ಬೆಂಗಳೂರು: ಬೆಟ್ಟದಾ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿದೊಡೆಂತಯ್ಯಾ? ಎಂಬ ಅಕ್ಕನ ವಚನ ನೆನೆಯಬೇಕೋ? ಅಥವಾ ಈ ನಟರ ಪಾಡಿಗೆ ಅಯ್ಯೋ ಎನಬೇಕೋ? ಒಟ್ಟಿನಲ್ಲಿ ತಮ್ಮ ಸ್ಟಾರ್ ಗಿರಿ ಇವರಿಗೆ ಕಿರಿಕಿರಿ ತಂದಿದೆಯಂತೆ.
ಇತ್ತೀಚೆಗೆ ಹಾಸ್ಯ ನಟ ಚಿಕ್ಕಣ್ಣ ತಮ್ಮ ಫೇಸ್ ಬುಕ್ ಪುಟವನ್ನು ಸ್ಥಗಿತಗೊಳಿಸಿದರು, ಕಾರಣ ಇವರ ಹೆಸರಿನಲ್ಲಿ ಅಭಿಮಾನಿಗಳ ಪುಟ ನಡೆಸುತ್ತಿದ್ದವನೊಬ್ಬ ಯುವತಿಯರ ದಾರಿ ತಪ್ಪಿಸುತ್ತಿದ್ದ ಎಂದು ಆರೋಪ ಕೇಳಿ ಬಂದಿತ್ತು ಹಾಗೂ ಅವನ ವಿರುದ್ಧ ಸೈಬರ್ ಪೊಲೀಸರು ಕ್ರಮ ಕೈಗೊಂಡಿದ್ದರು. ಈಗ ಕಿರಿಕಿರಿ ಅನುಭವಿಸುವ ಸರದಿ ‘ಉಳಿದವರು ಕಂಡಂತೆ’ ಖ್ಯಾತಿಯ ನಟ ರಕ್ಷಿತ್ ಶೆಟ್ಟಿ ಅವರದ್ದು. ಇವರ ಸಿನೆಮಾ ‘ಸಿಂಪಲ್ ಆಗೊಂದ್ ಲವ್ ಸ್ಟೋರಿ’ ಹೆಸರಿನಲ್ಲಿ ಫೇಸ್ ಬುಕ್ ಪುಟ ತೆರೆದಿದ್ದ ಅಭಿಮಾನಿಯೊಬ್ಬ ಈಗ ತಾನೇ ರಕ್ಷಿತ್ ಶೆಟ್ಟಿ ಎಂದು ಹೇಳಿಕೊಂಡು ಯುವತಿಯರ ಜೊತೆ ಲಲ್ಲೆ ಹೊಡೆಯುತ್ತಿದ್ದನಂತೆ.
ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯವಾಗಿರುವ ರಕ್ಷಿತ್ ಶೆಟ್ಟಿ ಕೂಡಲೆ ಕ್ರಮ ಕೈಗೊಂಡಿದ್ದು, ತನ್ನ ಅಧಿಕೃತ ಪುಟ ಹಾಗು ಈ ನಕಲಿ ಪುಟದ ಮೇಲೆ ಈಗಾಗಲೇ ಸ್ಪಷ್ಟೀಕರಣ ನೀಡಿದ್ದಾರಂತೆ. ತನ್ನ ಹೆಸರಿನಲ್ಲಿ ಇನ್ನೂ ಹಲವಾರು ನಕಲಿ ಪುಟಗಳನ್ನು ತೆರೆದಿದ್ದು ಇದನ್ನು ಫೇಸ್ ಬುಕ್ ಗೆ ಕೂಡ ತಿಳಿಸಿದ್ದಾರಂತೆ.
“ಈ ನಕಲಿ ಫೇಸ್ ಬುಕ್ ಅಕೌಂಟ್ ಹೊಂದಿದ್ದ ವ್ಯಕ್ತಿಯೊಂದಿಗೆ ಚಾಟ್ ಮಾಡುತ್ತಿದ್ದವರೊಬ್ಬರು ನನ್ನ ಗಮನಕ್ಕೆ ತಂದರು. ನಾನು ಕೂಡಲೆ ಕ್ರಮ ಕೈಗೊಂಡೆ. ಇದರ ಬಗ್ಗೆ ನನ್ನ ಗೆಳೆಯ ರಿಷಬ್ ಶೆಟ್ಟಿ ಗೆ ಕೂಡ ತಿಳಿಯಿತು. ಈ ನಕಲಿ ಅಕೌಂಟ್ ದಾತ ನೊಂದಿಗೆ ಎಷ್ಟೋ ಜನ ತಿಳಿಯದ ಮುಗ್ಧರು ಅದು ನಾನೇ ಎಂದು ತಪ್ಪು ತಿಳಿದು ಚಾಟ್ ಮಾಡುತ್ತಾರೆ. ಇದು ನನಗೆ ಬೇಸರವಾಗಿದೆ” ಎನ್ನುತಾರೆ ರಕ್ಷಿತ್ ಶೆಟ್ಟಿ.