ಪುತ್ತೂರು: ನಗರದ ಉದ್ಯಮಿಯೊಬ್ಬರ ಮನೆಯಲ್ಲಿ ಮನೆ ಕೆಲಸದ ಸೋಗಿನಲ್ಲಿ ಬಂದು ಎರಡು ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ ನಾಲ್ವರು ಆರೋಪಿಗಳನ್ನು ಯಶಸ್ವಿ ಕಾರ್ಯಾಚರಣೆಯಲ್ಲಿ ಪುತ್ತೂರು ನಗರ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ತುಮಕೂರಿನ ಅನುಷಾ (19), ಮನೆ ಕೆಲಸದಾಕೆ ಬೇಲೂರು ಮೂಲದ ಸುಮಿತ್ರಾ (40), ಕಳವಿಗೆ ಸಹಕರಿಸಿದ ಸಕಲೇಶಪುರದ ಲೋಕೇಶ್ (22) ಹಾಗೂ ಗೋಪಿ (40) ಬಂಧಿತರು. ಆರೋಪಿಗಳಿಂದ ಎರಡು ಚಿನ್ನದ ಸರ, ಎರಡು ಬಳೆ, ಲಾಕೆಟ್, ಉಂಗುರ ಹಾಗೂ ಐದು ಸಾವಿರ ರೂ. ವಶಪಡಿಸಿಕೊಳ್ಳಲಾಗಿದೆ. ಜಿಲ್ಲಾ ಎಸ್ಪಿ ಡಾ. ಶರಣಪ್ಪ ಅವರು ಪುತ್ತೂರು ನಗರ ಠಾಣೆಯಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಆ.6ರಂದು ಮನೆಯಲ್ಲಿ ಕಳವು ನಡೆದ ಕುರಿತು ಪುತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಮೂರು ದಿನಗಳ ಅವಧಿಯಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದ ಡಾ. ಶರಣಪ್ಪ ಅವರು, ಕಾರ‌್ಯಾಚರಣೆ ನಡೆಸಿದ ಡಿವೈಎಸ್‌ಪಿ ಭಾಸ್ಕರ ರೈ, ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್, ಎಸ್‌ಐ ಅಬ್ದುಲ್ ಖಾದರ್, ಸಿಬ್ಬಂದಿಗಳಾದ ತೇಜಾವತಿ, ಹರಿಪ್ರಸಾದ್, ಹರೀಶ್, ಪ್ರಶಾಂತ್ ರೈ ಅವರಿಗೆ ಬಹುಮಾನ ನೀಡಲಾಗುವುದು ಎಂದು ಘೋಷಿಸಿದರು.
ಘಟನೆ ವಿವರ: ಕೂರ್ನಡ್ಕದಲ್ಲಿರುವ ಗೇರುಬೀಜ ಕಾರ್ಖಾನೆಯೊಂದರ ಮಾಲೀಕ ಎ.ಬಿ. ವೇಗಸ್ ಎಂಬವರ ಪತ್ನಿ ಎಚ್.ಎಂ. ವೇಗಸ್ ಅವರು ತುಮಕೂರಿನ ಅನುಷಾ ಎಂಬವರನ್ನು ಹೋಂ ನರ್ಸ್ ಆಗಿ ಎರಡು ತಿಂಗಳ ಹಿಂದೆ ನೇಮಕ ಮಾಡಿದ್ದರು. ಮನೆ ಕೆಲಸದಾಕೆ ಸುಮಿತ್ರಾ ಹಾಗೂ ಅನುಷಾ ಜತೆ ಸೇರಿ ಕಳ್ಳತನಕ್ಕೆ ಹೊಂಚು ಹಾಕಿದ್ದರು. ಅಂತೆಯೇ ಇವರಿಬ್ಬರೂ ಕಳ್ಳತನ ನಡೆಸಿ ಜು.27ರಂದು ರಜೆ ಮೇಲೆ ಸಕಲೇಶಪುರದ ನಾರ್ವೆಗೆ ತೆರಳಿದ್ದರು.
ಅಷ್ಟರಲ್ಲಿ ಎ.ಬಿ. ವೇಗಸ್ ಅವರ ಪುತ್ರ ಕಪಾಟಿನ ಬೀಗ ತೆರೆದು ನೋಡಿದಾಗ ಕಳ್ಳತನ ನಡೆದದ್ದು ಬೆಳಕಿಗೆ ಬಂತು. ತಕ್ಷಣ ಕೆಲಸದಾಳುಗಳನ್ನು ಈ ಮನೆಗೆ ಒದಗಿಸಿದ್ದ ಸರಸ್ವತಿ ಬಳಿ ವಿಚಾರಿಸಿದಾಗ ಸಂಶಯಗೊಂಡು ಆ.6ರಂದು ನಗರ ಠಾಣೆಗೆ ದೂರು ನೀಡಲಾಯಿತು.
ತನಿಖೆ ನಡೆಸಿದ ಪೊಲೀಸರು ಅನುಷಾಳ ಮೊಬೈಲ್ ಹಾಗೂ ಬ್ಯಾಂಕ್ ಅಕೌಂಟನ್ನು ಪರಿಶೀಲಿಸಿದಾಗ ಇಡೀ ಪ್ರಕರಣ ಬಿಚ್ಚಿಕೊಂಡಿತು. ಆರೋಪಿಗಳು ಕಳ್ಳತನ ಮಾಡಿದ ಚಿನ್ನದ ಬಳೆಯನ್ನು ಪುತ್ತೂರು ರಾಜಧಾನಿ ಜುವೆಲ್ಲರ್ಸ್‌ನಲ್ಲಿ ಅಡವಿಟ್ಟು 70 ಸಾವಿರ ರೂ. ಪಡೆದುಕೊಂಡ ಮಾಹಿತಿ ದೊರೆಯಿತು. ಈ ಹಣದಿಂದ ಸರ, ಲಾಕೆಟ್ ಹಾಗೂ ಉಂಗುರ ಖರೀದಿಸಿದ್ದರು. ಉಳಿದ ಮೊತ್ತವನ್ನು ಸುಮಿತ್ರಾಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿತ್ತು.
ಇನ್ನೊಂದು ದಪ್ಪದ ಸರವನ್ನು ಸಕಲೇಶಪುರದ ಫೈನಾನ್ಸ್ ಒಂದರಲ್ಲಿ ಅಡವಿಟ್ಟು 30 ಸಾವಿರ ರೂ. ಪಡೆಯಲಾಗಿತ್ತು. ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಹಣ ವರ್ಗಾವಣೆ ಮಾಹಿತಿ ದೊರೆಯಿತು. ಮೊಬೈಲ್ ಪರಿಶೀಲಿಸಿದಾಗ ಅನುಷಾಳ ಪ್ರಿಯಕರ ಲೋಕೇಶ್ ಹಾಗೂ ಈತನ ಜತೆಗಿದ್ದ ಗೋಪಿಯೂ ಪ್ರಕರಣದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸಕಲೇಶಪುರದ ನಾರ್ವೆಯಿಂದ ನಾಲ್ವರು ಆರೋಪಿಗಳನ್ನು ಬಂಧಿಸಿದರು.
ಪರಸ್ಪರ ಸಂಬಂಧವಿಲ್ಲ: ಅನುಷಾ ಮತ್ತು ಲೋಕೇಶ್ ಹೊರತುಪಡಿಸಿದರೆ ಉಳಿದಿಬ್ಬರಿಗೆ ಪರಿಚಯವೇ ಇರಲಿಲ್ಲ. ಎರಡು ತಿಂಗಳ ಸ್ನೇಹ ಅನುಷಾ ಹಾಗೂ ಸುಮಿತ್ರಾಳನ್ನು ಕಳ್ಳತನ ನಡೆಸಲು ಪ್ರಚೋದಿಸಿದೆ. ಇನ್ನೊಂದೆಡೆ ಲೋಕೇಶ್‌ನ ಜತೆ ಗೋಪಿ ಹಣದಾಸೆಗೆ ಒಂದಾಗಿರುವ ಕುರಿತು ಶಂಕೆ ವ್ಯಕ್ತವಾಗಿದೆ.