ಲಲಿತ್ ಮೋದಿಗೆ ಸಹಕಾರ ನೀಡಿದ್ದಕ್ಕೆ ವಿರೋಧ ಪಕ್ಷಗಳಿಂದ ಭಾರೀ ಪ್ರತಿಭಟನೆ ಎದುರಿಸುತ್ತಿರುವ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಮ್ಮ ಮೇಲಿರುವ ಆರೋಪಗಳಿಗೆ ಸ್ಪಷ್ಟನೆ ನೀಡುವ ಮೂಲಕ ಕಾಂಗ್ರೆಸ್ ಗೆ ತಿರುಗೇಟು ನೀಡಿದ್ದಾರೆ.
ಲಲಿತ್ ಮೋದಿ ದೇಶಭ್ರಷ್ಟನಲ್ಲ. ಅಲ್ಲದೇ ನನ್ನ ಪತಿ ಆಗಲೀ, ನನ್ನ ಮಗಳಾಗಲೀ ಯಾವುದೇ ತಪ್ಪು ಮಾಡಿಲ್ಲ. ನನ್ನ ಪತಿ ಲಲಿತ್ ಮೋದಿ ಪರ ವಕೀಲರಾಗಿರಲಿಲ್ಲ. ನಾನು ಕದ್ದುಮುಚ್ಚಿ ಯಾವುದೇ ಕೆಲಸ ಮಾಡಿಲ್ಲ. ಲಲಿತ್ ಮೋದಿ ಪ್ರಕರಣದಲ್ಲಿ ನನ್ನ ಮಗಳು 9ನೇ ಜೂನಿಯರ್ ವಕೀಲೆ ಆಗಿದ್ದು ನನ್ನ ಕುಟುಂಬಸ್ಥರು ಯಾವುದೇ ಹಣ ಪಡೆದಿಲ್ಲ. ಹಾಗಾಗಿ ಕಾಂಗ್ರೆಸ್ ನಾಯಕರು ನನ್ನ ಕುಟುಂಬ ಮೇಲಿನ ಆರೋಪಗಳು ಸುಳ್ಳು ಎಂದು ಸ್ಪಷ್ಟಪಡಿಸಿದರು.
ಆದರೂ ಈ ಸ್ಪಷ್ಟನೆಗೆ ಒಪ್ಪದ ವಿಪಕ್ಷಗಳು ಪ್ರಧಾನಿ ಮೋದಿ ಸ್ಪಷ್ಟನೆ ನೀಡುವಂತೆ ಆಗ್ರಹಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದು ಇದರಿಂದ ಆಕ್ರೋಶಗೊಂಡ ಸುಷ್ಮಾ ಸ್ವರಾಜ್ ನಾನು ಕ್ಯಾನ್ಸರ್ ಪೀಡಿತ ಲಲಿತ್ ಮೋದಿಯ ಪತ್ನಿಗೆ ಸಹಾಯ ಮಾಡಿದ್ದೇನೆ. ಸಹಾಯ ಮಾಡಿದ್ದು ತಪ್ಪೇ ಎಂದು ಅವರು ಸದಸ್ಯರನ್ನು ಪ್ರಶ್ನಿಸಿದರಲ್ಲದೇ ರಾಹುಲ್ ಗಾಂಧಿ ತಮ್ಮ ಪರಿವಾರದ ಇತಿಹಾಸವನ್ನು ಅರ್ಥಮಾಡಿಕೊಳ್ಳಲಿ ಎಂದು ಕಿಡಿಕಾರಿದರು.
ಅಷ್ಟೇ ಅಲ್ಲ, ಗಾಂಧಿ ಕುಟುಂಬಸ್ಥರು ಹಲವು ವರ್ಷಗಳ ಕಾಲ ಜೈಲಿನಲ್ಲಿದ್ದರು. ಭೋಪಾಲ್ ಅನಿಲ ದುರಂತದ ಆರೋಪಿ ಬಳಿ ಎಷ್ಟು ಹಣ ಪಡೆದಿದ್ದಾರೆ ಎಂದು ತಮ್ಮ ತಾಯಿಯಿಂದ ಕೇಳಿ ತಿಳಿದುಕೊಳ್ಳಲಿ. ನಾನು ಮಾನವೀಯತೆ ದೃಷ್ಟಿಯಿಂದ ಕ್ಯಾನ್ಸರ್ ಪೀಡಿತ ಮಹಿಳೆಗೆ ಸಹಾಯ ಮಾಡಿದ್ದೇನೆ. ಆದರೆ ಕಾಂಗ್ರೆಸ್ ಯಾವ ದೃಷ್ಟಿಯಿಂದ ಭೋಪಾಲ್ ಅನಿಲ ದುರಂತದ ಆರೋಪಿಯನ್ನು ರಕ್ಷಿಸುತ್ತಿದೆ ಎಂದು ಖಾರವಾಗಿ ಪ್ರಶ್ನಿಸುವ ಮೂಲಕ ಕಾಂಗ್ರೆಸ್ ಸದಸ್ಯರ ಬಾಯಿ ಮುಚ್ಚಿಸುವಲ್ಲಿ ಸಫಲರಾದರು.