ಜಮ್ಮು ಕಾಶ್ಮೀರ, ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಭೂಕಂಪನದ ಅನುಭವವಾಗಿದ್ದು ಮತ್ತೊಮ್ಮೆ ಜನತೆಯನ್ನು ಆತಂಕಕ್ಕೀಡು ಮಾಡಿದೆ.
ಈ ಹಿಂದೆ ನಡೆದಿದ್ದ ಪ್ರಬಲ ಭೂಕಂಪನದಿಂದ ಸಾಕಷ್ಟು ಹಾನಿ ಸಂಭವಿಸಿತ್ತು. ಈ ನಡುವೆಯೇ ಜಮ್ಮು ಕಾಶ್ಮೀರ, ದೆಹಲಿ,ಹಿಮಾಚಲ ಪ್ರದೇಶ, ಹರಿಯಾಣ ಹಾಗೂ ಪಂಜಾಬ್ ಗಳಲ್ಲಿ ಮಧ್ಯಾಹ್ನ 3.33 ರಿಂದ 3.38 ರ ನಡುವೆ ಕಂಪನದ ಅನುಭವವಾಗಿದ್ದು ಜನತೆ ಆತಂಕದಿಂದ ಮನೆಯಿಂದ ಹೊರಗಡೆ ಓಡಿ ಬಂದರು.
ರಿಕ್ಟರ್ ಮಾಪನದಲ್ಲಿ 6.2ರಷ್ಟು ಭೂಕಂಪನದ ತೀವ್ರತೆ ದಾಖಲಾಗಿದ್ದು, ಯಾವುದೇ ಸಾವು ನೋವಿನ ಮಾಹಿತಿ ಲಭಿಸಿಲ್ಲ. ಇದೇ ಸಮಯದಲ್ಲಿ ಪಾಕಿಸ್ತಾನ ಹಾಗೂ ಅಪ್ಘಾನಿಸ್ತಾನ ಗಳಲ್ಲಿಯೂ ಭೂಮಿ ಕಂಪಿಸಿದೆ ಎನ್ನಲಾಗಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.