟುಕೊಂಡಿದ್ದ ಅನಿತಾ ಅಡ್ವಾನಿ, ರಾಜೇಶ್ ಖನ್ನಾ ಅವರ ಆಸ್ತಿ ತಮಗೆ ಸೇರಬೇಕೆಂದು ಸಲ್ಲಿಸಿದ್ದ ಅರ್ಜಿಯನ್ನು ಮುಂಬೈ ಹೈಕೋರ್ಟ್ ವಜಾಗೊಳಿಸಿದ ಬಳಿಕ ಅವರು ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದ್ದು ಅದೀಗ ವಿಚಾರಣೆಗೆ ಅಂಗೀಕಾರವಾಗಿದೆ.
ಈ ಮಧ್ಯೆ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅನಿತಾ ಅಡ್ವಾನಿ, ರಾಜೇಶ್ ಖನ್ನಾ ನಿಧನದ ಸಂದರ್ಭದಲ್ಲಿ ಅವರ ಶವವಿದ್ದ ವಾಹನದಲ್ಲಿ ತಾವು ಕುಳಿತಿದ್ದ ವೇಳೆ ಟ್ವಿಂಕಲ್ ಖನ್ನಾ ಪತಿ, ಬಾಲಿವುಡ್ ನಟ ಅಕ್ಷಯ್ ಕುಮಾರ್ ವಾಹನದಿಂದ ತಮ್ಮನ್ನು ಹೊರ ನೂಕುವಂತೆ ಹೇಳಿದ್ದರು ಎಂದು ಆರೋಪಿಸಿದ್ದಾರೆ. ಅಲ್ಲದೇ ರಾಜೇಶ್ ಖನ್ನಾ ಅವರ ಜೊತೆ ತಾವು ವಿವಾಹವಾಗಿದ್ದು, ಅವರು ಆನಾರೋಗ್ಯಕ್ಕೊಳಗಾದ ಬಳಿಕ ಸಾವಿಗೀಡಾಗುವ ಕೆಲ ದಿನಗಳ ಮುಂದಷ್ಟೇ ಡಿಂಪಲ್ ಕಪಾಡಿಯಾ, ಅವರ ಮಗಳು ಟ್ವಿಂಕಲ್ ಖನ್ನಾ ಹಾಗೂ ಆಕೆಯ ಪತಿ ಅಕ್ಷಯ್ ಕುಮಾರ್ ಆಗಮಿಸಿದ್ದು, ಆಸ್ತಿಯ ಸಲುವಾಗಿ ಎಂದು ಹೇಳಿದ್ದಾರೆ. ರಾಜೇಶ್ ಖನ್ನಾ ಅವರು ವಾಸವಾಗಿದ್ದ ‘ಆಶೀರ್ವಾದ್’ ಬಂಗಲೆಯನ್ನು ಡಿಂಪಲ್ ಕಪಾಡಿಯಾ ಕೆಲ ತಿಂಗಳುಗಳ ಹಿಂದಷ್ಟೇ 90 ಕೋಟಿ ರೂ. ಗಳಿಗೆ ಮಾರಾಟ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.