ಕನ್ನಡ ವಾರ್ತೆಗಳು

ಕಲ್ಲಿನಕೋರೆಗೆ ಈಜಲಿಳಿದಿದ್ದ ಇಬ್ಬರು ಯುವಕರು ಸಾವು : ನಾಲ್ವರು ಪ್ರಾಣಾಪಾಯದಿಂದ ಪಾರು (News updated)

Pinterest LinkedIn Tumblr

drown_quarry_Mudipu_1

ಕೊಣಾಜೆ: ಕಲ್ಲಿನ ಕೋರೆಯ ಹೊಂಡದಲ್ಲಿ ಈಜಲು ತೆರಳಿದ್ದ ಆರು ಮಂದಿ ಯುವಕರಲ್ಲಿ ಇಬ್ಬರು ಯುವಕರು ನೀರಿನ ಸೆಳೆತಕ್ಕೆ ಸಿಲುಕಿ ನೀರು ಪಾಲಾದ ಘಟನೆ ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯ ಮುಡಿಪು ಸಮೀಪದ ಚೇಳೂರು ಗ್ರಾಮದ ಮುಳೂರು ಎಂಬಲ್ಲಿ ರವಿವಾರ ಮಧ್ಯಾಹ್ನ ನಡೆದಿದೆ.

ಘಟನೆಯಲ್ಲಿ ಮೃತ ಪಟ್ಟ ದುರ್ದೈವಿಗಳನ್ನು ಚೇಳೂರು ಮುಜಿ ನಿವಾಸಿಗಳಾದ ಜಯಪ್ರಕಾಶ್‌(18)ಮತ್ತು ದೀಕ್ಷಿತ್‌ (18) ಎಂದು ಗುರುತಿಸಲಾಗಿದೆ. ಅವಘಡದಲ್ಲಿ ಮೂವರು ಪಾರಾಗಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಯಪ್ರಕಾಶ್ ಮತ್ತು ದೀಕ್ಷಿತ್‌ ಸೇರಿದಂತೆ ಒಟ್ಟು ಆರು ಮಂದಿ ಇಂದು ಮಧ್ಯಾಹ್ನ ಮುಡಿಪು ಸಮೀಪದ ಚೇಳೂರು ಗ್ರಾಮದ ಮುಳೂರು ಎಂಬಲ್ಲಿನ ಕಲ್ಲಿನ ಕೋರೆಯ ಹೊಂಡದಲ್ಲಿ ಈಜಲು ತೆರಳಿದ್ದು, ಈ ಸಂದರ್ಭ ನೀರಿನ ಸೆಳೆತಕ್ಕೆ ಸಿಲುಕಿದ ಜಯಪ್ರಕಾಶ್ ಸಹಾಯಕ್ಕಾಗಿ ಕೂಗಿದಾಗ ಆತನನ್ನು ರಕ್ಷಿಸಲು ಧಾವಿಸಿದ ದೀಕ್ಷಿತ್‌ ಕೂಡ ನೀರಿನ ಸೆಳೆತಕ್ಕೆ ಸಿಲುಕಿ ಇಬ್ಬರೂ ಮೃತ ಪಟ್ಟಿದ್ದಾರೆ ಎನ್ನಲಾಗಿದೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿಗಳು ಪಾವೂರಿನ ಇಕ್ಬಾಲ್‌ ಎನ್ನುವವರ ನೆರವಿನಿಂದ ಇಬ್ಬರ ಶವಗಳನ್ನು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಕರಣದ ಕುರಿತು ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

drown_quarry_Mudipu_2

                              ______________________________  news Updated.

 ಕಲ್ಲಿನ ಕೊರೆಯಲ್ಲಿ ಈಜಾಲು ಹೋದ ಆರು ಮಂದಿಯಲ್ಲಿ ನೀರಿನ ಸೆಳೆತಕ್ಕೆ ಸಿಕ್ಕಿದ ಇಬ್ಬರು ಶವವಾಗಿ ಪತ್ತೆ

ಬಂಟ್ವಾಳ: ನೀರು ತುಂಬಿದ ಕೋರೆ ಗುಂಡಿಯಲ್ಲಿ ಬಿದ್ದು ಇಬ್ಬರು ಯುವಕರು ಮತಪಟ್ಟ ಘಟನೆ ಬಂಟ್ವಾಳ ತಾಲೂಕು ಚೇಳೂರು ಗ್ರಾಮದಲ್ಲಿ ಭಾನುವಾರ ಸಂಭವಿಸಿದೆ. ನಾಲ್ವರು ಯುವಕರು ಪ್ರಾಣಾಪಾಯದಿಂದ ಪಾರಾಗಿದ್ದು, ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕೋರೆಗುಂಡಿ ಮುಚ್ಚದಿರುವುದೇ ದುರಂತಕ್ಕೆ ಕಾರಣ ಎಂದು ಕಂದಾಯ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಆರೋಪಿಸಿದ್ದು, ಈ ಹಿನ್ನೆಲೆಯಲ್ಲಿ ಜಮೀನು ಮಾಲೀಕ ಸಂಸ್ಥೆಯ ಮೇಲೆ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ.

ಬೋಳಿಯಾರು ಗ್ರಾಮದ ಮಜಿ ನಿವಾಸಿ ಉಮೇಶ್ ಎಂಬವರ ಮಗ ಜಯಪ್ರಕಾಶ್ (23), ಜನಾರ್ದನ್ ಎಂಬವರ ಮಗ ದೀಕ್ಷಿತ್(18) ಮತಪಟ್ಟ ಯುವಕರು. ದುರಂತದಲ್ಲಿ ಬದುಕುಳಿದ ಸ್ಥಳೀಯರಾದ ಶೇಖರ್ (24), ಸಂತೋಷ್(22), ಸುದೇಶ್ (20), ಅಕ್ಷಯ್ (19) ಎಂಬವರು ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾನುವಾರ ಮಧ್ಯಾಹ್ನ ಸುಮಾರು 2ರ ವೇಳೆಗೆ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೋರೆ ಗುಂಡಿಗೆ ಆರು ಮಂದಿ ಯುವಕರು ಈಜಾಡಲು ತೆರಳಿದ್ದರು. ಜಯಪ್ರಕಾಶ್ ಹಾಗೂ ಜನಾರ್ದನ್ ನೀರಿನಾಳಕ್ಕೆ ಹೋಗಿ ಈಜಾಡುತ್ತಿದ್ದರು. ಗುಂಡಿ ಸುಮಾರು 15 ರಿಂದ 20 ಅಡಿ ಆಳವಿತ್ತೆಂದು ಕಂದಾಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಚೇಳೂರು ಗ್ರಾಮದ ಮುಳೂರು ಬಳಿಯ, ಸಜೀಪಪಡು ಗ್ರಾಮದ ಬಾವಳಿ ಗುರಿ ಸರಕಾರಿ ಜಮೀನಿನಲ್ಲಿ ಸುಮಾರು 15ವರ್ಷಗಳ ಹಿಂದೆ ಕೆಂಪುಕಲ್ಲಿನ ಕೋರೆ ಅಕ್ರಮವಾಗಿ ನಡೆಸಲಾಗುತ್ತಿತ್ತು. ಸಾರ್ವಜನಿಕರ ಒತ್ತಡಕ್ಕೆ ಮಣಿದ ಕಂದಾಯ ಅಧಿಕಾರಿಗಳು ಕೋರೆಯನ್ನು ಸ್ಥಗಿತಗೊಳಿಸಿದ್ದರು. ನೀರು ತುಂಬುತ್ತಿದ್ದ ಕೋರೆಗುಂಡಿಯನ್ನು ಮುಚ್ಚಲು ಕೆಐಎಡಿಬಿಗೆ ಸೂಚನೆ ನೀಡಲಾಗಿತ್ತೆಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಗೆ ಸಂಸ್ಥೆಯ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದ್ದು, ಪ್ರಕರಣ ದಾಖಲಿಸಲಾಗುವುದಾಗಿ ಗ್ರಾಮಾಂತರ ಠಾಣಾ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಭಾನುವಾರ ಆಡಲು ಹೋಗಿದ್ದೆವು!: ಯಾವಾಗಲೂ ಭಾನುವಾರದಂದು ಈ ಪ್ರದೇಶಕ್ಕೆ ಹೋಗುತ್ತಿದ್ದೆವು. ಇಂದು ರಜೆಯನ್ನು ಕಳೆಯಲು ಅಲ್ಲಿಗೆ ಹೋಗಿದ್ದೆವು. ಗುಂಡಿ ಆಳವಾಗಿತ್ತೆಂದು ಗೊತ್ತಿದ್ದರೂ, ಸ್ನೇಹಿತರು ಅಲ್ಲಿಗೆ ಹೋಗಿದ್ದರು. ಎಲ್ಲರೂ ಈಜಾಡುತ್ತಿದ್ದಂತೆಯೇ ಜಯಪ್ರಕಾಶ್ ಮತ್ತು ದೀಕ್ಷಿತ್ ಆಳಕ್ಕೆ ತೆರಳಿ ಆಟವಾಡುತ್ತಿದ್ದರು. ಗುಂಡಿಯಲ್ಲಿ ತುಂಬಿ ಹೋಗಿದ್ದ ಕೆಸರಿಗೆ ಅವರ ಕಾಲು ಹೂತು ಹೋಗಿದ್ದರಿಂದ ಅವರು ಮೇಲೆ ಬರಲು ಆಗಿರಲಿಲ್ಲ ಎಂದು ಅಪಾಯದಿಂದ ಪಾರಾದ ಯುವಕರು ಹೇಳಿಕೊಂಡಿದ್ದಾರೆ.

ಜಿಲ್ಲಾಡಳಿತ ಆದೇಶವೂ ಇತ್ತು! : ಮೃತ್ಯಕೂಪವಾಗಿ ಪರಿಗಣಿಸಿದ ತೆರೆದಗುಂಡಿಯನ್ನು ಮುಚ್ಚುವಂತೆ 3 ವರ್ಷದ ಹಿಂದೆಯೇ ಜಿಲ್ಲಾಡಳಿತ, ತಾಲೂಕಾಡಳಿತ ಹಾಗೂ ತಾಲೂಕು ಪಂಚಾಯಿತಿ ಅಧಿಕಾರಿಗಳ ಮೂಲಕ ಆದೇಶ ನೀಡಿತ್ತು. ಸರಕಾರವೂ ಕಟ್ಟುನಿಟ್ಟಿನ ಕ್ರಮ ಜರಗಿಸಿದ್ದು, ಈ ಬಗ್ಗೆ ರಾಜ್ಯಾದ್ಯಂತ ಆಂದೋಲನವೇ ನಡೆದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ನಾನಾ ಕಡೆಗಳಲ್ಲಿದ್ದ ತೆರೆದ ಕೋರೆ ಗುಂಡಿ, ತೆರೆದ ಬಾವಿಗಳನ್ನು ಮುಚ್ಚಲಾಗಿತ್ತು. ಆದರೆ ಚೇಳೂರು ಹಾಗೂ ಸಜೀಪಪಡು ಗಡಿಯ ಈ ಕೋರೆಗುಂಡಿಯನ್ನು ಮುಚ್ಚಲು ಸ್ಥಳೀಯ ಗ್ರಾಪಂಗಳು ಕ್ರಮ ಜರಗಿಸಿರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಘಟನೆಗೆ ಜಮೀನು ಮಾಲೀಕ ಸಂಸ್ಥೆಯೇ ನೇರ ಹೊಣೆ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದರು.

ತಹಸೀಲ್ದಾರ್ ಪುರಂದರ್ ಹೆಗ್ಡೆ, ಸರ್ಕಲ್ ಇನ್ಸ್‌ಪೆಕ್ಟರ್ ಕೆ.ಯು.ಬೆಳ್ಳಿಯಪ್ಪ, ಸಬ್ ಇನ್ಸ್‌ಪೆಕ್ಟರ್ ರಕ್ಷಿತ್ ಕುಮಾರ್, ರೆವಿನ್ಯೂ ಇನ್ಸ್‌ಪೆಕ್ಟರ್ ನಾರಾಯಣ ಪೂಜಾರಿ, ಗ್ರಾಮಲೆಕ್ಕಾಧಿಕಾರಿಗಳಾದ ಬಸವರಾಜ್ ಸನದಿ, ಜ್ಯೋತಿಬಾಯಿ, ರಾಜು ಲಂಬಾಣಿ, ತೌಫೀಕ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಸ್ಥಿತಿಯನ್ನು ಅವಲೋಕಿಸಿದರು. ಗುಂಡಿಯ ಕೆಸರಿಗೆ ಹೂತು ಹೋದ ಮತದೇಹಗಳನ್ನು ಸ್ಥಳೀಯರ ನೆರವಿನೊಂದಿಗೆ ಮೇಲೆತ್ತಿದ ಪೊಲೀಸ್ ಸಿಬ್ಬಂದಿಗಳು, ನಾಲ್ವರನ್ನು ಯುವಕರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿದ್ದಾರೆ. ಅವರಿಗೆ ಯಾವುದೇ ಜೀವಪಾಯ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಕೋರೆಗುಂಡಿಯನ್ನು ಮುಚ್ಚದ ಹಿನ್ನೆಲೆಯಲ್ಲಿ ಸೂಕ್ತ ಕಾನೂನು ಕ್ರಮ ಜರಗಿಸಲಾಗುವುದು. ಈ ಬಗ್ಗೆ ಹಲವು ಬಾರಿ ಸಂಬಂಧಿತರಿಗೆ ಸೂಚನೆ ನೀಡಲಾಗಿತ್ತು. ಅಲ್ಲದೇ ಸಾರ್ವಜನಿಕ ಪ್ರಕಟಣೆಯೂ ನೀಡಲಾಗಿದೆ. ಆದರೂ ಚೇಳೂರು ಭಾಗದಲ್ಲಿರುವ ಈ ಗುಂಡಿಯನ್ನು ಸಂಬಂಧಿತರು ಮುಚ್ಚಲು ಯಾವುದೇ ವ್ಯವಸ್ಥೆ ಕಲ್ಪಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೋರೆಗುಂಡಿಯನ್ನು ಶಾಶ್ವತವಾಗಿ ಮುಚ್ಚಲಾಗುವುದು ಎಂದು ಬಂಟ್ವಾಳ ತಹಸೀಲ್ದಾರ್ ಪುರಂದರ ಹೆಗ್ಡೆ ತಿಳಿಸಿದ್ದಾರೆ.

Write A Comment