ಕರ್ನಾಟಕ

ಲಾಲ್‌ಬಾಗ್‌ ಪುಷ್ಪ ಪ್ರದರ್ಶನದ ವೇಳೆ ಘಟನೆ; ಹೆಜ್ಜೇನುಗಳ ದಾಳಿಗೆ ಬಾಲಕಿ ಬಲಿ

Pinterest LinkedIn Tumblr

vaishnavi

ಬೆಂಗಳೂರು: ಲಾಲ್‌ಬಾಗ್‌ ಜೈವಿಕ ಉದ್ಯಾನದಲ್ಲಿ ಆಯೋಜಿಸಿದ್ದ, ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಬಂದಿದ್ದ ಬಾಲಕಿಯೊಬ್ಬಳು ಹೆಜ್ಜೇನುಗಳು ಕಡಿದು ಸಾವನ್ನಪ್ಪಿರುವ ಘಟನೆ ನಡೆದಿದೆ.

ವೈಷ್ಣವಿ (7) ಮೃತಪಟ್ಟ ಬಾಲಕಿ. ಸಾಫ್ಟ್‌ವೇರ್‌ ಎಂಜಿನಿಯರ್ ಆರ್. ಗುರುಪ್ರಸಾದ್ ಮತ್ತು ಸುಗುಣಾ ಅವರ ಪುತ್ರಿಯಾದ ವೈಷ್ಣವಿ, ಬನಶಂಕರಿ 2ನೇ ಹಂತದಲ್ಲಿರುವ ನ್ಯಾಷನಲ್‌ ಹಿಲ್‌ವ್ಯೂವ್‌ ಪಬ್ಲಿಕ್‌ ಶಾಲೆಯಲ್ಲಿ 2ನೇ ತರಗತಿಯಲ್ಲಿ ಓದುತ್ತಿದ್ದಳು.

ಪದ್ಮನಾಭನಗರ ಸಮೀಪದ ಕನಕ ಲೇಔಟ್‌ನ ನಿವಾಸಿಗಳಾದ ದಂಪತಿ, ಆಗಸ್ಟ್‌ 15ರಂದು ಫಲಪುಷ್ಪ ಪ್ರದರ್ಶನ ವೀಕ್ಷಿಸಲು, ಪುತ್ರಿ ವೈಷ್ಣವಿಯೊಂದಿಗೆ ಶನಿವಾರ ಲಾಲ್‌ಬಾಗ್‌ಗೆ ಭೇಟಿ ನೀಡಿದ್ದರು.

‘ಗಾಜಿನ ಮನೆಯಲ್ಲಿ ಮಧ್ಯಾಹ್ನ 12.15ರ ಸುಮಾರಿಗೆ ಪುಷ್ಪಗಳ ಪ್ರದರ್ಶನ ವೀಕ್ಷಿಸಿ, ಕೆಂಪೇಗೌಡ ಗೋಪುರದ ಕಡೆಗೆ ಹೋಗುತ್ತಿದ್ದೆವು. ಈ ವೇಳೆ ಉದ್ಯಾನದಲ್ಲಿ ಆಟವಾಡಲು ಬಿಡುವಂತೆ ಪುತ್ರಿ ಹಠ ಮಾಡುತ್ತಿದ್ದಳು. ಜನಸಂದಣಿ ಹೆಚ್ಚಿದ್ದರಿಂದ ಅವಕಾಶ ಕೊಡದೆ, ಆಕೆಯ ಕೈ ಹಿಡಿದುಕೊಂಡೇ ಹೋಗುತ್ತಿದ್ದೆವು’ ಎಂದು ಬಾಲಕಿಯ ತಂದೆ ಗುರುಪ್ರಸಾದ್ ಅವರು ಹೇಳಿದರು.

‘ಸಮೀಪದ ಹುಲ್ಲುಹಾಸಿನ ಬಳಿ ಕಡಿಮೆ ಜನ ಇದ್ದರು. ಹಾಗಾಗಿ, ಪುತ್ರಿ ಕೆಲ ಹೊತ್ತು ಆಟವಾಡಿಕೊಳ್ಳಲಿ ಎಂದು ಬಿಟ್ಟೆವು. ಪಕ್ಕದಲ್ಲಿದ್ದ ಕೆಲವು ಮರಗಳತ್ತ ಆಟವಾಡಲು ಪುತ್ರಿ ಓಡುತ್ತಿದ್ದಳು. ನಾನು ಮತ್ತು ಪತ್ನಿ ಅವಳ ಹಿಂದೆ ನಿಧಾನವಾಗಿ ನಡೆದುಕೊಂಡು ಹೋಗುತ್ತಿದ್ದೆವು.

‘ಮರಗಳ ಸಮೀಪ ಹೋದ ಪುತ್ರಿ, ಇದ್ದಕ್ಕಿದ್ದಂತೆ ಚೀರಿಕೊಂಡಳು. ಏನಾಯಿತು ಎಂದು ಗಾಬರಿಯಿಂದ, ಅವಳತ್ತ ಓಡಲಾರಂಭಿಸಿದೆ. ಆಗ ನನಗೂ ಹೆಜ್ಜೇನುಗಳು ಕಡಿಯಲಾರಂಭಿಸಿದವು. ಆದರೂ, ಲೆಕ್ಕಿಸದೆ ಪುತ್ರಿ ಬಳಿ ತೆರಳಿ ಅವಳನ್ನು ತಬ್ಬಿಕೊಂಡೆ. ಕೂಡಲೇ ಇಬ್ಬರಿಗೂ ನೂರಕ್ಕೂ ಹೆಚ್ಚು ಹೆಜ್ಜೇನುಗಳು ಮುತ್ತಿಕೊಂಡವು.

‘ನೆರವಿಗಾಗಿ ಕೂಗಿಕೊಂಡರೂ ಯಾರೂ ಬರಲಿಲ್ಲ. ದೂರದಲ್ಲಿದ್ದ ಪತ್ನಿಗೂ ನಾಲ್ಕೈದು ಹುಳುಗಳು ಕಡಿದವು. ಅವಳನ್ನು ಸಾರ್ವಜನಿಕರು ರಕ್ಷಿಸಿದರು. ಕಡಿತದ ತೀವ್ರತೆಗೆ ಪುತ್ರಿ ಪ್ರಜ್ಞೆ ತಪ್ಪಿದ್ದಳು. ನೋವು ತಡೆಯಲಾಗದೆ ನಾನೂ ಕುಸಿದು ಬಿದ್ದೆ. ‘ಯಾರಾದರೂ ನನ್ನ ಗಂಡ– ಮಗಳನ್ನು ರಕ್ಷಿಸಿ’ ಎಂದು ಪತ್ನಿ ಕೂಗಿಕೊಳ್ಳುತ್ತಿದ್ದಳು.

‘ಒಂದೆರಡು ನಿಮಿಷದ ಬಳಿಕ ಕೆಲ ಸಾರ್ವಜನಿಕರು ಧೈರ್ಯ ಮಾಡಿ ನಮ್ಮತ್ತ ಬಂದು ಹುಳುಗಳನ್ನು ಓಡಿಸಿದರು. ಈ ಪೈಕಿ ಒಬ್ಬರು ಪುತ್ರಿಯನ್ನು ಎತ್ತಿಕೊಂಡು ವಿಲ್ಸನ್‌ ಗಾರ್ಡ್‌ನ ಅಗಡಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಪತ್ನಿಯೂ ಅವರೊಂದಿಗೆ ಹೋದಳು.

‘ನಂತರ ನಾನೂ ಆಟೊದಲ್ಲಿ ಆಸ್ಪತ್ರೆಗೆ ಹೋದೆ. ಪುತ್ರಿಯನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡುತ್ತಿದ್ದರು. ಒಳಗಿನಿಂದ ಚೀರಾಟ ಕೇಳಿ ಬರುತ್ತಿತ್ತು. ಸಂಜೆಯವರೆಗೂ ಜೀವನ್ಮರಣದ ಮಧ್ಯೆ ಹೋರಾಡಿದ ಪುತ್ರಿ, ಸಂಜೆ 5 ಗಂಟೆ ಸುಮಾರಿಗೆ ತೀರಿಕೊಂಡಳು’ ಎಂದು ಗುರುಪ್ರಸಾದ್ ನೋವಿನಿಂದ ನುಡಿದರು. ಘಟನೆಗೆ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಧಿಕಾರಿಗಳ ನಿರ್ಲಕ್ಷ್ಯ
‘ನನ್ನ ಮಗಳ ಸಾವಿಗೆ ಲಾಲ್‌ಬಾಗ್‌ನ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಫಲಪುಷ್ಪ ಪ್ರದರ್ಶನಕ್ಕೆ ಲಕ್ಷಾಂತರ ಜನ ಬರುತ್ತಾರೆ ಎಂದು ಗೊತ್ತಿದ್ದರೂ, ಅಪಾಯಕಾರಿ ಹೆಜ್ಜೇನುಗಳು ಕಟ್ಟಿರುವಂತಹ ಸ್ಥಳಗಳಲ್ಲಿ ಯಾವುದೇ ಸೂಚನಾ ಫಲಕ ಹಾಕಿಲ್ಲ. ಒಂದು ವೇಳೆ ಹಾಕಿದ್ದರೆ, ನಾವತ್ತ ಹೋಗುತ್ತಿರಲಿಲ್ಲ. ಮಗಳನ್ನು ಕಳೆದುಕೊಳ್ಳುತ್ತಿರಲಿಲ್ಲ’ ಎಂದು ಗುರುಪ್ರಸಾದ್ ಅವರು ಆಕ್ರೋಶ ವ್ಯಕ್ತಪಡಿಸಿದರು.

‘ಘಟನೆ ನಡೆದು ಮೂರು ದಿನಗಳಾದರೂ, ಲಾಲ್‌ಬಾಗ್‌ನ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಕುಟುಂಬದವರನ್ನು ಸಂಪರ್ಕಿಸಿಲ್ಲ. ಘಟನೆ ಬಗ್ಗೆ ಗೊತ್ತಿದ್ದರೂ, ಕನಿಷ್ಠ ಪಕ್ಷ ಒಂದು ಸಾಂತ್ವಾನ ಹೇಳುವಷ್ಟು ಸೌಜನ್ಯವೂ ಅವರಲ್ಲಿಲ್ಲ’ ಎಂದು ಬಾಲಕಿಯ ಕುಟುಂಬದವರು ದೂರಿದರು.

Write A Comment