ಮಂಗಳೂರು, ಆಗಸ್ಟ್.21: ಅರಣ್ಯ ಭೂಮಿ ಕಡಿಮೆಯಾಗಿ, ಮಾನವನ ವಾಸ್ತವ್ಯ ವಿಸ್ತಾರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ವನ್ಯಜೀವಿಗಳ ಜೊತೆ ಮಾನವರು ಸಹಬಾಳ್ವೆ ನಡೆಸುವುದು ಅನಿವಾರ್ಯವಾಗಿದೆ ಎಂದು ವನ್ಯಜೀವಿ ಸಂರಕ್ಷಣಾ ಸೊಸೈಟಿಯ ಪೂನಾದ ಹಿರಿಯ ಸಂಶೋಧಕಿ ವಿದ್ಯಾ ಆತ್ರೇಯ ಅಭಿಪ್ರಾಯಿ ಸಿದ್ದಾರೆ. ಅವರು ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಕುದುರೆಮುಖ ವನ್ಯಜೀವಿ ಪ್ರತಿಷ್ಠಾನ, ಮಂಗಳೂರು ಪ್ರೆಸ್‌ಕ್ಲಬ್, ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.
ಚಿರತೆಗಳು ಹಗಲಿಡೀ ತೋಟಗಳಲ್ಲಿ, ಕಬ್ಬಿನ ಗದ್ದೆಗಳಲ್ಲಿ, ಕುರುಚಲು ಕಾಡಿನಲ್ಲಿ ಅಡಗಿದ್ದು, ರಾತ್ರಿ ಹೊತ್ತು ನಾಡಿಗೆ ಪ್ರವೇಶಿಸುತ್ತವೆ. ಕಾಡುಪ್ರಾಣಿಗಳಿಗೆ ಯಾವುದೇ ಸೀಮಾರೇಖೆ ಇರುವುದಿಲ್ಲ. ಹಾಗಾಗಿ ಅವುಗಳು ಕಾಡಿನಿಂದ ನಾಡಿನತ್ತ ನುಗ್ಗಿದಾಗ ಮಾನವರು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಇಂತಹ ಸಂದರ್ಭ ವನ್ಯಜೀವಿ ಸಂರಕ್ಷಣೆ ಮತ್ತು ನಿರ್ವಹಣೆಯಲ್ಲಿ ಸ್ಥಳೀಯ ಸಮುದಾಯದ ಪಾತ್ರ ಮುಖ್ಯ. ಕಾಡು ಪ್ರಾಣಿಗಳನ್ನು ಕೊಲ್ಲದೆ ಸ್ಥಳೀಯರಿಗೆ ಅರಿವು ಮೂಡಿಸುವುದು, ಅವುಗಳನ್ನು ಸ್ಥಳಾಂತರಿಸುವ ಬದಲು ಅವುಗಳ ನೆಲೆಗೆ ಮರಳುವಂತೆ ಮಾಡುವುದಕ್ಕೆ ಆದ್ಯತೆ ನೀಡುವ ಕೆಲಸ ಮಾಡಬೇಕು ಎಂದವರು ಹೇಳಿದರು.
ವನ್ಯಜೀವಿಗಳು ವಸತಿ ಪ್ರದೇಶದೊಳಗೆ ಬಂದಾಗ ಪರಿಸ್ಥಿತಿ ಹತೋಟಿಗೆ ತರುವುದಕ್ಕೆ ಸ್ಥಳೀಯರನ್ನೊಳಗೊಂಡ ತಂಡಗಳನ್ನು ರಚಿಸಿಕೊಂಡಿರಬೇಕು. ಸಹಾಯಕ ವನಸಂರಕ್ಷಕ ದರ್ಜೆ ಅಧಿಕಾರಿ, ಅರ್ಹತೆಯಿರುವ ಪಶುವೈದ್ಯ, ತರಬೇತಿ ಪಡೆದ ಐವರು ಸಹಾಯಕರಿದ್ದು, ಸಾಮಾನ್ಯವಾಗಿ ಕಾಡುಪ್ರಾಣಿ-ಮಾನವ ಸಂಘರ್ಷ ನಡೆಯುವ ಸ್ಥಳಗಳಲ್ಲಿ ಸ್ಥಾಪಿಸಬಹುದು. ರಾಸಾಯನಿಕ ಬಂಧನೋಪಕರಣ, ಔಷಧ, ಸೆರೆಬೋನು, ಸಮವಸ್ತ್ರಗಳನ್ನು ಇದು ಹೊಂದಿರಬೇಕು. ಕರ್ನಾಟಕ, ಮಹಾರಾಷ್ಟ್ರದ ಅನೇಕ ಕಡೆಗಳಲ್ಲಿ ಚಿರತೆಗಳನ್ನು ಗ್ರಾಮಸ್ಥರು ಸಂರಕ್ಷಿಸಿರುವ ಉದಾಹರಣೆಗಳಿವೆ ಎಂದು ಅವರು ಹೇಳಿದರು.
ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ರೊನಾಲ್ಡ್ ಅನಿಲ್ ಫೆರ್ನಾಂಡಿಸ್ ಸ್ವಾಗತಿಸಿದರು. ಡಿಎನ್‌ಎ ಪತ್ರಿಕೆ ಮುಂಬೈನ ವರದಿಗಾರ ವಿರಾಟ್ ಸಿಂಗ್, ಕುದುರೆಮುಖ ವನ್ಯಜೀವಿ ಪ್ರತಿಷ್ಠಾನದ ಅಧ್ಯಕ್ಷ ನಿರೇನ್ ಜೈನ್ ಉಪಸ್ಥಿತರಿದ್ದರು.