ಮಂಗಳೂರು,ಆಗಸ್ಟ್.21: ವಾಮಂಜೂರು ಸಮೀಪದ ಅಮೃತನಗರದಲ್ಲಿ ಇಂದು ಮುಂಜಾನೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆ ಬೆಂಕಿಗೆ ಆಹುತಿಯಾಗಿದೆ. ಕೂಸಮ್ಮ ಎಂಬವರಿಗೆ ಸೇರಿದ ಮನೆ ಸಂಪೂರ್ಣ ಸುಟ್ಟು ಹೋಗಿದೆ. ಮನೆಯಲ್ಲಿ ಯಾರೂ ಇರಲಿಲ್ಲ. ಕೂಸಮ್ಮ ಬೀಡಿ ಕೊಡಲು ತೆರಳಿದ್ದಾಗ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಆವರಿಸಿಕೊಂಡಿದೆ.
ಭಾರೀ ಹೊಗೆಸಹಿತ ಹಂಚಿನ ಮನೆಯನ್ನು ಬೆಂಕಿ ದಹಿಸಿತೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಬೆಂಕಿ ಕಾಣಿಸಿಕೊಂಡ ಕೂಡಲೇ ಅಗ್ನಿಶಾಕದಳಕ್ಕೆ ಕರೆ ಮಾಡಲಾಯಿತಾದರೂ ವಾಹನ ಆ ಮನೆ ತಲುಪಲು ದಾರಿ ಸಮಸ್ಯೆ ಉಂಟಾಗಿ ವಿಳಂಭವಾಯಿತೆನ್ನಲಾಗಿದೆ. ಅಮೃತನಗರದಲ್ಲಿ ಸುಮಾರು ನೂರಕ್ಕೂ ಹೆಚ್ಚು ಮನೆಗಳಿದ್ದು ಇಲ್ಲಿ ಇಕ್ಕಟ್ಟಾದ ರಸ್ತೆಗಳಿರುವುದರಿಂದ ಸಲೀಸಾಗಿ ಅಗ್ನಿಶಮಕ ವಾಹನ ಹೋಗಲು ಆಗುವುದಿಲ್ಲವೆನ್ನಲಾಗಿದೆ.
ಹರಸಾಹಸಪಟ್ಟು ಸುತ್ತಿ ಬಳಸಿ ಅಗ್ನಿಶಾಮಕ ವಾಹನ ಆ ಮನೆ ತಲುಪುವಷ್ಟರಲ್ಲಿ ಮನೆ ಬಹುತೇಕ ಅಗ್ನಿಗೆ ಆಹುತಿಯಾಗಿತ್ತೆನ್ನಲಾಗಿದೆ