ಮೈಸೂರು, ಆ.10-ವಿರಾಜಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ಬೆದರಿಸಿ ಸುಲಿಗೆ ಮಾಡುತ್ತಿದ್ದ 7 ಮಂದಿ ಸುಲಿಗೆಕೋರರನ್ನು ಜಿಲ್ಲಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್‌ಖರೆ ಅವರು ಈ ವಿಷಯ ತಿಳಿಸಿದರು.ಕಾರ್ತಿಕ್ (23), ರವೀಶ್ (24), ಮಂಜುನಾಥ್ (21), ವೆಂಕಟೇಶ್ (24), ಪ್ರಸನ್ನ (19) ಬಂಧಿತ ಆರೋಪಿಗಳು.
ಬಂಧಿತರಿಂದ 4 ದ್ವಿಚಕ್ರ ವಾಹನಗಳು ಸೇರಿದಂತೆ ನಗದು, ಕೃತ್ಯಕ್ಕೆ ಬಳಸಲಾಗುತ್ತಿದ್ದ ಮೊಬೈಲ್‌ಗಳು, ಲಾಂಗು, ಮಚ್ಚುಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಗೆ ಒಳಪಡಿಸಲಾಗಿದೆ ಎಂದರು.ಈ ಆರೋಪಿಗಳು ಹಗಲಿನಲ್ಲಿ ನಗರದ ಕಾರ್ಖಾನೆಯೊಂದರಲ್ಲಿ ಕೆಲಸ ನಿರ್ವಹಿಸಿ, ರಾತ್ರಿಯಾಗುತ್ತಿದ್ದಂತೆ ಸುಲಿಗೆಗೆ ಕೈ ಹಾಕುತ್ತಿದ್ದರು ಎನ್ನಲಾಗಿದೆ.ರಸ್ತೆಯ ಬದಿ ಹೊಂಚುಹಾಕಿ ಕುಳಿತು ಹಂಪ್ಸ್ ಬಳಿ ವಾಹನಗಳ ವೇಗ ಕಡಿಮೆಯಾದ ಸಂದರ್ಭವನ್ನು ಗಮನಿಸಿ ಕೂಡಲೇ ಒಬ್ಬ ಹೋಗಿ ಕಾರಿನ ಅಡ್ಡ ನಿಲ್ಲುತ್ತಿದ್ದ. ನಂತರ ಎಲ್ಲರೂ ಹೋಗಿ ಕಾರನ್ನು ಮುತ್ತಿಗೆ ಹಾಕಿ ಸುಲಿಗೆ ಮಾಡುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.ಇವರನ್ನು ಮೊಬೈಲ್ ನೆಟ್‌ವರ್ಕ್ ಹಾಗೂ ಸ್ಥಳೀಯರ ಸೂಕ್ತ ಮಾಹಿತಿಯೊಂದಿಗೆ ಬಂಧಿಸಲು ಯಶಸ್ವಿಯಾಗಿದ್ದೇವೆ ಎಂದು ತಿಳಿಸಿದರು.ಈ ಕುರಿತಂತೆ ಹುಣಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೇಳಿದರು.