ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉಧಾಂಪುರದಲ್ಲಿ ನಡೆದ ಉಗ್ರರ ದಾಳಿ ವೇಳೆ ಜೀವಂತವಾಗಿ ಸೇರೆ ಸಿಕ್ಕ ಪಾಕಿಸ್ತಾನದ ಉಗ್ರ ನಾವೇದ್ ಅಲಿಯಾಸ್ ಉಸ್ಮಾನ್ ಖಾನ್‌ಗೆ ಸಹಕರಿಸಿದ ನಾಲ್ವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಶನಿವಾರ ಬಂಧಿಸಿದೆ.
ಎನ್‌ಐಎ ಅಧಿಕಾರಿಗಳು ಹೆಚ್ಚಿನ ವಿಚಾರಣೆಗಾಗಿ ಉಗ್ರ ನಾವೇದ್‌ನನ್ನು ಇಂದು ಜಮ್ಮುವಿನಿಂದ ಕಾಶ್ಮೀರ ಕಣಿವೆಗೆ ಕರೆದೊಯ್ದಿದ್ದು, ಉಗ್ರ ಭಾರತ ಪ್ರವೇಶಿಸಲು ಸಹಕರಿಸಿದ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ಉಗ್ರ ನಾವೇದ್ ನೀಡಿದ ಮಾಹಿತಿಯ ಆಧಾರದ ಮೇಲೆ ಎನ್‌ಐಎ ಅಧಿಕಾರಿಗಳು, ಪುಲ್ವಂ ಜಿಲ್ಲೆಯಲ್ಲಿ ನಾಲ್ವರನ್ನು ಬಂಧಿಸಿದ್ದಾರೆ. ಅಲ್ಲದೆ ಇನ್ನಷ್ಟು ಶಂಕಿತರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿರನ್ನು ಫಯಾಝ್ ಅಹಮ್ಮದ್ ವನಿ, ಜಾವೇದ್ ಅಹಮ್ಮದ್ ವನಿ, ಎಂ.ಡಿ. ಅಲ್ತಫ್ ವನಿ ಹಾಗೂ ಜಾವೇದ್ ಅಹಮ್ಮದ್ ಪರಯ್ ಎಂದು ಗುರುತಿಸಲಾಗಿದೆ.
ಬಂಧಿತ ನಾಲ್ವರು ಆರೋಪಿಗಳು ಕಾಶ್ಮೀರ ಕಣಿವೆಯ ಎಲ್‌ಇಟಿ ಸ್ಲೀಪರ್ ಸೆಲ್‌ನ ಸದಸ್ಯರಾಗಿದ್ದಾರೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಗುಪ್ತಚರ ಮೂಲಗಳ ಪ್ರಕಾರ, ಉಗ್ರರ ಒಂದು ತಂಡವೇ ಸ್ಲೀಪರ್ ಸೆಲ್‌ನ ಸದಸ್ಯರಾಗಿದ್ದು, ಇವರು ತಮ್ಮ ನಾಯಕರಿಂದ ಸೂಚನೆ ಬರದೇ ಯಾವುದೇ ದಾಳಿಗಳನ್ನು ನಡೆಸುವುದಿಲ್ಲ.