‘ರಾಜಕೀಯದಲ್ಲೇ ದಿನನಿತ್ಯ ಸಾಕಷ್ಟು ಸಿನಿಮಾ ನೋಡ್ತೀವಿ. ಯಶವಂತ ಅವರು ನಮ್ಮ ಕಡೆ ಬಂದ್ರೆ ಸಾಕಷ್ಟು ಇಂಟ್ರೆಸ್ಟಿಂಗ್ ಕಥೆ ಸಿಗ್ತಾವೆ’ ಎಂದು ಶಾಸಕ ಅರವಿಂದ ಲಿಂಬಾವಳಿ ಹೇಳಿದಾಗ ಸಭಾಂಗಣದಲ್ಲಿ ನಗೆಬುಗ್ಗೆ. ‘ರಾಜಕೀಯದಿಂದ ಸಿನಿಮಾ ನಿರ್ಮಾಣಕ್ಕೆ ಬನ್ನಿ’ ಎಂಬ ಲಹರಿ ವೇಲು ಅವರ ಮನವಿಗೆ ಪ್ರತಿಯಾಗಿ ಲಿಂಬಾವಳಿಯವರು ನಿರ್ದೇಶಕ ಯಶವಂತ ಸರದೇಶಪಾಂಡೆ ಅವರಿಗೆ ಹೀಗೆ ಆಹ್ವಾನ ನೀಡಿದರು.
ಪಂಚತಾರಾ ಹೋಟೆಲ್‌ನ ಐಷಾರಾಮಿ ಸಭಾಂಗಣದಲ್ಲಿ ನಡೆದ ‘ಯಾರಿಗೆ ಇಡ್ಲಿ’ ಸಿನಿಮಾದ ಹಾಡುಗಳ ಸಿ.ಡಿ ಬಿಡುಗಡೆ ಅದ್ದೂರಿಯಾಗಿಯೇ ಇತ್ತು. ಸಾಹಿತ್ಯ, ರಾಜಕೀಯ, ಶಿಕ್ಷಣ ಕ್ಷೇತ್ರದ ದಿಗ್ಗಜರು ಅಲ್ಲಿದ್ದರು. ಇಡ್ಲಿ ಮಾರುವ ಹುಡುಗನೊಬ್ಬ, ಕನಸು ಕಾಣುತ್ತ ಅದನ್ನು ನನಸು ಮಾಡಿಕೊಳ್ಳುವ ಕಥೆ ಈ ಚಿತ್ರದ್ದು. ಹೀಗಾಗಿ ಸಿ.ಡಿ ಬಿಡುಗಡೆ ಕೂಡ ವಿಭಿನ್ನವಾಗಿ ನಡೆಯಿತು. ತಳ್ಳುವ ಗಾಡಿಯಲ್ಲಿ ಇಟ್ಟುಕೊಂಡು ಬಂದ ಇಡ್ಲಿ ಪಾತ್ರೆಯ ಮುಚ್ಚಳ ತೆಗೆದ ಗಣ್ಯರು, ಸಿ.ಡಿ ಬಿಡುಗಡೆ ಮಾಡಿದರು.
ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಹರೀಶ್, ಈ ಸಿನಿಮಾದ ನಿರ್ಮಾಪಕರು. ನಟನಾಗುವ ಮಗ ವಿಶ್ವಜಿತ್ ಆಸೆ ಪೂರೈಸಲು ಈ ಚಿತ್ರ ನಿರ್ಮಿಸಿದ್ದಾರೆ. ‘ತೆರೆಯ ಮೇಲಿನ ಹೀರೊ ವಿಶ್ವಜಿತ್. ಆದರೆ ತೆರೆಯ ಹಿಂದಿನ ಹೀರೊ ನಿರ್ದೇಶಕ ಯಶವಂತ ಸರದೇಶಪಾಂಡೆ’ ಎಂದು ಹರೀಶ್ ಬಣ್ಣಿಸಿದರು. ‘ನಾನೊಬ್ಬನೇ ಅಲ್ಲ. ಚಿತ್ರತಂಡದ ಎಲ್ಲ ತಂತ್ರಜ್ಞರು ನೀಡಿದ ಸಹಕಾರದಿಂದ ಸಿನಿಮಾ ಚೆನ್ನಾಗಿ ಮೂಡಿಬಂದಿದೆ’ ಎಂದು ಯಶವಂತ ಅವರು ಎಲ್ಲ ಕ್ರೆಡಿಟ್ ಅನ್ನು ತಂತ್ರಜ್ಞರಿಗೆ ಅರ್ಪಿಸಿದರು.
ನಾಯಕನಾಗಿ ಬೆಳ್ಳಿತೆರೆ ಮೇಲೆ ಮಿನುಗುವ ಕನಸು ನನಸಾಗುತ್ತಿರುವ ಸಂತಸದಲ್ಲಿ ನಾಯಕ ನಟ ವಿಶ್ವಜಿತ್ ಮುಳುಗಿದ್ದರು. ಅಂದು ಅವರ ಜನ್ಮದಿನ ಸಹ ಆಗಿದ್ದರಿಂದ, ಬಂಧುಗಳು ಹಾಗೂ ಸ್ನೇಹಿತರ ದಂಡು ಸೇರಿತ್ತು. ‘ಒಳ್ಳೆಯ ಕಥೆ. ಅದರಲ್ಲೂ ವಾಸ್ತವದ ನೆಲೆಗಟ್ಟು ಆಧರಿಸಿ ಹೆಣೆದ ಕಥೆ ಇದು’ ಎಂದು ವಿಶ್ವಜಿತ್ ಹೇಳಿಕೊಂಡರು. ನಾಯಕಿ ಮೇಘಾ ಶೆಣೈ ‘ಸಿನಿಮಾದ ಹಾಡುಗಳು ಎಲ್ಲರಿಗೂ ಇಷ್ಟವಾಗುವಂತಿವೆ’ ಎಂದಷ್ಟೇ ಹೇಳಿದರು.
ಸಿನಿಮಾದ ಹಾಡುಗಳ ಸಿ.ಡಿ ಬಿಡುಗಡೆ ಸಮಾರಂಭದಲ್ಲಿ ಮೊದಲ ಬಾರಿಗೆ ಪಾಲ್ಗೊಂಡ ಸಾಹಿತಿ ಯಂಡಮೂರಿ ವೀರೇಂದ್ರನಾಥ, ಇದಕ್ಕೆ ಹರೀಶ್ ಅವರ ಮೇಲೆ ತಮಗಿರುವ ವಿಶ್ವಾಸವೇ ಕಾರಣ ಎಂದರು. ಹಾಡುಗಳಿಗೆ ಸಂಯೋಜಿಸಿದ ಸಂಗೀತ ಹೊಸತನದಿಂದ ಕೂಡಿದೆ ಎಂದು ಸಂಗೀತ ಹೊಸೆದ ಗಿರಿಧರ ದಿವಾನ್ ಹೇಳಿಕೊಂಡರು. ಸಾಹಿತಿ ಗೋಪಾಲ ವಾಜಪೇಯಿ, ಸಂಗೀತ ನಿರ್ದೇಶಕ ವಿ.ಮಹೋಹರ, ನಿರ್ಮಾಪಕ ಕರಿಸುಬ್ಬು, ಪತ್ರಕರ್ತ ವಿಶ್ವೇಶ್ವರ ಭಟ್ ಇತರರು ಉಪಸ್ಥಿತರಿದ್ದರು.