ಕೊಪ್ಪಳ, ಆ.10-ಸಕಾಲಕ್ಕೆ ಮಳೆ ಬಾರದೆ ಜಿಲ್ಲೆಯ ಗಿಣಿಗೇರಾ ರೈತರು ಕಂಗಾಲಾಗಿದ್ದು, ಅರ್ಧ ಬೆಲೆಗೆ ತಮ್ಮ ಜಾನುವಾರುಗಳನ್ನು ಮಾರಾಟ ಮಾಡುತ್ತಿದ್ದಾರೆ.ಬೆಳೆ ಸಾಲ, ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ರೈತರ ಸರಣಿ ಆತ್ಮಹತ್ಯೆಗಳು ನಡೆದಿರುವ ಬೆನ್ನಲ್ಲೇ ಜಾನುವಾರುಗಳ ಮಾರಾಟ ನಡೆದಿರುವುದು ಕಳವಳಕಾರಿ ಸಂಗತಿಯಾಗಿದೆ.ಜಾನುವಾರುಗಳಿಗೆ ತಿನ್ನಲು ಮೇವಿಲ್ಲ, ಕುಡಿಯಲು ನೀರಿಲ್ಲ ನಾವೇನು ಮಾಡಬೇಕೆಂದು ಗೊತ್ತಾಗುತ್ತಿಲ್ಲ, ಅವುಗಳನ್ನು ಮಾರುವುದು ಅನಿವಾರ್ಯವಾಗಿದೆ
ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡರು.ಬೆಳೆಸಾಲ ತೀರಿಸಲಾಗದೆ ರೈತರು ಮುಂದೇನು ಮಾಡಬೇಕೆಂಬ ಚಿಂತೆಯಲ್ಲಿದ್ದಾರೆ. ಲೇವಾದೇವಿಗಾರರ ಉಪಟಳವೂ ಜಾಸ್ತಿಯಾಗಿದೆ. ಕೈಗೆ ಕೆಲಸವಿಲ್ಲದೆ ಬೇರೆ ಬೇರೆ ಜಿಲ್ಲೆ, ರಾಜ್ಯಗಳಿಗೆ ಹಲವಾರು ಜನರು ಗುಳೆ ಹೋಗುವ ಸಿದ್ಧತೆ ನಡೆಸಿದ್ದಾರೆ.
ಕಳೆದ ವರ್ಷ ಈ ಸಮಯದಲ್ಲಿ ಬಿತ್ತನೆ ಪೂರ್ಣಗೊಂಡಿದ್ದವು. ಆದರೆ ಈ ಸಲ ಮಳೆ ಕೈಕೊಟ್ಟ ಕಾರಣ ಬಿತ್ತನೆಯೇ ಆಗಿಲ್ಲವೆಂದು ರೈತರು ತಮ್ಮ ಅಸಮಾಧಾನ ತೋಡಿಕೊಳ್ಳುತ್ತಿದ್ದಾರೆ.ಸರ್ಕಾರ ಬರೀ ಆಶ್ವಾಸನೆ ನೀಡುತ್ತಿದೆ. ಆದರೆ ರೈತರ ನೆರವಿಗೆ ಇನ್ನೂ ಬಂದಿಲ್ಲ. ನಮ್ಮ ಕೂಗು ಅರಣ್ಯ ರೋಧನವಾಗಿದೆ ಎಂದು ರೈತರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.