ಆಷಾಢ ಮುಗಿದು ಶ್ರಾವಣ ಮಾಸ ಆರಂಭವಾಯಿತೆಂದರೆ ನೆನಪಾಗುವುದು ಹಸಿರು ಹೊದ್ದಭೂಮಿ. ಬಿಡುವಿಲ್ಲದೇ ದುಡಿಯುವ ರೈತಾಪಿ ವರ್ಗ, ತವರಿನ ದಾರಿ ಕಾಯುವ ಹೆಣ್ಣುಮಕ್ಕಳು, ಜೊತೆಗೆ ಹಬ್ಬಗಳ ಸಾಲು ಆರಂಭ. ಹೀಗೆ ಶ್ರಾವಣ ಮಾಸಕ್ಕೆ ಹಿಂದೂ ಸಂಪ್ರದಾಯದಲ್ಲಿ ವಿಶೇಷ ಸ್ಥಾನವಿದೆ.
ಶ್ರಾವಣ ಬಂದಿತೆಂದರೆ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಲಂಕಾರಗಳು ನಡೆಯಲಿದ್ದು, ಭಕ್ತರ ಸಂಖ್ಯೆಯೂ ಹೆಚ್ಚಿರುತ್ತದೆ. ಶ್ರಾವಣದಲ್ಲಿ ತಿಂಗಳಿಡಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂಬ ನಂಬಿಕೆ ಇದೆ. ಭೀಮನ ಅಮಾವಾಸ್ಯೆಯಿಂದ ಶ್ರಾವಣ ಮಾಸ ಆರಂಭವಾಗುತ್ತದೆ. ಗಣಪತಿ ಹಬ್ಬದವರೆಗೂ ಇಡೀ ತಿಂಗಳು ದಿನದಿನ ಹಬ್ಬ.
ಇಂತಹ ಶ್ರಾವಣ ಮಾಸದಲ್ಲಿ ಬರುವ ಒಂದೊಂದು ಹಬ್ಬಗಳಿಗೂ ಒಂದೊಂದು ಐತಿಹ್ಯ, ಪುರಾಣ, ಚರಿತ್ರೆ ಇದೆ. ದ್ರೌಪದಿಯ ವಸ್ತ್ರಾಪಹರಣಕ್ಕೆ ಸೇಡು ತೀರಿಸಿಕೊಳ್ಳುವ ಭೀಮನಂತೆ ತನ್ನ ಪತಿಯೂ ರಕ್ಷಿಸಲಿ ಎಂದು ಪ್ರಾರ್ಥಿಸುವ ಹೆಣ್ಣುಮಕ್ಕಳು ಭೀಮನ ಅಮಾವಾಸ್ಯೆಯಂದು ಗಂಡನ ಪಾದಪೂಜೆ ನೆರವೇರಿಸುತ್ತಾರೆ. ಅಲ್ಲಿಂದ ಆರಂಭವಾಗಿ ಒಂದೊಂದು ದಿನವೂ ವಿವಿಧ ಪೂಜೆ ಪುನಸ್ಕಾರಗಳಿರುತ್ತವೆ.
ಶ್ರಾವಣ ಮಾಸದಲ್ಲಿ ಮಹಿಳೆಯರ ಪೂಜೆ ವ್ರತ ಜಾಸ್ತಿ. ಹೆಣ್ಣುಮಕ್ಕಳು ಹೆಚ್ಚಾಗಿ ಮಂಗಳಗೌರಿ, ಸಂಪತ್ ಗೌರಿ, ಸ್ವರ್ಣಗೌರಿ, ಶುಕ್ರಗೌರಿ ಹೀಗೆ ವ್ರತಗಳ ಮೂಲಕ ಆರಾಧಿಸುತ್ತಾರೆ. ಲಕ್ಷ್ಮಿಯನ್ನು ಪೂಜಿಸುತ್ತಾರೆ. ಈ ಮಾಸದಲ್ಲಿ ವೈಶಿಷ್ಟ್ಯವಾದುದು ಅಣ್ಣ-ತಂಗಿಯ ಬಾಂಧವ್ಯದ ಸಂಕೇತವಾದ ರಕ್ಷಾ ಬಂಧನವಂತೂ ಮಹತ್ವ ಪೂರ್ಣವಾದುದು. ಸೋದರನಿಗೆ ರಾಖಿ ಕಟ್ಟುವ ಮೂಲಕ ತನ್ನನ್ನು ಹೊಣೆಗಾರಿಕೆಯನ್ನು ವಹಿಸುತ್ತಾರೆ ಹೆಣ್ಣುಮಕ್ಕಳು.
ಇದೇ ಶ್ರಾವಣ ಮಾಸದಲ್ಲಿ ಬರುವ ನಾಗರ ಚೌತಿ, ಪಂಚಮಿ ಕೂಡ ಮಹತ್ವವಾದವುಗಳು. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ನಾಗರಕಲ್ಲಿಗೆ ಹಾಲೆರೆಯುವ ಮೂಲಕ ಹಬ್ಬವನ್ನು ಆಚರಿಸಲಾಗುವುದು. ಅಲ್ಲದೇ ಶ್ರಾವಣ ಮಾಸದಲ್ಲಿ ಇಡೀ ಮನುಕುಲಕ್ಕೆ ಗೀತೋಪದೇಶ ಮಾಡಿದ ಶ್ರೀಕೃಷ್ಣ ಜನಿಸಿದ ದಿನವೂ ಬರುತ್ತದೆ. ಗೌರಿ- ಗಣೇಶ ಹಬ್ಬದ ಮಹತ್ವವನ್ನಂತೂ ಹೇಳಬೇಕಿಲ್ಲ. ಗೌರಿ ತವರಿಗೆ ಬಂದಿದ್ದು, ಶ್ರಾವಣ ಮಾಸದಲ್ಲೇ.
ಇಡಿ ತಿಂಗಳು ಶ್ರವಣ(ಕಿವಿ) ಮೇಲೆ ಒಳ್ಳೆಯ ಮಾತು ಕೇಳಲಿ ಎಂದು ಹರಿಕತೆ, ಭಜನೆ, ಕೂಡ ನಡೆಸಲಾಗುತ್ತದೆ. ಹೀಗೆ ಶ್ರಾವಣ ಮಾಸಕ್ಕೆ ವಿಶೇಷ ಸ್ಥಾನವಿದೆ.