ಮೆಲ್ಬೊರ್ನ್: ಇದೊಂದು ವಿಚಿತ್ರ ಪ್ರಯೋಗ. ಕಲೆ, ವಿಜ್ಞಾನ ಮತ್ತು ತಂತ್ರಜ್ಞಾನಗಳ ಸಮಾಗಮ. ಆಸ್ಟ್ರೇಲಿಯಾದ ಕಲಾವಿದನೊಬ್ಬ ಕೈಯಲ್ಲಿ ಕಿವಿಯೊಂದನ್ನು ಬೆಳೆಸಿಕೊಂಡು, ‘ವಿಶ್ವದ ಯಾವುದೋ ಮೂಲೆಯಿಂದಲೂ ಇಂಟರ್ನೆಟ್ ಸಹಾಯದಿಂದ ಕೇಳಿಸಿಕೊಳ್ಳಬಹುದಾದ ಸಾಧನ’ವೊಂದನ್ನು ಅಳವಡಿಸಿಕೊಂಡಿದ್ದಾನೆ!
ಸುಮಾರು 20 ವರ್ಷಗಳ ಹಿಂದೆಯೇ ರೂಪುಗೊಂಡ ಇಂಥದ್ದೊಂದು ಯೋಜನೆಯನ್ನು ಕರ್ಟಿನ್ ವಿವಿಯ ‘ಪರ್ಯಾಯ ಅಂಗಾಂಗಗಳ ಪ್ರಯೋಗಾಲಯ’ದ ಮುಖ್ಯಸ್ಥ, ಕಲಾವಿದ ಸ್ಟೆಲಾರ್ಕ್ ಅವರು ಕಾರ್ಯಗತಗೊಳಿಸಿದ್ದಾರೆ. ಇದಕ್ಕವರು ಅಂತಾರಾಷ್ಟ್ರೀಯ ತಜ್ಞ ವೈದ್ಯರ ಸಹಾಯ ಪಡೆದಿದ್ದಾರೆ. ಕಿವಿಯಾಕಾರದ ಸಾಧನವೊಂದನ್ನು ತಜ್ಞರು ಸ್ಟೆಲಾರ್ಕ್ ಕೈಯೊಳಗೆ ಅಳವಡಿಸಿದ್ದಾರೆ. ಐದಾರು ತಿಂಗಳಲ್ಲಿ ಈ ರಚನೆಯ ಸುತ್ತ ಅಂಗಾಂಶಗಳು ಬೆಳೆದುಕೊಂಡು, ಅದಕ್ಕೆ ರಕ್ತ ಸಂಚಾರವೂ ಲಭ್ಯವಾಯಿತು.
‘ಇದೀಗ ಈ ಕಿವಿ ನನ್ನ ಕೈನ ಭಾಗವಾಗಿದೆ. ಇದಕ್ಕೆ ರಕ್ತ ಸಂಚಾರವೂ ಆಗುತ್ತಿದೆ,’ ಎನ್ನುವ ಸ್ಟೆಲಾರ್ಕ್, ಈ ಕಿವಿಯನ್ನು ಕೈಯಿಂದ ಎದ್ದು ಕಾಣುವಂತೆ ಮಾಡಿ 3ಡಿ ಆಕಾರದಲ್ಲಿ ರೂಪಿಸಲು ಮತ್ತು ತನ್ನದೇ ಸ್ಟೆಮ್ ಸೆಲ್ಗಳನ್ನು ಬಳಸಿ ಕಿವಿಯ ಹಾಲೆ (ಇಯರ್ ಲೋಬ್) ರಚಿಸುವ ಇರಾದೆಯಲ್ಲಿದ್ದಾರೆ.
ಈ ಕಿವಿಯೊಳಗೆ ಸೂಕ್ಷ್ಮಗಾತ್ರದ ಮೈಕ್ರೋಫೋನ್ ಒಂದನ್ನು ವೈರ್ ಇಲ್ಲದೆ ಕೂರಿಸಲಾಗುತ್ತದೆ. ಈ ರಿಮೋಟ್ ಲಿಸನಿಂಗ್ ಡಿವೈಸ್ನಿಂದ ವಿಶ್ವದ ಯಾವುದೇ ಭಾಗದಲ್ಲಿರುವ ವ್ಯಕ್ತಿ ಜಿಪಿಎಸ್ ಸಹಾಯದಿಂದ ಸ್ಟೆಲಾರ್ಕ್ ಚಲನವಲನಗಳನ್ನು ತಿಳಿಯಬಹುದು, ಅವರ ಮಾತುಗಳನ್ನು ಕೇಳಬಹುದು, ಅವರು ಯಾವುದಾದರೂ ಕಾರ್ಯಕ್ರಮಕ್ಕೆ ಹೋಗಿದ್ದರೆ ಧ್ವನಿಯನ್ನು ಆಲಿಸಬಹುದಾಗಿದೆ.
‘ಜನರು ಇಂಟರ್ನೆಟ್ನೊಂದಿಗೆ ಅನೇಕ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ನ್ಯೂಯಾರ್ಕ್ನಲ್ಲಿರುವ ಯಾರದ್ದೋ ಧ್ವನಿಯನ್ನು ಇನ್ನೆಲ್ಲೋ ಕೇಳಿಸಿಕೊಳ್ಳಬಹುದು, ಲಂಡನ್ನಲ್ಲಿರುವ ಯಾರನ್ನೋ ನೋಡಬಹುದು ಎಂಬುದನ್ನು ಕಲ್ಪಿಸಿಕೊಳ್ಳುವುದೇ ಒಂದು ಅದ್ಭುತ,’ ಎನ್ನುತ್ತಾರೆ ಸ್ಟೆಲಾರ್ಕ್.