ಕುಂದಾಪುರ, ಆ.11: ಮೊಬೈಲ್ ಟವರ್ ಏರಿದ ವ್ಯಕ್ತಿಯೋರ್ವ ತಾನು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ ಘಟನೆಯೊಂದು ಕುಂದಾಪುರ ವಂಡ್ಸೆಯಲ್ಲಿ ನಡೆದಿದೆ.
ಬಾವಿ ಕೆಲಸ ಮಾಡುತ್ತಿದ್ದ ಕೇರಳದ ಕೊಲ್ಲಂ ನಿವಾಸಿ ಬಿಜು(28) ಎಂಬಾತ ವಂಡ್ಸೆಯಲ್ಲಿನ ಸುಮಾರು 400 ಅಡಿಗೂ ಎತ್ತರದ ಮೊಬೈಲ್ ಟವರ್‌ಗೆ ಹತ್ತಿ ಅಲ್ಲಿಂದ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿ ರಾದ್ಧಾಂತ ಸೃಷ್ಟಿಸಿದ್ದ.
ಸುಮಾರು 14 ವರ್ಷಗಳಿಂದ ಉಡುಪಿ ಜಿಲ್ಲೆಯ ಹಲವು ಕಡೆಗಳಲ್ಲಿ ಬಾವಿಗೆ ರಿಂಗ್ ಹಾಕುವ ಕೆಲಸ ಮಾಡಿಕೊಂಡಿದ್ದ ಬಿಜುಗೆ ಕಳೆದ ಒಂದು ವರ್ಷದಿಂದ ಸ್ವಂತವಾಗಿ ಬಾವಿಗೆ ರಿಂಗ್ ಹಾಕುವ ಕೆಲಸ ಮಾಡುತ್ತಿದ್ದ. ಅದಕ್ಕೂ ಮೊದಲು ಶಶಿಧರ್ ಎಂಬವರೊಂದಿಗೆ ಕೆಲಸ ಮಾಡುತ್ತಿದ್ದ ವೇಳೆ ಒಂದು ವರ್ಷದ ಸಂಬಳ ಸುಮಾರು 70 ಸಾವಿರ ರೂ. ವರೆಗೆ ಕೊಡಲು ಬಾಕಿ ಇತ್ತು ಎನ್ನಲಾಗಿದೆ.
ಇದಕ್ಕಾಗಿ ಹಲವು ಬಾರಿ ಶಶಿಧರ್‌ರೊಂದಿಗೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರೂ, ಸಿಗದ ಕಾರಣ ನೊಂದ ಬಿಜು ಸಂಬಳ ಕೊಡದಿದ್ದರೆ ಮೊಬೈಲ್ ಟವರ್‌ನಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದ.
ಈ ವೇಳೆ ಸುದ್ದಿ ತಿಳಿದ ಕುಂದಾಪುರ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಹಾಗೂ ಕೊಲ್ಲೂರು ಪೊಲೀಸರು ಹಾಗೂ ಶಶಿಧರ್ ಸ್ಥಳಕ್ಕಾಗಮಿಸಿದರು. ಅಗ್ನಿ ಶಾಮಕ ದಳದ ಮೂವರು ಸಿಬ್ಬಂದಿಗಳು ಮೊಬೈಲ್ ಟವರ್ ಹತ್ತಿ ಬಿಜುರ ಮನವೊಲಿಸಿ ಮೊಬೈಲ್ ಟವರ್‌ನಿಂದ ಕೆಳಗಿಳಿಸುವಲ್ಲಿ ಕೊನೆಗೂ ಯಶಸ್ವಿಯಾದರು. ಅಸ್ವಸ್ಥಗೊಂಡಿದ್ದ ಬಿಜುರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೂಡ ನೀಡಲಾಯಿತು.