ಕುಂದಾಪುರ: ನಿತ್ಯ ತಮ್ಮ ಕೆಲಸದಲ್ಲಿ ತಾವೂ ಬ್ಯುಸಿಯಾಗಿತ್ತಿದ್ದ ಜನರು ಭಾನುವಾರ ಬೆಳಿಗ್ಗೆ ಕುಂದಾಪುರದ ಮೂಡ್ಲಕಟ್ಟೆಯ ಸಟ್ವಾಡಿ ಬಸ್ಸು ನಿಲ್ದಾಣದ ಬಳಿಯ ಗದ್ದೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದರು. ಅವರ ಮನಸ್ಸಿನಲ್ಲಿ ಉತ್ಸಾಹವಿತ್ತು, ಮನೋರಂಜನೆಯ ಕೌತುಕವಿತ್ತು. ಇಷ್ಟಕ್ಕೆಲ್ಲಾ ಕಾರಣವಾದ್ದು ಭಾರತೀಯ ಜನತಾ ಪಾರ್ಟಿ ಹಾಗೂ ಯುವಮೋರ್ಚಾ ಕುಂದಾಪುರ ವತಿಯಿಂದ, ಕುಂದಾಪುರ ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿ ಕಾರ್‍ಯಕರ್ತರು ಹಾಗೂ ಸಾರ್ವಜನಿಕರ ಮನೋರಂಜನೆಗಾಗಿ “ ಶ್ರಾವಣದ ಕೆಸರಿನಲ್ಲಿ ಕಮಲ ಕೂಟ” ಎನ್ನುವ ಕೆಸರು ಗದ್ದೆಯ ಆಟೋಟ ಸ್ಪರ್ಧೆಯಾಗಿತ್ತು.
ಕ್ರೀಡೆಗಳು ಏನೆನಿತ್ತು: ಹಗ್ಗ ಜಗ್ಗಾಟ, ಕಬಡ್ಡಿ, ವಾಲಿಬಾಲ್, ಮಾನವ ಪಿರಾಮಿಡ್, ಕೆಸರಿನ ಓಟ, ಲಿಂಬೆ ಚಮಚ ಓಟ, ಉಪ್ಪು ಮೂಟೆ ಓಟ, ಡೊಂಕಾಲು ಮೂರ್‍ಕಾಲು ಓಟ, ಗೋಣಿ ಚೀಲ ಓಟ, ನಿಧಿ ಹುಡುಕಾಟ, ಲಗೋರಿ, ಕರಗಳಲ್ಲಿ ಕಮಲ ಮುಂತಾದ ಮರೆಯಾದ ಗ್ರಾಮೀಣ ಕ್ರೀಡಕೂಟಗಳನ್ನು ಆಯೋಜಿಸುವ ಮೂಲಕ ಕಾರ್ಯಕರ್ತರು ಹಾಗೂ ಸಾರ್ವಜನಿಕರನ್ನು ಮನೋರಂಜಿಸಲಾಗಿತ್ತು. ಮಹಿಳೆಯರು ಮತ್ತು ಯುವತಿಯರಿಗಾಗಿಯೇ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಎಲ್ಲರೂ ಸಂತಸದಿಂದಲೇ ಭಾಗವಹಿಸಿದ್ದರು. ಈ ಸಂದರ್ಭ ಬಿಜೆಪಿ ಕಾರ್‍ಯಕರ್ತರು, ಸಾರ್ವಜನಿಕರು ಕೆಸರಿನಲ್ಲಿ ಮಿಂದೆದ್ದು ಖುಷಿ ಅನುಭವಿಸಿದ್ದು ಅಲ್ಲದೇ ವಾದ್ಯ-ಘೋಷಗಳಿಗೆ, ಡಿಜೆ ಸಾಂಗುಗಳಿಗೆ ಕೆಸರಿನಲ್ಲಿ ಹೊರಳುತ್ತಾ ಕುಣಿದು ಕುಪ್ಪಳಿಸಿದ್ದು ಉಲ್ಲಾಸದ ಕ್ಷಣಗಳಿಗೆ ಸಾಕ್ಷಿಯಾಗಿತ್ತು. .
ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಉಡುಪಿಯ ಮಾಜಿ ಶಾಸಕ ರಘುಪತಿ ಭಟ್, ಉಡುಪಿ ಜಿಲ್ಲಾ ಬಿಜೆಪಿ ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿ ಮಹೇಶ್ ಪೂಜಾರಿ, ಕರ್ನಾಟಕ ರಾಜ್ಯ ಮೀನುಗಾರರ ಪ್ರಕೋಷ್ಠದ ಸಂಚಾಲಕ ಬಿ. ಕಿಶೋರ್ ಕುಮಾರ್, ಬೈಂದೂರು ಮಾಜಿ ಶಾಸಕ ಲಕ್ಷ್ಮೀನಾರಾಯಣ, ಕುಂದಾಪುರ ಕ್ಷೇತ್ರ ಬಿಜೆಪಿ ಅಧ್ಯಕ್ಷ ರಾಜೇಶ ಕಾವೇರಿ, ಯುವಮೋರ್ಚಾ ಅಧ್ಯಕ್ಷ ಶಂಕರ ಅಂಕದಕಟ್ಟೆ ಸೇರಿದಂತೆ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಕಳದ ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ಅವರು ಕೂಡ ಕಾರ್ಯಕ್ರಮದಲ್ಲಿ ಪಾಲ್ಘೊಂಡಿದ್ದರು.
ಊಟ-ಉಪಹಾರಕ್ಕೆ ಮೆನು ಹೀಗಿತ್ತು: ಬೆಳಿಗ್ಗೆ ಕಡಬು, ಇಡ್ಲಿ ಹಾಗೂ ಚಟ್ನಿ-ರಸಂ, ಮಧ್ಯಾಹ್ನದ ಊಟಕ್ಕೆ ಬಿಸಿಬಿಸಿ ಗಂಜಿ, ಉಪ್ಪಿನಕಾಯಿ, ಚಟ್ಲಿ ಬಜ್ಜಿ(ಸಿಗಡಿ ಚಟ್ನಿ), ಕೊತ್ತಂಬರಿ ಸೊಪ್ಪಿನ ಚಟ್ನಿ, ಸಂಜೆಗೆ ಗೆಣಸು ಮತ್ತು ಹಲಸಿನ ಹಪ್ಪಳ, ಚಟ್ಟಂಬಡೆ ಮತ್ತು ಚಾ ಮೊದಲಾದವುಗಳಿದ್ದವು.
ಪರಂಪರೆಯ ಗ್ರಾಮೀಣ ಆಟದ ಆಚರಣೆಯ ವೈಭವವನ್ನು ಇಮ್ಮಡಿಗೊಳಿಸುವ ಸಲುವಾಗಿ ಮತ್ತು ಕಾರ್ಯಕರ್ತರನ್ನು ಒಗ್ಗೂಡಿಸುವ ಸಲುವಾಗಿ ಕುಂದಾಪುರ ಬಿಜೆಪಿ ಯುವಮೋರ್ಚಾ ಸಾರ್ವಜನಿಕರು, ಕಾರ್ಯಕರ್ತರಿಗಾಗಿ ಈ ಕಾರ್ಯಕ್ರಮ ಆಯೋಜಿಸಿತ್ತು.
ಚಿತ್ರ,ವರದಿ- ಯೋಗೀಶ್ ಕುಂಭಾಸಿ