ಲಲಿತ್ ಮೋದಿ ವಿವಾದಕ್ಕೆ ಸಂಬಂಧಿಸಿದಂತೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರ ಮಾತಿನ ವೈಖರಿಗೆ ಬಿಜೆಪಿಯ ಹಿರಿಯಜ್ಜ ಎಲ್.ಕೆ.ಆಡ್ವಾಣಿ ಅವರು ಭೇಷ್ ಎಂದಿದ್ದಾರೆ.
ಇಂದು ಲೋಕಸಭೆಯಲ್ಲಿ ಪ್ರತಿಪಕ್ಷಗಳ ತೀವ್ರ ಗದ್ದಲದ ನಡುವೆಯೂ ತಮ್ಮನ್ನು ತಾವು ಬಲವಾಗಿ ಸಮರ್ಥಿಸಿಕೊಂಡ ಸುಷ್ಮಾ ಸ್ವರಾಜ್ ತಾವಾಗಲೀ, ತಮ್ಮ ಕುಟುಂಬವಾಗಲಿ ಯಾವ ರೀತಿಯಿಂದಲೂ ಲಲಿತ್ ಮೋದಿಗೆ ಸಹಾಯ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಲ್ಲದೇ ಭೋಪಾಲ್ ಅನಿಲ ದುರಂತದ ಪ್ರಮುಖ ಆರೋಪಿ ವಾರನ್ ಆಂಡರ್ಸನ್ ನನ್ನು ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಪಲಾಯನ ಮಾಡಲು ಅವಕಾಶ ಮಾಡಿಕೊಟ್ಟಿದ್ದು ಸರಿಯೇ..? ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಚಿದಂಬರಂ ಅವರ ಪತ್ನಿ ವಾದ ಮಂಡಿಸಿದ್ದು ತಪ್ಪಲ್ಲವೇ ಎಂದು ಪ್ರಶ್ನಿಸುವ ಮೂಲಕ ಕಾಂಗ್ರೆಸ್ ಅನ್ನು ತಬ್ಬಿಬ್ಬಾಗಿಸಿದ್ದರು. ಅಷ್ಟೇ ಅಲ್ಲ, ರಾಹುಲ್ ಅವರನ್ನೂ ಕೆಣಕಿದ ಸುಷ್ಮಾ ನಿಮ್ಮ ಕುಟುಂಬದ ಇತಿಹಾಸವನ್ನು ಒಮ್ಮೆ ಓದಿ ಎನ್ನುವ ಮೂಲಕ ಟಾಂಗ್ ನೀಡಿದ್ದರು.
ಸುಷ್ಮಾ ಸ್ವರಾಜ್ ಅವರು ಸುಮಾರು 30 ನಿಮಿಷಗಳ ಕಾಲ ವಿವರವಾಗಿ ನೀಡಿದ ಸ್ಪಷ್ಟನೆ ಹಾಗೂ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅಡ್ವಾಣಿ ಉಲ್ಲಸಿತರಾದಂತೆ ಕಂಡುಬಂದರು.