ವರದಿ/ ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು, ಅ.16: ಕರ್ನಾಟಕ ರಾಜ್ಯ ದೇವಾಡಿಗರ ಸಂಘ (ರಿ) ಮಂಗಳೂರು ಹಾಗೂ ದುಬ್ಯಾ ದೇವಾಡಿಗರ ಸಂಘ ಇವರ ಸಂಯುಕ್ತ ಅಶ್ರಯದಲ್ಲಿ ವಿದ್ಯಾರ್ಥಿ ವೇತನ ವಿತರಣಾ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ರವಿವಾರ ನಗರದ ಮಣ್ಣಗುಡ್ಡೆ, ಗಾಂಧಿನಗರದಲ್ಲಿರುವ ಕರ್ನಾಟಕ ರಾಜ್ಯ ದೇವಾಡಿಗರ ಸಂಘದ ಸಮಾಜ ಭವನದಲ್ಲಿ ನಡೆಯಿತ್ತು.
ನ್ಯುರೋ ಸರ್ಜನ್ ಡಾ.ಕೆ.ವಿ.ದೇವಾಡಿಗ ಅವರು ಸಮಾರಂಭವನ್ನು ದೀಪ ಬೆಳಗಿಸುವ ಮೂಲಕ ವಿದ್ಯುಕ್ತವಾಗಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸಮಾಜದಲ್ಲಿ ದಾನಿಗಳ ಸಂಖ್ಯೆ ಹೆಚ್ಚಾಗಿದ್ದು, ಅನುಕೂಲವಂತರು ಬಡವರು, ಅಶಕ್ತರಿಗೆ ಸ್ವಇಚ್ಚೆಯಿಂದ ಸಹಾಯ ಮಾಡಲು ಮುಂದಾಗಬೇಕು. ಇಚ್ಛಾಶಕ್ತಿ ಇದ್ದಾಗ ಯಾವ ಕಾರ್ಯವೂ ಅಸಾಧ್ಯವಲ್ಲ ಎಂದು ಹೇಳಿದರು.
ಶಿಕ್ಷಣಕ್ಕೆ ವಿಪುಲ ಅವಕಾಶವಿರುವ ಈ ಸಂದರ್ಭದಲ್ಲಿ ಪೋಷಕರು ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಜೊತೆಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಎಸ್.ಎಸ್. ಎಲ್.ಸಿ ಬಳಿಕ ಕೂಡ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಸಂಘ – ಸಂಸ್ಥೆಗಳು ಮುಂದೆ ಬರಬೇಕು ಎಂದು ಕೆ.ವಿ.ದೇವಾಡಿಗ ಅವರು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ದುಬ್ಯಾಯ ಖ್ಯಾತ ಉದ್ಯಮಿ, ಕೊಡುಗೈ ದಾನಿ, ಪ್ರಸಿದ್ದ ಗಾಯಕರೂ ಆಗಿರುವ ದುಬ್ಯಾ ದೇವಾಡಿಗರ ಸಂಘದ ಅಧ್ಯಕ್ಷ ಹರೀಶ್ ಶೇರಿಗಾರ್ ಅವರು ಮಾತನಾಡಿ, ಈ ಸಂಘದ ಮೂಲಕ ಬಹಳ ಹಿಂದಿನಿಂದಲೂ ವಿದ್ಯಾರ್ಥಿ ವೇತನ ನೀಡುತ್ತಾ ಬಂದಿದ್ದೆವೆ. ಆದರೆ ಅ ಸಂದರ್ಭದಲ್ಲಿ ಹಣದ ಕೊರತೆಯಿಂದಾಗಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಸಾದ್ಯವಾಗುತ್ತಿರಲಿಲ್ಲ. ಆದರೆ ಏಳು ವರ್ಷಗಳ ಹಿಂದೆ ಇದೇ ವೇದಿಕೆಯಲ್ಲಿ ವಿದ್ಯಾಭ್ಯಾಸದ ಅಗತ್ಯತೆ ಕುರಿತು ಮಾತನಾಡಿದ್ದರಿಂದ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಸೇವೆ ಸಲ್ಲಿಸಬೇಕು. ಬಡ ವಿದ್ಯಾರ್ಥಿಗಳಿಗೆ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಬೇಕು ಎಂಬ ಸಂಕಲ್ಪ ತೊಟ್ಟು ನಾನು ಅಂದಿನಿಂದ ಇಂದಿನವರೆಗೂ ಓದಿನಲ್ಲಿ ಆಶಕ್ತಿ ಇರುವ ಬಡ ವಿದ್ಯಾರ್ಥಿಗಳಿಗೆ ಧನ ಸಹಾಯ ನೀಡುವ ಮೂಲಕ ಪ್ರೋತ್ಸಾಹ ನೀಡುತ್ತಿದ್ದೇನೆ ಎಂದು ಹೇಳಿದರು.
ನಮ್ಮ ದೇಶದಂತಹ ಸಂಸ್ಕೃತಿ ಬೇರೆಲ್ಲಿಯೂ ಇಲ್ಲ. ಇಲ್ಲಿ ವೃದ್ದಾಪ್ಯದಲ್ಲಿ ಕೂಡ ಮಕ್ಕಳು ತಂದೆ ತಾಯಿಯರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಮಕ್ಕಳಿಗೆ ಚಿಕ್ಕ ಪ್ರಾಯದಲ್ಲೇ ಜವಾಬ್ದಾರಿ ಆರಂಭವಾಗುತ್ತದೆ. ಇಡೀ ಜೀವನವೇ ಜವಾಬ್ದಾರಿಯುತವಾಗಿದೆ. ಹಿಂದೆಲ್ಲಾ ಬಾರೀ ಕಷ್ಟದ ಪರಿಸ್ಥಿತಿ ಇತ್ತು. ಆದರೆ ಈಗ ಎಲ್ಲಾ ಕ್ಷೇತ್ರಗಳಲ್ಲೂ ಅವಕಾಶಗಳು ಮುಕ್ತವಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ವಿದ್ಯಾಭ್ಯಾಸದಲ್ಲಿ ಮುನ್ನಡೆ ಸಾಧಿಸುವುದರ ಜೊತೆಜೊತೆಗೆ ತಮ್ಮಲ್ಲಿರುವ ಪ್ರತಿಭೆಯನ್ನು ಬೆಳಕಿಗೆ ತರಬೇಕು. ಮಕ್ಕಳ ಸಾಧನೆಗೆ ಬಡತನ ಅಡ್ಡಿ ಬಂದರೆ ಅಂತಾಹ ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ನೀಡಲು ನಮ್ಮ ಸಂಘ ಸದಾ ಸಿದ್ದ ಎಂದು ಹರೀಶ್ ಶೇರಿಗಾರ್ ಹೇಳಿದರುಿ.
ಮಕ್ಕಳ ಜವಾಬ್ದಾರಿ ಪೋಷಕರದ್ದು :
ಇತ್ತೀಚಿಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ವಿದ್ಯಾರ್ಥಿನಿ ಅಕ್ಷಾತ ದೇವಾಡಿಗರ ಬಗ್ಗೆ ಶೋಕ ವ್ಯಕ್ತಪಡಿಸಿದ ಹರೀಶ್ ಶೇರಿಗಾರ್, ನಮ್ಮ ಕಾನೂನು ವ್ಯವಸ್ಥೆ ಸಮರ್ಪಕವಾಗಿಲ್ಲ. ಈ ಹಿನ್ನೆಲೆಯಲ್ಲಿ ತಮ್ಮ ಮಕ್ಕಳ ಬಗ್ಗೆ ಫೋಷಕರು ಹೆಚ್ಚಿನ ಜವಾಬ್ದಾರಿ ವಹಿಸಬೇಕು. ಪ್ರತಿಯೊಬ್ಬರೂ ಮಕ್ಕಳ ಬಗ್ಗೆ ನಿಗಾವಹಿಸಬೇಕು. ಇಂದಿನ ಮಕ್ಕಳು ಕೂಡ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚು ಅಂಕ (ಟಾಪರ್) ಗಳಿಸುವ ಮೂಲಕ ವಿಶಿಷ್ಠ ಸಾಧನೆಗೈದ ಪ್ರಥಮೇಶ ದೇವಾಡಿಗ ಇವರಿಗೆ ಅವರ ಮುಂದಿನ ವಿದ್ಯಾಭ್ಯಾಸದ ಅನುಕೂಲತೆಗಾಗಿ ಹರೀಶ್ ಶೇರಿಗಾರ್ ಅವರು ತಮ್ಮ ವಯಕ್ತಿಕ ನೆಲೆಯಲ್ಲಿ ಲ್ಯಾಪ್‌ಟಾಪ್ ನೀಡಿ ಗೌರವಿಸಿದರು.
ಹರೀಶ್ ಶೇರಿಗಾರ್ ಅವರು ಪ್ರತೀ ವರ್ಷ ಸಂಘದ ವತಿಯಿಂದ ನಡೆಯುವ ವಿದ್ಯಾರ್ಥಿ ವೇತನ ವಿತರಣಾ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಬಡ ವಿದ್ಯಾರ್ಥಿಗಳ ಹೆಚ್ಚಿನ ಶಿಕ್ಷಣಕ್ಕಾಗಿ, ಸಂಘಕ್ಕೆ ತಮ್ಮ ವಯಕ್ತಿಕ ನೆಲೆಯಲ್ಲಿ ಹೆಚ್ಚಿನ ಸಹಾಯಧನವನ್ನು ನೀಡುತ್ತಾ ಬಂದಿದ್ದಾರೆ. ಮಾತ್ರವಲ್ಲದೇ ಪ್ರತೀ ವರ್ಷ ಉತ್ತಮ ಸಾಧನೆ ಮಾಡಿದ ಓರ್ವ ವಿದ್ಯಾರ್ಥಿಯನ್ನು ಗುರುತಿಸಿ ಲ್ಯಾಪ್‌ಟಾಪ್ ನೀಡಿ ಗೌರವಿಸುತ್ತಿದ್ದಾರೆ.
ಇನ್ನೋರ್ವ ಅತಿಥಿ ಮಂಗಳೂರಿನ ಎಸ್.ಡಿ.ಎಂ ಉದ್ಯಮ ಆಡಳಿತ ಕಾಲೇಜಿನ ನಿರ್ದೇಶ ಡಾ.ದೇವರಾಜ್ ಅವರು ಮಾತನಾಡಿ, ಉತ್ತಮ ಗುಣ ನಡತೆಯನ್ನು ಅಳವಡಿಸಿಕೊಂಡು ಮುನ್ನಡೆದಾಗ ಸಮಾಜದಲ್ಲಿ ಉನ್ನತ ಸ್ಥಾನ-ಮಾನ ಪಡೆಯಲು ಸಾಧ್ಯ.ವಿದ್ಯಾರ್ಥಿಗಳು ಕಠಿಣ ಪರಿಶ್ರಮದೊಂದಿಗೆ, ಸ್ಪರ್ಧಾತ್ಮಕ ಮನೋಭಾವನೆಯನ್ನು ಬೆಳೆಸಿಕೊಂಡು ಉತ್ತಮ ಸಾಧನೆ ಮಾಡಿದರೆ ಭವಿಷ್ಯದಲ್ಲಿ ತಮ್ಮ ಜೀವನವನ್ನು ಉತ್ತಮವಾಗಿ ರೂಪಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ದೇವಾಡಿಗರ ಸಂಘದ ಅಧ್ಯಕ್ಷ ವಾಮನ ಮರೋಳಿಯವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು, ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ವಿದ್ಯಾರ್ಥಿಗಳು ಮುಂದೆ ಇನ್ನಷ್ಟು ಹೆಚ್ಚಿನ ಸಾಧನೆ ಮಾಡಿ ಅಭಿವೃದ್ಧಿ ಪಥದತ್ತ ಸಾಗಲಿ ಎಂದು ವಿದ್ಯಾರ್ಥಿಳಿಗೆ ಶುಭಾ ಹಾರೈಸಿದರು.
ಸಮಾರಂಭದಲ್ಲಿ ವಿಶೇಷ ಅತಿಥಿಗಳಾಗಿ ಭಾಗವಹಿಸಿದ ಮಂಗಳೂರಿನ ಪ್ರಸಿದ್ಧ ನಿರ್ಮಾಣ ಸಂಸ್ಥೆ ಎಸ್.ಕೆ.ಎಸ್ ಬಿಲ್ಡರ್‌ನ ಅಧ್ಯಕ್ಷ ಹಾಗೂ ಆರ್ಕಿಟೆಕ್, ಬಿಲ್ಡರ್ ಎಂಡ್ ಡೆವೆಲಪ್ಪರ್‍ಸ್ನ ಸನತ್ ಕುಮಾರ್ ಶೆಟ್ಟಿ ಅವರು, ಇತ್ತೀಚಿಗೆ ಕುಂದಾಪುರದಲ್ಲಿ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ವಿದ್ಯಾರ್ಥಿನಿ ಕು.ಅಕ್ಷತಾ ದೇವಾಡಿಗ ಅವರ ಕುಟುಂಬಕ್ಕೆ ತಮ್ಮ ಸಂಸ್ಥೆಯ ವತಿಯಿಂದ ಒಂದು ಲಕ್ಷ ರೂಪಾಯಿ ಧನ ಸಹಾಯ ಮಾಡಿದರು. ಅಕ್ಷತಾ ದೇವಾಡಿಗರ ತಂದೆ ಬಾಬು ದೇವಾಡಿಗ ಅವರು ಈ ಹಣವನ್ನು ಸ್ವೀಕರಿಸಿದರು.
ಸಮಾರಂಭದಲ್ಲಿ ವಿಶೇಷ ಸಾಧನೆ ಮಾಡಿದ ಸಮಾಜದ 175 ವಿದ್ಯಾರ್ಥಿಗಳಿಗೆ ಐದು ಲಕ್ಷ ರೂಪಾಯಿ ಮೊತ್ತದ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತ್ತು.
ದುಬ್ಯಾ ದೇವಾಡಿಗರ ಸಂಘದ ಪ್ರಧಾನ ಕಾರ್ಯದರ್ಶಿ ದಿನೇಶ್ ದೇವಾಡಿಗ, ದುಬ್ಯಾ ದೇವಾಡಿಗರ ಸಂಘದ ಸಲಹೆಗಾರ ಆನಂದ ದೇವಾಡಿಗ, ದುಬ್ಯಾ ದೇವಾಡಿಗರ ಸಂಘದ ಕ್ರೀಡಾ ಕಾರ್ಯದರ್ಶಿ ಲಕ್ಷಿದಾಸ್ ಅತಿಥಿಗಳಾಗಿದ್ದರು. ಸಂಘದ ಉಪಾಧ್ಯಕ್ಷರಾದ ರತ್ನಾಕರ್ ದೇವಾಡಿಗ, ಪ್ರ.ಕಾರ್ಯದರ್ಶಿ ಎಂ.ದೇವದಾಸ್, ಕೋಶಾಧಿಕಾರಿ ಸುರೇಶ್ ನಿಟಿಲಾಪುರ, ಸಂಘಟಾನ ಕಾರ್ಯದರ್ಶಿ ಯಶವಂತ ದೇವಾಡಿಗ ಕದ್ರಿ, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಗೀತಾ ವಿ.ಕಲ್ಯಾಣ್ ಪುರ್, ಯುವ ಸಂಘಟನೆಯ ಅಧ್ಯಕ್ಷ್ಗ ಯಂ. ಎಚ್. ಪ್ರಶಾಂತ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಶ್ರೀಮತಿ ವೇಣಿ ಮರೋಳಿ ಪ್ರಾರ್ಥನೆ ನೆರವೇರಿಸಿದರು. ಸುಭಾಶ್ ಕಣ್ವ ತೀರ್ಥ ಸ್ವಾಗತಿಸಿದರು. ಶ್ರೀನಿವಾಸ್ ದೇವಾಡಿಗ ಹಾಗೂ ಯಶಸ್ವಿನಿ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಸುಮತಿ ವಂದಿಸಿದರು.