ಮಾದಕ ಬೆಡಗಿ ಮಲ್ಲಿಕಾ ಶೆರಾವತ್ ಹತ್ತಾರು ಬಗೆಯ ಪಾತ್ರಗಳನ್ನು ನಿಭಾಯಿಸಿ ಬೆಳ್ಳಿತೆರೆಯನ್ನು ರಂಗೇರಿಸಿದ್ದಾಗಿದೆ. ‘ಹಾಟ್’ ಅವತಾರದಿಂದ ಹಿಡಿದು ಹಾವಿನ ವೇಷ (ಹಿಸ್) ಹಾಕುವವರೆಗೂ ಅವರು ಸೈ ಎನಿಸಿಕೊಂಡಿದ್ದಾರೆ. ಇದೀಗ ಕೇಳಿಬರುತ್ತಿರುವ ಮಾಹಿತಿ ಪ್ರಕಾರ, ವಿವಾದಿತ ದೇವಮಾತೆ ರಾಧೆ ಮಾ ಜೀವನವನ್ನಾಧರಿಸಿ ತಯಾರಾಗುತ್ತಿರುವ ಚಿತ್ರದಲ್ಲೂ ಮಲ್ಲಿಕಾ ಕಾಣಿಸಿಕೊಳ್ಳಲಿದ್ದಾರಂತೆ! ಪರಿಣಾಮ, ‘ಡರ್ಟಿ ಪಾಲಿಟಿಕ್ಸ್’ ಮೂಲಕ ಸದ್ದು ಮಾಡಿದ್ದ ಮಲ್ಲಿಕಾ, ಈಗ ಮತ್ತೊಮ್ಮೆ ಗ್ಲಾಮರ್ ಪುಟಗಳಲ್ಲಿ ಪ್ರತ್ಯಕ್ಷರಾಗಿದ್ದಾರೆ!!
ತನ್ನ ಹಿಂಬಾಲಕರಿಗೆ ವರದಕ್ಷಿಣೆ ಮತ್ತು ಆತ್ಮಹತ್ಯೆ ಬಗ್ಗೆ ಋಣಾತ್ಮಕ ಪ್ರವಚನ ಮಾಡಿದ ಕಾರಣಕ್ಕಾಗಿ ಕೆಲ ದಿನಗಳಿಂದ ಭಾರೀ ಚರ್ಚೆಗೀಡಾಗುತ್ತಿರುವ ರಾಧೆ ಮಾ ಬಗ್ಗೆ ಸಿನಿ ಮಂದಿಯೂ ಆಸಕ್ತಿ ತೋರಿದ್ದಾರೆ. ಇನ್ನು, ರಾಧೆ ಮಾಡಿದ ಅವಾಂತರಗಳು ಒಂದೆರಡೇ? ಬಂದ ಭಕ್ತರನ್ನು ತಬ್ಬಿಕೊಳ್ಳುವುದು, ಮುತ್ತಿಕ್ಕುವುದು, ಮಿನಿ ಸ್ಕರ್ಟ್ನಲ್ಲಿ ಸಖತ್ ಹಾಟ್ ಆಗಿ ಪೋಸ್ ನೀಡುವುದು… ಎಲ್ಲವೂ ಬಾಲಿವುಡ್ ನಿರ್ದೇಶಕರ ಕಣ್ಣುಕುಕ್ಕಿದೆ. ರಾಧೆ ಮಾ ಬಗ್ಗೆ ಸಿನಿಮಾ ಮಾಡಿದರೆ ಪಡ್ಡೆಗಳಿಗೆ ಇಷ್ಟವಾಗುವುದರಲ್ಲಿ ಅನುಮಾನವೇ ಇಲ್ಲ ಎಂದರಿತು ಚಿತ್ರಕಥೆ ಬರೆಯುವಲ್ಲಿ ಮಗ್ನರಾಗಿದ್ದಾರಂತೆ. ಈ ಪಾತ್ರಕ್ಕೆ ಜೀವ ತುಂಬಲು ಮಲ್ಲಿಕಾ ಅವರೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ನಿರ್ವಪಕ ರಂಜಿತ್ ಶರ್ವ. ಅದಕ್ಕೆ ಮಲ್ಲಿಕಾ ಒಪ್ಪಿಗೆಯನ್ನೂ ಸೂಚಿಸಿದ್ದಾರಂತೆ.
ವಿಶೇಷ ಅಂದರೆ, ರಾಧೆ ಮಾ ಅವರ ಮಿನಿ ಸ್ಕರ್ಟ್ ಫೋಟೋಗಳನ್ನು ಮೊದಲು ಅಂತರ್ಜಾಲಕ್ಕೆ ಹರಿಯಬಿಟ್ಟ ರಾಹುಲ್ ಮಹಾಜನ್ಗೂ ಈ ಚಿತ್ರದಲ್ಲಿ ಪ್ರಮುಖ ಪಾತ್ರವಿದೆಯಂತೆ! ನೇಹಾ ಧೂಪಿಯಾ, ಕಿರುತೆರೆ ನಟಿ ಡಾಲಿ ಬಿಂದ್ರಾ ಕೂಡ ನಟಿಸಲಿದ್ದಾರೆ. ಅಂದ್ಹಾಗೆ, ಈ ಚಿತ್ರಕ್ಕೆ ‘ಮಾಡೆಲ್ ರಾಧೆ ಮಾ’ ಎಂಬ ಶೀರ್ಷಿಕೆಯನ್ನು ಅಂತಿಮಗೊಳಿಸುವ ಸಾಧ್ಯತೆಗಳಿವೆ.