ಮಂಗಳೂರು : ಶಿರಾಡಿ ಘಾಟಿ ಹೆದ್ದಾರಿಯಲ್ಲಿ ಏಳು ತಿಂಗಳಿಂದ ನಡೆಯುತ್ತಿದ್ದ ಕಾಂಕ್ರಿಟೀಕರಣ ಕಾಮಗಾರಿ ಮುಗಿದಿದ್ದು, ಸ್ಥಗಿತಗೊಳಿಸಿದ್ದ ಸಂಚಾರಕ್ಕೆ ರಾಜ್ಯಸಭೆ ಸದಸ್ಯ ಆಸ್ಕರ್ ಫರ್ನಾಂಡಿಸ್ ಭಾನುವಾರ ವಿಧ್ಯುಕ್ತ ಚಾಲನೆ ನೀಡಿದರು. ಸೋಮವಾರದಿಂದ ಎಂದಿನಂತೆ ಎಲ್ಲ ರೀತಿಯ ವಾಹನ ಸಂಚಾರ ಪುನಾರಂಭಗೊಳ್ಳಲಿದೆ.
ಮಂಗಳೂರು- ಬೆಂಗಳೂರು ಸಂಪರ್ಕಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಯಾಗಿರುವ ಶಿರಾಡಿನ ಘಾಟಿಯಲ್ಲಿ ಶಾಶ್ವತ ದುರಸ್ತಿ ಹಿನ್ನೆಲೆಯಲ್ಲಿ 11.7 ಕಿ.ಮೀ. ರಸ್ತೆಯನ್ನು 69 ಕೋಟಿ ರೂ. ವೆಚ್ಚದಲ್ಲಿ ಪ್ರಥಮ ಹಂತದಲ್ಲಿ ಕಾಂಕ್ರಿಟೀಕರಣ ಮಾಡಲಾಗಿದೆ. ಜ.2ರಂದು ಘಾಟಿ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಳಿಸಿ, ಕಾಮಗಾರಿ ಆರಂಭಿಸಲಾಗಿತ್ತು. ಎರಡನೇ ಹಂತದ ಕಾಮಗಾರಿ ಇನ್ನಷ್ಟೇ ನಡೆಯಬೇಕಾಗಿದೆ.
ಶಿರಾಡಿ ಹೆದ್ದಾರಿ ಸಂಚಾರಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ ಆಸ್ಕರ್ ಫರ್ನಾಂಡಿಸ್ ಅವರೊಂದಿಗೆ ಲೋಕೋಪಯೋಗಿ ಇಲಾಖೆ ಸಚಿವ ಡಾ.ಎಚ್.ಸಿ.ಮಹಾದೇವಪ್ಪ, ಅರಣ್ಯ ಸಚಿವ ಬಿ.ರಮಾನಾಥ ರೈ, ಮಾಜಿ ಸಚಿವರಾದ ವಿಶ್ವನಾಥ್, ಶಿವರಾಂ ಮೊದಲಾದವರಿದ್ದರು.
ಗುಂಡ್ಯ ಅರಣ್ಯ ಇಲಾಖೆ ಅತಿಥಿಗೃಹದಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಸಮಾರಂಭದಲ್ಲಿ ಆಸ್ಕರ್ ಫರ್ನಾಂಡಿಸ್ ಮಾತನಾಡಿ, ರಾಜ್ಯದಲ್ಲಿ ಹಿಂದೆ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸುವಾಗ ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಸಂಖ್ಯೆಯ ವಾಹನಗಳಿದ್ದವು. ಈಗ ಸರಾಸರಿಗಿಂತ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಹೆದ್ದಾರಿಗಳ ಅಭಿವೃದ್ಧಿ, ಮರುನಿರ್ಮಾಣ ಅನಿವಾರ್ಯವಾಗಿದೆ. ತಾನು ಸಂಸದನಾಗಿದ್ದಾಗಲೇ ಶಿರಾಡಿ ಘಾಟಿ ರಸ್ತೆಗೆ ಶಾಶ್ವತ ಪರಿಹಾರದ ಯೋಜನೆ ಹಾಕಿದ್ದೆ ಎಂದರು.
ವಾರ್ಷಿಕ ಐದು ಸಾವಿರ ಮಿ.ಮೀ. ಮಳೆ ಹಾಗೂ ನೆಲದಲ್ಲೂ ಜಿನುಗುವ ನೀರಿನಿಂದ ಶಿರಾಡಿಯಲ್ಲಿ ಎಷ್ಟೇ ಡಾಮರೀಕೃತ ರಸ್ತೆ ನಿರ್ಮಿಸಿದರೂ ಗಟ್ಟಿಯಾಗಿ ನಿಲ್ಲುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ತಂತ್ರಜ್ಞರ ಸಲಹೆಯಂತೆ ಜಿಯೋ ಟೆಕ್ಸ್‌ಟೈಲ್ ಬಳಸಿ ಕಾಂಕ್ರೀಟ್ ಕಾಮಗಾರಿ ಮಾಡಲಾಗಿದೆ. ಎರಡನೇ ಹಂತದ ಕಾಮಗಾರಿಯನ್ನು ಮಳೆಗಾಲದ ಬಳಿಕ ಆರಂಭಿಸಲಾಗುವುದು. ಜಪಾನ್ ತಂತ್ರಜ್ಞಾನದ ಸುರಂಗ ಮಾರ್ಗ ನಿರ್ಮಾಣದ ಪ್ರಕ್ರಿಯೂ ಪ್ರಗತಿಯಲ್ಲಿದೆ ಎಂದರು.
ಲೋಕೋಪಯೋಗಿ ಇಲಾಖೆ ಸಚಿವ ಡಾ.ಮಹಾದೇವಪ್ಪ ಮಾತನಾಡಿ, ಶಿರಾಡಿ ಘಾಟಿ ರಸ್ತೆಯು ಸಂಚಾರ ಹಾಗೂ ಆರ್ಥಿಕ ಅಭಿವೃದ್ಧಿ ದೃಷ್ಟಿಯಿಂದ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಜ.2ರಿಂದ ಸಂಚಾರ ಸಂಪೂರ್ಣ ನಿಷೇಧಿಸಿ ಕಾಂಕ್ರಿಟೀಕರಣ ಕಾಮಗಾರಿ ಆರಂಭಿಸಲಾಗಿತ್ತು. ಮೇ 31ರೊಳಗೆ ಕಾಮಗಾರಿ ಮುಗಿಸುವ ಉದ್ದೇಶ ನಮ್ಮದಾಗಿತ್ತು ಎಂದರು.
ಏಪ್ರಿಲ್- ಮೇ ತಿಂಗಳಲ್ಲಿ ಸುರಿದ ಮಳೆಯಿಂದ ಸುಮಾರು 25 ದಿನ ಕಾಮಗಾರಿ ನಡೆಸಲು ಅಡ್ಡಿಯಾಗಿತ್ತು. ಈಗ ಪ್ರಮುಖ ಕಾಂಕ್ರೀಟ್ ಕಾಮಗಾರಿ ಮುಗಿದಿದೆ. ವಾಹನ ಸಂಚಾರ ಸುರಕ್ಷಾ ಕಾಮಗಾರಿಗಳಾದ ಎರಡು ಬದಿಯಲ್ಲಿ ಶೋಲ್ಡರ್ ನಿರ್ಮಾಣ, ಸೂಚನಾ ಫಲಕ ಅಳವಡಿಕೆ, ತಡೆಗೋಡೆ ನಿರ್ಮಾಣ, ಕ್ರ್ಯಾಶ್ ಬ್ಯಾರಿಯರ್ ನಿರ್ಮಾಣ ಮುಕ್ತಾಯ ಹಂತದಲ್ಲಿದೆ. ಮಳೆಗಾಲ ಮುಗಿದ ನಂತರ ಮ್ಯಾಸ್ಟಿಕ್ ಆಸ್ಪಾಲ್ಟ್ ಹಾಗೂ ಜಾಯಿಂಟ್ ಫಿಲ್ಲಿಂಗ್ ಕಾಮಗಾರಿಗಳನ್ನು ಗುತ್ತಿಗೆ ಅವಧಿಯೊಳಗೆ ನಡೆಸಲಾಗುವುದು ಎಂದರು.
ಎರಡನೇ ಹಂತದಲ್ಲಿ ಕೆಂಪು ಹೊಳೆಯಿಂದ ಅಡ್ಡ ಹೊಳೆ ತನಕ 22.18 ಕೋಟಿ ರೂ. ವೆಚ್ಚದಲ್ಲಿ 21 ಕಿ.ಮೀ. ಡಾಮರೀಕರಣ ಮತ್ತು 63.10 ಕೋಟಿ ರೂ. ವೆಚ್ಚದಲ್ಲಿ 12.38 ಕಿ.ಮೀ. ಕಾಂಕ್ರೀಟ್ ಕಾಮಗಾರಿ ಸೇರಿದಂತೆ 85.28 ಕೋಟಿ ರೂ. ಕಾಮಗಾರಿ ನಡೆಸಬೇಕಿದೆ. ಇದರಲ್ಲಿ 50 ಮೋರಿ, ಏಳು ಮೀ. ಅಗಲ ಡಾಮರು ಮತ್ತು 8.5 ಮೀ. ಕಾಂಕ್ರೀಟ್ ಕಾಮಗಾರಿ ನಡೆಸಬೇಕಿದ್ದು, ಮಳೆಗಾಲದ ಬಳಿಕ ಕಾಮಗಾರಿ ನಡೆಸುವ ನಿರೀಕ್ಷೆ ಇದೆ ಎಂದು ಸಚಿವರು ಹೇಳಿದರು.
ಅರಣ್ಯ ಸಚಿವ ಬಿ.ರಮಾನಾಥ ರೈ ಮಾತನಾಡಿ, ಶಿರಾಡಿಯು ಕರಾವಳಿ ಮತ್ತು ರಾಜಧಾನಿಯನ್ನು ಸಂಪರ್ಕಿಸುವ ಜೀವನಾಡಿಯಾಗಿದ್ದು, ಸ್ವಲ್ಪ ವಿಳಂಬವಾದರೂ ಗುಣಮಟ್ಟದ ಕಾಮಗಾರಿ ಆಗಿದೆ. ಮುಂದಿನ ಕಾಮಗಾರಿಗೂ ಅರಣ್ಯ ಇಲಾಖೆಯಿಂದ ಶೀಘ್ರ ಅನುಮತಿ ನೀಡಲಾಗುವುದು. ಅಧಿಕಾರಿಗಳು ಕಾಮಗಾರಿ ಪ್ರಕ್ರಿಯೆ ಶೀಘ್ರ ಆರಂಭಿಸಬೇಕು. ಜನರಿಗೆ ಸಮಸ್ಯೆ ಆಗದಂತೆ ಕಾಮಗಾರಿ ನಡೆಸಬೇಕು. ಇಂಥ ಯಾವುದೇ ಅಭಿವೃದ್ಧಿ ಕಾಮಗಾರಿಗೆ ರಾಜ್ಯ ಸರಕಾರ ಬದ್ಧವಾಗಿದೆ ಎಂದರು.
ಮುಖಂಡರಾದ ಶಕುಂತಳಾ ಶೆಟ್ಟಿ, ದಿವ್ಯಪ್ರಭಾ ಚಿಲ್ತಡ್ಕ, ಕೋಡಿಜಾಲ್ ಇಬ್ರಾಹಿಂ, ಪಿ.ವಿ.ಮೋಹನ್, ಎಂ.ಎಸ್.ಮುಹಮ್ಮದ್, ವೆಂಕಪ್ಪ ಗೌಡ, ಲೋಕೋಪಯೋಗಿ ಇಲಾಖೆ ಮುಖ್ಯ ಎಂಜಿನಿಯರ್ ಮೃತ್ಯುಂಜಯಸ್ವಾಮಿ, ನಟರಾಜ್ ಸಿ. ಮತ್ತಿತರರು ಉಪಸ್ಥಿತರಿದ್ದರು.