ರಾಷ್ಟ್ರೀಯ

ಉಗ್ರರ ನುಸುಳುವಿಕೆ ತಡೆಯುತ್ತಿದ್ದ ‘ಮಾನಸಿ’ ಇನ್ನಿಲ್ಲ

Pinterest LinkedIn Tumblr

seneಶ್ರೀನಗರ: ಉಗ್ರರೊಂದಿಗೆ ಹೋರಾಡುತ್ತಲೇ ಪ್ರಾಣ ತ್ಯಜಿಸಿ, ಹುತಾತ್ಮರಾದವರು ನಮ್ಮ ದೇಶದಲ್ಲಿ ಸಾಕಷ್ಟು ಮಂದಿ ಇದ್ದಾರೆ. ಹಾಗೆಯೇ ನುಸುಳುವಿಕೆಯನ್ನು ಪತ್ತೆ ಹಚ್ಚುತ್ತಿದ್ದ ಶ್ವಾನ ಮಾನಸಿಯೂ, ಉತ್ತರ ಜಮ್ಮು ಕಾಶ್ಮೀರದ ತಂಗ್ದರ್ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗಲೇ ಕೊನೆಯುಸಿರೆಳೆದಿದ್ದು, ದೇಶಕ್ಕಾಗಿ ಜೀವವನ್ನು ಸಮರ್ಪಿಸಿದೆ.

ಇಲ್ಲಿಂದ ಸುಮಾರು 150 ಕಿ.ಮೀ. ದೂರದಲ್ಲಿರುವ ತಂಗ್ದರ್‌ನಲ್ಲಿ ನಾಲ್ಕು ವರ್ಷದ ಲ್ಯಾಬ್ರೆಡರ್ ಶ್ವಾನ ಮಾನಸಿ ಹಾಗೂ ಅದನ್ನು ನಿರ್ವಹಿಸುತ್ತಿದ್ದ ಪ್ರಾದೇಶಿಕ ಸೈನ್ಯದ ಬಷೀರ್ ಅಹ್ಮದ್ ವಾರ್ ಅವರನ್ನು ಗಡಿ ನುಸುಳುತ್ತಿದ್ದ ಉಗ್ರರು ಗುಂಡಿಕ್ಕಿ ಸಾಯಿಸಿದ್ದಾರೆ.

ಕುಪ್ವಾರಾ ನಿವಾಸಿ ವಾರ್ ಮತ್ತು ಮಾನಸಿಯನ್ನು ಉಗ್ರರು ನುಸುಳಲು ಯತ್ನಿಸಿದ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ದಟ್ಟ ಅರಣ್ಯ ಪ್ರದೇಶದಲ್ಲಿ ಶನಿವಾರ ಮತ್ತು ಭಾನುವಾರ ರಾತ್ರಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಅತ್ಯಂತ ಸೂಕ್ಷ್ಮಮತಿಯಾಗಿದ್ದ ಮಾನಸಿ, ಯಾವುದೋ ಚಲನೆಯನ್ನು ಗ್ರಹಿಸಿ, ವಾರ್ ಅವರನ್ನು ಎಳೆಯಲು ಆರಂಭಿಸಿತು.

ನುಸುಳುಕೋರರನ್ನು ಕಂಡ ಮಾನಸಿ ಬೊಗಳಲು ಆರಂಭಿಸಿದಾಗ, ಆಕೆ ಮೇಲೆ ನುಸುಳುಕೋರರು ಗುಂಡು ಹಾರಿಸಿದರು. ಇದರಿಂದ ಆಕ್ರೋಶಗೊಂಡು, ತಕ್ಷಣವೇ ಎಚ್ಚೆತ್ತುಕೊಂಡ ವಾರ್ ಅವರು ನಿರಂತರವಾಗಿ ನುಸುಳುಕೋರರೆಡೆಗೆ ಗುಂಡು ಹಾರಿಸಿ, ಸೈನ್ಯದ ಬಲವರ್ಧನೆಗೆ ಕರೆ ನೀಡಿದರು.

ಸೈನ್ಯದ ಟ್ರ್ಯಾಕ್‌ಗೆ ಮಾನಸಿ ಸೇರಿದಾಗಿನಿಂದಲೂ ಅದರ ಸೌಖ್ಯ ನೋಡಿಕೊಂಡು, ಸಾಮಿಪ್ಯ ಬೆಳೆಯಿಸಿಕೊಂಡಿದ್ದ ವಾರ್‌ಗೆ ಬಹುಶಃ ಆಕೆಯ ಅಗಲಿಕೆಯನ್ನು ಸಹಿಸಿಕೊಳ್ಳುವುದು ಕಷ್ಟವಾಗುತ್ತಿತ್ತು. ಅವರೂ ಅದರೆಡೆಗೆ ಹೆಜ್ಜೆ ಹಾಕುವಂತಾಯಿತು. ನುಸುಳುಕೋರರ ಗುಂಡಿಗೆ ಬಲಿಯಾದರು. ಆದರೆ, ಅವರು ಸಾಯುವ ಮುನ್ನ ಹೆಚ್ಚಿನ ಸೈನ್ಯ ಸ್ಥಳಕ್ಕೆ ಧಾವಿಸಿ, ಉಗ್ರರನ್ನು ಕೊಲ್ಲುವಲ್ಲಿ ಯಶಸ್ವಿಯಾಗಿ, ದೇಶಕ್ಕೆ ಬಂದೊದಗಲಿದ್ದ ಸಂಚಕಾರ ತಪ್ಪಿಸಿದೆ.

ಯುದ್ಧ ಭೂಮಿಯಲ್ಲಿ ಒಬ್ಬ ಸೈನಿಕ ಗಾಯಗೊಂಡಾಗ, ಸಹವರ್ತಿಗಳು ಹೇಗೆ ಕ್ರಮ ಕೈಗೊಳ್ಳುತ್ತಾರೋ ಅದೇ ರೀತಿ ಮಾನಸಿಯನ್ನು ಉಳಿಸಿಕೊಳ್ಳಲೂ ಸಕಲ ಕ್ರಮ ಕೈಗೊಳ್ಳಲಾಗಿತ್ತು. ‘ಈ ಘಟನೆಯಲ್ಲಿ ವಾರ್ ಮತ್ತು ಮಾನಸಿ ಇಬ್ಬರನ್ನೂ ಕಳೆದುಕೊಂಡೆವು,’ ಎಂದು ಹಿರಿಯ ಅಧಿಕಾರಿಗಳೊಬ್ಬರು ಹೇಳಿದ್ದಾರೆ.

ವಾರ್ ಅವರ ಪಾರ್ಥೀವ ಶರೀರವನ್ನು ಅವರ ಹುಟ್ಟೂರಾದ ಕುಪ್ವಾರಕ್ಕೆ ತೆಗೆದುಕೊಂಡು ಹೋಗುವ ಮುನ್ನ, ಇಲ್ಲಿನ ಸೈನ್ಯ ಶಿಬಿರದಲ್ಲಿ ಲೆ.ಜ.ಸುಬ್ರತ ಸಹಾ ಸೇರಿ ಸೈನ್ಯಾಧಿಕಾರಿಗಳು ಅಂತಿಮ ನಮನ ಸಲ್ಲಿಸಿ, ಮಾನಸಿ ಮತ್ತು ವಾರ್ ‌ತೋರಿದ ಸಾಹಸವನ್ನು ಪ್ರಶಂಸಿದರು.

ಮಾನಸಿ ಕಳೇಬರವನ್ನು ವಶಪಡಿಸಿಕೊಂಡು, ಮರಣೋತ್ತರ ಪರೀಕ್ಷೆ ನಡೆಸಿ, ಸಕಲ ಗೌರವಗಳೊಂದಿಗೆ ಉತ್ತರ ಕಾಶ್ಮೀರದ ತ್ರೆಹ್ಗಮ್‌ನಲ್ಲಿ ಅಂತಿಮ ಸಂಸ್ಕಾರ ನಡೆಸಲಾಯಿತು.

ಮಾನಸಿ ಮತ್ತು ವಾರ್ ಜೋಡಿ ಇದೇ ವರ್ಷದ ಮೇ 25ರಂದು ತಂಗ್ದರ್‌ನಲ್ಲಿ ಒಬ್ಬ ಉಗ್ರನನ್ನು ಕೊಂದ ಕಾರ್ಯಾಚರಣೆ ಹಾಗೂ ಜು.21ರಂದು ಇದೇ ಪ್ರದೇಶದಲ್ಲಿ ಇಬ್ಬರು ಉಗ್ರವಾದಿಗಳನ್ನು ಕೊಲ್ಲುವಲ್ಲಿಯೂ ಭಾಗಿಯಾಗಿದ್ದರು.

Write A Comment