ಮೈಸೂರು: ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಹಬ್ಬವನ್ನು ಸರಳವಾಗಿ ಆಚರಿಸಲು ರಾಜ್ಯಸರ್ಕಾರ ತೀರ್ಮಾನ ತೆಗೆದುಕೊಂಡಿರುವುದು ಸರಿಯಷ್ಟೇ.
ಆದರೆ ಸರಳವಾಗಿ ನಾಡಹಬ್ಬ ದಸರಾ ಆಚರಿಸುವುದರಿಂದ ಕೆಲವರಿಗೆ ಸಂಕಷ್ಟ ಎದುರಾಗುತ್ತದೆ. ದಸರಾ ಸರಳವಾಗಿ ಆಚರಿಸಿದರೆ ಸೌತೆಕಾಯಿ, ಕಡ್ಲೇಕಾಯಿ, ಸೊಪ್ಪು ಮಾರುವವರು ಮಾತ್ರವಲ್ಲ, ಹೋಟೆಲ್, ಪ್ರವಾಸೋದ್ಯಮಕ್ಕೂ ನಷ್ಟವಾಗುತ್ತದೆ. ದಸರಾ ಹಬ್ಬದಲ್ಲಿ ಮಾಡುವ ವ್ಯಾಪಾರ ವಹಿವಾಟಿನಿಂದ ಅವರೆಲ್ಲರ ಒಂದು ವರ್ಷದ ಊಟಕ್ಕೆ ದಾರಿಯಾಗುತ್ತದೆ. ಆರ್ಥಿಕ ಬಲಹೆಚ್ಚುತ್ತದೆ. ಇಲ್ಲದಿದ್ದರೆ ಅವರಿಗೆಲ್ಲ ತೊಂದರೆಯಾಗುತ್ತದೆ.
ಹೀಗೆಂದು ಹೇಳಿದ್ದು, ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಹೆಚ್. ವಿಶ್ವನಾಥ್. ನಾಡಿಗೆ ಎದುರಾಗಿರುವ ಸಂಕಷ್ಟ ದೂರವಾಗಬೇಕಾದರೆ ನಾಡದೇವತೆ ಹಬ್ಬವನ್ನು ಎಂದಿನಂತೆ ಆಚರಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. ರೈತರಲ್ಲಿ ಆತ್ಮವಿಶ್ವಾಸ ತುಂಬಲು ಪ್ರಾಯೋಜಕತ್ವದ ನೆರವಿನಿಂದ ಹಬ್ಬ ಆಚರಿಸಬಹುದು. 2003ರಲ್ಲಿ ನಾನು ಉಸ್ತುವಾರಿ ಸಚಿವನಾಗಿದ್ದಾಗ ಇದೇ ರೀತಿ ದಸರಾ ಆಚರಿಸಿ 1.4 ಕೋಟಿ ರೂ. ಉಳಿತಾಯವಾಗಿತ್ತು ಎಂದು ಅವರು ತಿಳಿಸಿದ್ದಾರೆ.