ಜಕಾರ್ತಾ: ಭಾರತ ಹಾಗೂ ಇಂಡೋನೇಷಿಯಾದ ಲೇಖಕರು, ಪುಸ್ತಕವೊಂದನ್ನು ಬರೆದಿದ್ದು ಎರಡು ದೇಶಗಳಲ್ಲಿರುವ ಸಮಾನವಾದ ಪರಂಪರೆಯ ಬಗ್ಗೆ ಪ್ರಸ್ತಾಪಿಸಲಾಗಿದೆ. ಈ ಪುಸ್ತಕದಲ್ಲಿ ಒಂದೇ ವಿಷಯದ ಬಗ್ಗೆ ಭಾರತ ಹಾಗೂ ಇಂಡೋನೇಷಿಯಾ ಚಿಂತನೆಗಳ ಬಗ್ಗೆ ವಿಶ್ಲೇಷಣೆ ಮಾಡಲಾಗಿದೆ.
ಇಂಡೋನೇಷಿಯಾದಲ್ಲಿರುವ ಭಾರತದ ರಾಯಭಾರಿ ಗುರ್ಜಿತ್ ಸಿಂಗ್ “ಮಸಾಲಾ ಬುಂಬು” ಎಂಬ ಪುಸ್ತಕವನ್ನು ಸಂಪಾದಿಸಿದ್ದು, ಇದರಲ್ಲಿ ಒ೦ದೇ ತರಹದ ವಿಷಯಗಳ ಬಗ್ಗೆ ಇಂಡೋನೇಶಿಯಾ ಹಾಗೂ ಭಾರತದ ದೃಷ್ಟಿಕೋನದ ಬಗ್ಗೆ ಪ್ರಸ್ತಾಪಿಸಲಾಗಿದೆ. ಭಾರತ- ಇಂಡೋನೇಶಿಯಾದಲ್ಲಿ ಒಂದೇ ರೀತಿಯ ವಿಷಯಗಳಿದ್ದರೂ ಅದರೆಡೆಗೆ ವಿಭಿನ್ನವಾಗಿಯೇ ನೋಡುತ್ತೇವೆ ಅದಕ್ಕಾಗಿಯೇ ಈ ಪುಸ್ತಕಕ್ಕೆ ಮಸಾಲಾ ಬುಂಬು ಎಂಬ ಹೆಸರು ನೀಡಿರುವುದಾಗಿ ಗುರ್ಜಿತ್ ಸಿಂಗ್ ಹೇಳಿದ್ದಾರೆ.
ಹಿಂದಿಯಲ್ಲಿ ಮಸಾಲೆ ಎಂಬುದನ್ನು ಇಂಡೋನೇಶಿಯಾದ ಅಧಿಕೃತ ಭಾಷೆ ‘ಭಾಷಾ’ದಲ್ಲಿ ಬುಂಬು ಎಂದು ಹೇಳುತ್ತಾರೆ. ಗುರ್ಜಿತ್ ಸಿಂಗ್ ಸಂಪಾದಿಸಿರುವ ಪುಸ್ತಕದಲ್ಲಿ ಭದ್ರತೆ, ಸುಸ್ಥಿರ ಅಭಿವೃದ್ಧಿ, ಅಸಾಂಪ್ರದಾಯಿಕ ಬೆದರಿಕೆ, ನಾಗರಿಕ ಸಮಾಜ, ಮಾನವ ಸಂಪನ್ಮೂಲ ಅಭಿವೃದ್ಧಿ, ಸಂಸ್ಕೃತಿ ಮತ್ತು ಮಾಧ್ಯಮ ಮತ್ತು ಸಾಮಾಜಿಕ ಜವಾಬ್ದಾರಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಭಾರತ- ಇಂಡೋನೇಶಿಯಾದ ಲೇಖಕರು ತಮ್ಮ ನಿಲುವುಗಳನ್ನು ಚರ್ಚಿಸಿದ್ದಾರೆ.
ಜಕಾರ್ತಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಈ ಪುಸ್ತಕ ಬಿಡುಗಡೆಯಾಗಿದ್ದು ಕಾರ್ಯನೀತಿ ರೂಪಿಸುವವರು, ಪತ್ರಕರ್ತರು, ಅಂತರರಾಷ್ಟ್ರೀಯ ಅಧ್ಯಯನದ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಲಿದೆ. ಮುಂದಿನ ದಶಕಲಗಳಲ್ಲಿ ಭಾರತ- ಇಂಡೋನೇಶಿಯಾ ದೇಶಗಳು ಬಗೆಹರಿಸಬೇಕಾದ ವಿಷಯಗಳಿಗೆ ಈ ಪುಸ್ತಕ ಸಹಕಾರಿಯಾಗಲಿದೆ ಎಂದು ಅನೇಕ ಗಣ್ಯರು ಅಭಿಪ್ರಾಯಪಟ್ಟಿದ್ದಾರೆ.