ಮನೋರಂಜನೆ

ಪಾತ್ರ ಮತ್ತು ಅಭಿನಯಕ್ಕೆ ಒಳ್ಳೆಯ ವಿಮರ್ಶೆಗಳೇ ಸಿಕ್ಕಿವೆ: ನಟಿ ಶ್ರಾವ್ಯ

Pinterest LinkedIn Tumblr

ಸರವ್ಯ* ‘ರೋಸ್’ ನಂತರ ಅನೇಕ ಅವಕಾಶಗಳನ್ನು ತಿರಸ್ಕರಿಸಿದ್ದೀರಂತೆ. ಯಾಕೆ?
ನನ್ನ ಪಾತ್ರಕ್ಕೆ ಅಷ್ಟೇನು ಮಹತ್ವ ಇಲ್ಲ ಅನ್ನಿಸಿತು. ಅದಕ್ಕಾಗಿ ತಿರಸ್ಕರಿಸಿದೆ. ಹಾಗಿದ್ದೂ ‘ಕಟ್ಟೆ’ ಚಿತ್ರ ಮಾಡಿ ಎಡವಿದೆ. ತುಂಬಾ ದೊಡ್ಡ ಸ್ಕ್ರಿಪ್ಟ್ ಅದಾಗಿತ್ತು. ಅಷ್ಟು ದೊಡ್ಡ ಸ್ಕ್ರಿಪ್ಟ್ ನಿರ್ವಹಣೆ ನನಗೆ ಸಾಧ್ಯವಿರಲಿಲ್ಲ. ನಾನು ಪ್ರತಿ ಚಿತ್ರವನ್ನೂ ಮೊದಲ ಚಿತ್ರದಂತೇ ಕಾಣುತ್ತೇನೆ. ಆ ಚಿತ್ರದಲ್ಲಿ ನನ್ನ ಪಾತ್ರ, ಕಥೆ ಯಾವುದನ್ನೂ ಕೇಳಿರಲಿಲ್ಲ. ಆ ಬಗ್ಗೆ ನನಗೆ ವಿಷಾದವಿದೆ. ಅಪ್ಪನಿಗೋಸ್ಕರ ಆ ಚಿತ್ರವನ್ನು ಒಪ್ಪಿಕೊಂಡಿದ್ದು.

* ಅಂದರೆ ‘ಕಟ್ಟೆ’ ನಿಮ್ಮ ನಿರೀಕ್ಷೆಯ ಮಟ್ಟವನ್ನು ತಲುಪಿಲ್ಲವೇ?
ಇಲ್ಲ. ತುಂಬಾ ನಿರಾಸೆಯಾಗಿದೆ. ಆದರೆ ಎಲ್ಲಾ ಕಡೆ ನನ್ನ ಪಾತ್ರ ಮತ್ತು ಅಭಿನಯಕ್ಕೆ ಒಳ್ಳೆಯ ವಿಮರ್ಶೆಗಳೇ ಸಿಕ್ಕಿವೆ.

* ‘ವಾಟ್ಸಪ್ ಲವ್’ನಲ್ಲಿ ನಿಮ್ಮದು ಅತಿಥಿ ಪಾತ್ರವಂತೆ?
ತೀರಾ ಚಿಕ್ಕ ಪಾತ್ರ ಅದು. ಅದರಲ್ಲಿನ ನಾಯಕಿ ತನ್ನ ವಾಟ್ಸಪ್ ಖಾತೆಗೆ ನನ್ನ ಫೋಟೊ ಹಾಕಿಕೊಂಡಿರುತ್ತಾಳೆ. ನಾಯಕ ಆ ಫೋಟೊ ನೋಡಿ ನನ್ನ ಹುಡುಗಿ ಹಾಗಿರಬಹುದು, ಹೀಗಿರಬಹುದು ಎಂಬ ಕಲ್ಪನಾ ಲೋಕದಲ್ಲಿ ವಿಹರಿಸುತ್ತಾನೆ. ಒಂದು ದೃಶ್ಯ, ಒಂದು ಹಾಡಿನಲ್ಲಷ್ಟೇ ಇದ್ದೇನೆ.

* ‘ನಾಗರಕಟ್ಟೆ’ ಮೂಲಕ ನೀವೂ ಹಾರರ್ ಚಿತ್ರಕ್ಕೆ ತೆರೆದುಕೊಂಡಂತಾಗಿದೆ…
ನನ್ನ ಪಾತ್ರಕ್ಕೆ ತುಂಬಾನೇ ಮಹತ್ವವಿದೆ. ನಾಯಕನನ್ನೇ ಮೀರಿಸುವ ರೀತಿಯ ಪಾತ್ರ. ಆ ಪಾತ್ರಕ್ಕೆ ಮುಗ್ಧತೆಯ ಜೊತೆಗೆ ರೋಚಕ ಗುಣವೂ ಇದೆ. ಇಡೀ ಸಿನಿಮಾನೇ ಹಾರರ್ ಥ್ರಿಲ್ಲರ್. ಸಿನಿಮಾ ಆರಂಭವಾಗೋದೇ ಮಲ್ಲಿಕಾ ಅನ್ನೋ ನನ್ನ ಪಾತ್ರದಿಂದ. ನಾನಲ್ಲಿ ಹಳ್ಳಿಗೌಡನ ಮಗಳು. ಒಂದು ಸಂದರ್ಭದಲ್ಲಿ ಇಡೀ ಕುಟುಂಬಕ್ಕೇ ಕೆಟ್ಟ ಕಾಲ ಬರುತ್ತೆ. ಆಗ ಸೇಡು ತೀರಿಸಿಕೊಳ್ಳಲು ನಿಲ್ಲುವ ಈ ಪಾತ್ರಕ್ಕೆ ಪರ್ಫಾರ್ಮೆನ್ಸ್‌ಗೆ ತುಂಬಾ ಅವಕಾಶವಿದೆ. ಅದೇ ಕಾರಣಕ್ಕೆ ಈ ಚಿತ್ರ ಇಷ್ಟವಾಗಿದ್ದು ನನಗೆ. ಶ್ರಾವ್ಯ ಹೀಗೂ ಅಭಿನಯಿಸಬಹುದೇ ಎಂಬಷ್ಟು ಚೆನ್ನಾಗಿದೆ.

* ‘ಕಟ್ಟೆ’ ನಂತರ ‘ಹುಚ್ಚ–2’ ಚಿತ್ರದಲ್ಲಿ ಮತ್ತೆ ತಂದೆ ನಿರ್ದೇಶನದಲ್ಲಿ ಕೆಲಸ ಮಾಡ್ತಿದ್ದೀರಿ. ತಂದೆ ಜೊತೆ ಕೆಲಸ ಮಾಡುವಾಗ ಸುಲಭವೆನ್ನಿಸುತ್ತಾ?
ಇಲ್ಲ. ಬೇರೆ ನಿರ್ದೇಶಕರ ಜೊತೆ ಸುಲಭವಾಗಿ ಕೆಲಸ ಮಾಡಬಹುದು. ಅಪ್ಪನ ಜೊತೆ ಹಾಗಾಗಲ್ಲ. ಸೆಟ್‌ನಲ್ಲಿ ಅಪ್ಪನನ್ನು ಒಬ್ಬ ತಂತ್ರಜ್ಞನಾಗಿಯೇ ಕಾಣುತ್ತಿದ್ದೆ. ಅವರೂ ಅಷ್ಟೇ, ಮಗಳ ಬದಲಾಗಿ ಕಲಾವಿದೆಯನ್ನಾಗಿ ನನ್ನನ್ನು ನೋಡುತ್ತಿದ್ದರು. ‘ಹುಚ್ಚ–2’ ಪೂರ್ಣಗೊಂಡಿದೆ. ಯಾವಾಗ್ಲೂ ಮಾತಾಡುವ, ಸೂಕ್ಷ್ಮ, ಸಿಕ್ಕಾಪಟ್ಟೆ ಚೂಟಿ ಹುಡುಗಿಯಾಗಿ ನನ್ನ ಪಾತ್ರದ ನಿರೂಪಣೆ ವಿಶೇಷವಾಗಿದೆ. ಸೆಪ್ಟೆಂಬರ್‌ನಲ್ಲಿ ಸಿನಿಮಾ ತೆರೆಗೆ ಬರಬಲಿದೆ.

* ಬೇರೆ ಸಿನಿಮಾಗಳು?
‘ಗೊಂಬೆಗಳ ಲವ್’ ಚಿತ್ರತಂಡದೊಂದಿಗೆ ‘ದಾದಾ ಈಸ್ ಬ್ಯಾಕ್’ ಚಿತ್ರ ಮಾಡ್ತಿದ್ದೀನಿ. ತೊಂಬತ್ತರಷ್ಟು ಭಾಗ ಮುಗಿದಿದೆ. ಸಂತೋಷ್ ಈ ಚಿತ್ರದ ನಿರ್ದೇಶಕ. ಅಜಯ್, ಅರುಣ್ ನಾಯಕರು. ತಮಿಳು ನಟ ಪಾರ್ಥಿಬನ್ ದಾದಾ ಆಗಿ ಕಾಣಿಸಿಕೊಳ್ಳಲಿದ್ದಾರೆ.

* ಹೊಸ ತಂಡದೊಂದಿಗೇ ಹೆಚ್ಚೆಚ್ಚು ಕೆಲಸ ಮಾಡುತ್ತಿದ್ದೀರಿ.
ನನಗೆ ಬರುತ್ತಿರುವ ಬಹುತೇಕ ಅವಕಾಶಗಳು ಹೊಸ ತಂಡದಿಂದ. ಆ ಬಗ್ಗೆ ಖುಷಿ ಇದೆ. ಜನಪ್ರಿಯ ನಟರೊಂದಿಗೆ ಕೆಲಸ ಮಾಡುವ ಅವಕಾಶ ಇನ್ನೂ ಬಂದಿಲ್ಲ. ಬಂದರೆ ಖಂಡಿತ ಮಾಡ್ತೀನಿ.

* ಬಹುತೇಕ ಕನ್ನಡ ನಟಿಯರು ಪರಭಾಷೆಗೆ ಹಾರುತ್ತಾರೆ. ನೀವಿನ್ನೂ ಹೋಗದಿರುವುದು ಆಶ್ಚರ್ಯ.
ತಮಿಳಿನ ಒಂದು ಚಿತ್ರಕ್ಕೆ ಮಾತುಕತೆ ನಡೆದಿತ್ತು. ಆದರೆ ಕೈಗೂಡಲಿಲ್ಲ. ಕನ್ನಡದಲ್ಲಿ ಒಳ್ಳೆಯ ಹೆಸರು ಮಾಡಿದ ಮೇಲೆ ಹೋಗಬಹುದೇನೋ. ನಾನಾಗಿಯೇ ಅವಕಾಶ ಹುಡುಕಿಕೊಂಡಂತೂ ಹೋಗುವುದಿಲ್ಲ. ಕನ್ನಡದಲ್ಲೇ ಸಾಕಷ್ಟು ಅವಕಾಶ, ಗೌರವ ಸಿಗುತ್ತಿರುವಾಗ ಬೇರೆಡೆ ಅರಸಿ ಹೋಗುವುದರಲ್ಲಿ ಅರ್ಥವಿಲ್ಲ. ಹಾಗಂತ ಹೋಗಬಾರದು ಎಂಬುದೇನೂ ಇಲ್ಲ.

* ಇತ್ತೀಚಿನ ಚಿತ್ರಗಳಲ್ಲಿ ನಾಯಕಿ ಪಾತ್ರಕ್ಕೆ ಪ್ರಾಮುಖ್ಯತೆ ಸಿಕ್ಕುತ್ತಿಲ್ಲ ಎಂಬ ಆರೋಪವಿದೆ. ನಿಮ್ಮ ಅಭಿಪ್ರಾಯ?
ಕೆಲವು ಆ್ಯಕ್ಷನ್ ಚಿತ್ರಗಳಿಗೆ ಹಾಗಾಗುವುದುಂಟು. ಆದರೆ ಒಬ್ಬ ಒಳ್ಳೆಯ ನಿರ್ದೇಶಕನ ಕೈ ಕೆಳಗೆ ಕೆಲಸ ಮಾಡುವ ಅವಕಾಶವಾದರೆ ಯಾಕಾಗಬಾರದು. ಹತ್ತು ಚಿತ್ರಗಳಿಗಾಗುವಷ್ಟು ಕಲಿತಿಯುತ್ತೇವೆ. ಒಂದೇ ದೃಶ್ಯವಾದರೂ ದೊಡ್ಡ ಕಲಾವಿದರ ಜೊತೆ ಅಭಿನಯಿಸಿದರೆ ಅದೊಂದು ಹೆಮ್ಮೆಯೇ. ಆದರೆ ನಾನು ಈವರೆಗೆ ನಟಿಸಿದ ಎಲ್ಲ ಚಿತ್ರಗಳಲ್ಲೂ ನನ್ನ ಪಾತ್ರಕ್ಕೆ ಮಹತ್ವವಿದೆ.

* ವರ್ಷಕ್ಕೆ ‘ನೂರು ಪ್ಲಸ್’ ಚಿತ್ರಗಳು ಬರುತ್ತಿವೆ. ಬಹುತೇಕ ಚಿತ್ರಗಳು ಗೆಲ್ಲುತ್ತಿಲ್ಲ. ಉದ್ಯಮದ ಭಾಗವಾಗಿ ನಿಮ್ಮ ಪ್ರತಿಕ್ರಿಯೆ ಏನು?
ತುಂಬಾ ಬೇಜಾರಾಗುತ್ತದೆ. ಸಿನಿಮಾ ಸೋಲಲಿ ಎಂದು ಯಾರೂ ಹಣ ಹಾಕಲ್ಲ. ಪ್ರಯತ್ನ ಮಾಡುತ್ತಾರೆ ಎಂಬುದೇ ಪ್ರಶಂಸನೀಯ. ಎಷ್ಟೋ ಬಾರಿ ಯೋಚನೆಯಲ್ಲಿ, ನಿರೂಪಣೆಯಲ್ಲಿ ಎಡವುತ್ತಾರೆ. ಒಳ್ಳೆಯ ಚಿತ್ರವೊಂದು ಯಾವ ಪ್ರಚಾರ, ತಾರಾಬಲ ಇಲ್ಲದೆಯೂ ನಿಲ್ಲಬಹುದು ಎಂಬುದಕ್ಕೆ ‘ರಂಗಿತರಂಗ’ ಸಾಕ್ಷಿ. ಅಂಥ ಪ್ರಯತ್ನಗಳಿಗೆ ಹೆಮ್ಮೆ ಅನ್ನಿಸುತ್ತೆ. ಇನ್ನೊಂದು ವರ್ಗವಿದೆ. ‘ಯಾವುದೋ’ ಹಣ ತಂದು ಇಲ್ಲಿ ಹಾಕುತ್ತಾರೆ. ಹಾಗೆ ಬರುವ ಹಣಕ್ಕೆ ಸಿನಿಮಾ ಮೇಲೆ ಪ್ರೀತಿ ಇರುವುದಿಲ್ಲ. ಅಂಥ ನಿರ್ಮಾಪಕರು ಒಂದೋ ಎರಡೋ ಸಿನಿಮಾಗಳಿಗೆ ನಾಪತ್ತೆಯಾಗುತ್ತಾರೆ.

* ಡಬ್ಬಿಂಗ್ ಬಗ್ಗೆ?
ನಮ್ಮಲ್ಲಿ ಎಂತೆಂಥ ಕಲಾವಿದರಿದ್ದಾರೆ. ಇಲ್ಲಿನ ಕಲಾವಿದರನ್ನು ಹೊರಗಿನವರು ಕರೆಸಿಕೊಳ್ಳುತ್ತಿದ್ದಾರೆ. ಅಂಥದ್ದರಲ್ಲಿ ನಾವ್ಯಾಕೆ ಕಾಪಿ– ಪೇಸ್ಟ್ ಮಾಡಬೇಕು?

Write A Comment