ಕರ್ನಾಟಕ

ಪತ್ನಿಗೆ ಚಾಕುವಿನಿಂದ ಇರಿದ ಪತಿ ರೈಲಿಗೆ ತಲೆ ಕೊಟ್ಟ

Pinterest LinkedIn Tumblr

Murder

ಬೆಂಗಳೂರು: ಪತ್ನಿಗೆ ಚಾಕುವಿನಿಂದ ಇರಿದು ಮನೆಯಿಂದ ಹೊರ ನಡೆದ ಜಾನ್ ಅಲಿಯಾಸ್ ಜಾನ್ಸನ್‌ ಎಂಬಾತ, ತಾನೂ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.

ಸಂಪಿಗೆಹಳ್ಳಿ ಸಮೀಪದ ಅಗ್ರಹಾರಲೇಔಟ್ ನಿವಾಸಿಯಾದ ಜಾನ್‌, ತನ್ನ ಅಕ್ಕನ ಮಗಳು ಜೀವಿತಾ ಅವರನ್ನು ವರ್ಷದ ಹಿಂದೆ ಪ್ರೇಮ ವಿವಾಹವಾಗಿದ್ದ. ದಂಪತಿಗೆ ಒಂದು ತಿಂಗಳ ಮಗುವಿದೆ. ರಾತ್ರಿ 7.30ರ ಸುಮಾರಿಗೆ ದಂಪತಿ ನಡುವೆ ಜಗಳವಾಗಿದೆ. ಆಗ ಜಾನ್‌, ಪತ್ನಿಯ ಹೊಟ್ಟೆಗೆ ಇರಿದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಜೀವಿತಾ ಅವರ ಚೀರಾಟ ಕೇಳಿ ರಕ್ಷಣೆಗೆ ಧಾವಿಸಿದ ಸ್ಥಳೀಯರು, ಇಬ್ಬರನ್ನೂ ಸಮಾಧಾನಪಡಿಸಿದ್ದರು. ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದ ಜೀವಿತಾ, ನಂತರ ಸಂಪಿಗೆಹಳ್ಳಿ ಠಾಣೆಗೆ ತೆರಳಿ ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಕೊಲೆಯತ್ನ ಆರೋಪದಡಿ ಪ್ರಕರಣ ದಾಖಲಿಸಿದರು.

ಪತ್ನಿ ಠಾಣೆ ಮೆಟ್ಟಿಲೇರಿದ ವಿಷಯ ತಿಳಿದುಕೊಂಡ ಜಾನ್, ಶ್ರೀರಾಂಪುರ ಸಮೀಪ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾತ್ರಿ 10.30ರ ಸುಮಾರಿಗೆ ಮೃತದೇಹವನ್ನು ಕಂಡ ಸ್ಥಳೀಯರು, ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ರೈಲ್ವೆ ಸಿಬ್ಬಂದಿಯು ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ರವಾನಿಸಿದರು.

‘ನಾನು ನೆರೆಮನೆ ಯುವಕನ ಜತೆ ಅನೈತಿಕ ಸಂಬಂಧ ಹೊಂದಿದ್ದೇನೆ ಎಂದು ಸುಳ್ಳು ಆರೋಪ ಮಾಡುತ್ತಿದ್ದ ಪತಿ, ಇದೇ ವಿಚಾರವಾಗಿ ನಿತ್ಯ ಗಲಾಟೆ ಮಾಡುತ್ತಿದ್ದರು. ಸೋಮವಾರ ರಾತ್ರಿಯೂ ಇದೇ ವಿಷಯಕ್ಕೆ ಜಗಳವಾಗಿತ್ತು’ ಎಂದು ಜೀವಿತಾ ಹೇಳಿಕೆ ಕೊಟ್ಟಿದ್ದಾಗಿ ಸಂಪಿಗೇಹಳ್ಳಿ ಪೊಲೀಸರು ತಿಳಿಸಿದರು.

Write A Comment