ಇದೊಂದು ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದ್ದು, ನೋಡುಗರನ್ನು ಬೆಚ್ಚಿ ಬೀಳಿಸುತ್ತದೆ. ಕೇವಲ 6 ವರ್ಷದ ಪುಟ್ಟ ಕಂದಮ್ಮನಿಗೆ ಆತನ ಮಾದಕ ವ್ಯಸನಿ ತಂದೆ ನೀಡಿರುವ ಶಿಕ್ಷೆ ಎಂತವರ ಕರುಳು ಚುರುಕ್ಕೆನ್ನಿಸುವಂತೆ ಮಾಡುತ್ತದೆ.
ಈ ಘಟನೆ ನಡೆದಿರುವುದು ಥಾಯ್ಲೆಂಡಿನಲ್ಲಿ. ಕೆಲಸ ಕಳೆದುಕೊಂಡಿದ್ದ 30 ವರ್ಷದ ನಿರುದ್ಯೋಗಿ ತಂದೆಯೊಬ್ಬ ಅದೇ ಹತಾಶೆಯಲ್ಲಿ ಮದ್ಯ ಹಾಗೂ ಮಾದಕ ವಸ್ತುಗಳ ದಾಸನಾಗಿದ್ದಾನೆ. ತನ್ನ 6 ವರ್ಷದ ಮಗನಿಗೆ ಪಾಠ ಹೇಳಿ ಕೊಡಲು ಮುಂದಾದ ಈ ಪಾಪಿ, ಚಿಕ್ಕ ಮಗು ಸರಿಯಾಗಿ ಹೇಳದಿದ್ದ ವೇಳೆ ಕಾಲಿನಿಂದ ಜಾಡಿಸಿ ಜಾಡಿಸಿ ಒದ್ದಿದ್ದಾನೆ.
ಪ್ರತಿ ನಿತ್ಯವೂ ಮನೆಯಲ್ಲಿ ಈ ಘಟನೆ ಮರುಕಳಿಸುತ್ತಿದ್ದುದರಿಂದ ನೊಂದ ತಾಯಿ, ನೇರವಾಗಿ ಪೊಲೀಸರ ಬಳಿ ಹೋಗಿ ದೂರು ನೀಡಲು ಧೈರ್ಯ ಸಾಲದೆ ಗುಟ್ಟಾಗಿ ಗಂಡನ ಕೃತ್ಯವನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾಳೆ. ಬಳಿಕ ಇದನ್ನು ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಹಾಕಿದ್ದು, ಇದನ್ನು ನೋಡುತ್ತಿದ್ದಂತೆಯೇ ಫೇಸ್ ಬುಕ್ ಬಳಕೆದಾರರ ಆಕ್ರೋಶ ಹೆಚ್ಚಾಗಿ ಆರೋಪಿ ತಂದೆಯನ್ನು ಬಂಧಿಸುವಂತೆ ಆಂದೋಲನವನ್ನೇ ಶುರು ಮಾಡಿದ್ದಾರೆ. ಕೊನೆಗೂ ಈ ಪಾಪಿ ತಂದೆಯನ್ನು ಪತ್ತೆ ಹಚ್ಚಿರುವ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಮದ್ಯ ಹಾಗೂ ಮಾದಕ ವಸ್ತುವಿನ ನಶೆ ಇಳಿದ ಬಳಿಕ ತನ್ನ ತಪ್ಪಿನ ಅರಿವಾಗಿರುವ ತಂದೆ, ಮಗನನ್ನು ಈ ಪರಿ ಥಳಿಸಿರುವುದಕ್ಕೆ ಪಶ್ಚಾತಾಪ ಪಡುತ್ತಿದ್ದಾನೆ. ಅಲ್ಲದೇ ಕೆಲಸವಿಲ್ಲದೇ ತಾನು ಹತಾಶನಾಗಿ ಮಾದಕ ವಸ್ತುಗಳ ವ್ಯಸನಿಯಾಗಿದ್ದೇನೆಂದು ಪೊಲೀಸರ ಬಳಿ ಹೇಳಿಕೆ ನೀಡಿದ್ದಾನೆ. ಸಾಮಾಜಿಕ ಜಾಲ ತಾಣ ಫೇಸ್ ಬುಕ್ ಇತ್ತೀಚೆಗೆ ದುರ್ಬಳಕೆಗೊಳಗಾಗುತ್ತಿರುವ ಕುರಿತೇ ಹೆಚ್ಚು ವರದಿಗಳು ಬರುತ್ತಿರುವ ಮಧ್ಯೆ ಇದೇ ಫೇಸ್ ಬುಕ್ ನಿಂದ ಮುಗ್ದ ಮಗುವೊಂದು ಕ್ರೂರ ಶಿಕ್ಷೆಯಿಂದ ಬಚಾವಾಗುವಂತಾಗಿದೆ. ತನ್ನ ಮಗನನ್ನು ನಿಷ್ಕರುಣಿಯಾಗಿ ಥಳಿಸುತ್ತಿರುವ ತಂದೆಯ ಈ ವಿಡಿಯೋವನ್ನು ಇದೇ ಪುಟದ ಕೆಳ ಭಾಗದಲ್ಲಿರುವ ‘ಕನ್ನಡ ದುನಿಯಾ’ ದ ವಿಡಿಯೋ ವಿಭಾಗದಲ್ಲಿ ವೀಕ್ಷಿಸಬಹುದಾಗಿದೆ.