ಕನ್ನಡ ವಾರ್ತೆಗಳು

ನೆಹರೂ ಅವರ 125ನೇ ಜಯಂತಿ ಆಚರಣೆ: ಕಾರ್ಯಕ್ರಮದ ಲಾಂಛನ ಬಿಡುಗಡೆ.

Pinterest LinkedIn Tumblr

vv_logo_photo

ಕೊಣಾಜೆ, ಆಗಸ್ಟ್.13: ಜವಾಹರ್‌ಲಾಲ್ ನೆಹರೂ ಅವರ 125ನೆ ವರ್ಷದ ಜನ್ಮ ದಿನಾಚರಣೆ ಅಂಗವಾಗಿ ಮಂಗಳೂರು ವಿವಿಯ ನೆಹರೂ ಚಿಂತನಾ ಕೇಂದ್ರದ ಆಶ್ರಯದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಇದರ ಪೂರ್ವ ಭಾವಿಯಾಗಿ ಲಾಂಛನ ಬಿಡುಗಡೆ ಕಾರ್ಯಕ್ರಮವು ಮಂಗಳೂರು ವಿವಿಯ ಸಿಂಡಿಕೇಟ್ ಸಭಾಂಗಣದಲ್ಲಿ ನಡೆಯಿತು.

ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ.ಭೈರಪ್ಪ, ನೆಹರೂ ಚಿಂತನಾ ಕೇಂದ್ರದ ಆಶ್ರಯದಲ್ಲಿ ನೆಹರೂ ಅವರ 125ನೆ ಜನ್ಮದಿನಾಚರಣೆಯ ಅಂಗವಾಗಿ ಅಂತಾರಾಷ್ಟ್ರೀಯ ಸಮ್ಮೇಳನ, ಮಕ್ಕಳ ಅಂತಾರಾಷ್ಟ್ರೀಯ ಚಿತ್ರೋತ್ಸವ ಕಾರ್ಯಕ್ರಮ, ನೆಹರೂ ಪುಸ್ತಕ ಪ್ರದರ್ಶನ, ಸ್ಪರ್ಧೆಗಳು ಹೀಗೆ ಹಲವು ಕಾರ್ಯಕ್ರಮಗಳು ನಡೆಯಲಿದೆ ಎಂದರು.

ನೆಹರೂ ಚಿಂತನಾ ಕೇಂದ್ರಕ್ಕೆ ಈಗಾಗಲೇ 3 ಕೋಟಿ ರೂ.ಅನುದಾನ ಮಂಜೂರುಗೊಂಡಿದ್ದು, ಪ್ರತಿವರ್ಷ ಇದರ ಬಡ್ಡಿಯ ಹಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ ಎಂದು ಪ್ರೊ.ಕೆ.ಭೈರಪ್ಪ ಹೇಳಿದರು. ನೆಹರೂ ಚಿಂತನಾ ಕೇಂದ್ರದ ಆಶ್ರಯದಲ್ಲಿ ನಡೆಯಲಿರುವ ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡಿದ ಕಾರ್ಯಕ್ರಮದ ಸಂಯೋಜಕ ಪ್ರೊ. ರಾಜಾರಾಂ ತೋಳ್ಪಾಡಿ, ನವೆಂಬರ್ ಮೂರನೆ ವಾರದಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, ಅಂತಾರಾಷ್ಟ್ರೀಯ ಮಕ್ಕಳ ಸಮ್ಮೇಳನ, ಅಂತರ್‌ಕಾಲೇಜು ರಸಪ್ರಶ್ನೆ ಕಾರ್ಯಕ್ರಮ ಹಾಗೂ ನೆಹರೂ ಕುರಿತಾದ ಪುಸ್ತಕ ಪ್ರದರ್ಶನ ಕಾರ್ಯಕ್ರಮ ನಡೆಯಲಿವೆ ಎಂದರು.

ಈ ಸಂದರ್ಭ ಮಂಗಳೂರು ವಿವಿ ಕುಲಸಚಿವ ಪ್ರೊ. ಪಿ.ಎಸ್.ಯಡಪಡಿತ್ತಾಯ, ಪರೀಕ್ಷಾಂಗ ಕುಲಸಚಿವ ಪ್ರೊ. ನಾರಾಯಣ್, ಹಣಕಾಸು ಅಧಿಕಾರಿ ಪ್ರೊ.ರೇಗೋ, ಮಾಜಿ ಸಿಂಡಿಕೇಟ್ ಸದಸ್ಯ ಪಿ.ವಿ.ಮೋಹನ್, ಪ್ರೊ. ಪಿ.ಎಲ್ ಧರ್ಮ ಉಪಸ್ಥಿತರಿದ್ದರು.

Write A Comment