ಅಂತರಾಷ್ಟ್ರೀಯ

ಭಾರತ-ಪಾಕಿಸ್ತಾನ ಮಾತುಕತೆ ಅನಿಶ್ಚಿತ; ಕಾಶ್ಮೀರ ಪ್ರತ್ಯೇಕತಾವಾದಿಗಳಿಗೆ ಪಾಕ್ ಹೈಕಮಿಷನರ್ ಆಹ್ವಾನ; ಪ್ರತ್ಯೇಕತಾವಾದಿಗಳ ಜೊತೆ ಅಝೀಝ್ ಮಾತುಕತೆಗೆ ಭಾರತ ವಿರೋಧ

Pinterest LinkedIn Tumblr

Ind-Pak

ಹೊಸದಿಲ್ಲಿ, ಆ.21: ಭಾರತ-ಪಾಕಿಸ್ತಾನಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರ (ಎನ್‌ಎಸ್‌ಎ) ಮಟ್ಟದ ಮಾತುಕತೆ ಅನಿಶ್ಚಿತ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಕಾಶ್ಮೀರ ಪ್ರತ್ಯೇಕತಾವಾದಿಗಳಿಗೆ ನೀಡಿರುವ ಆಹ್ವಾನದ ವಿಷಯದಲ್ಲಿ ಎರಡೂ ದೇಶಗಳು ಮಾತಿನ ಸಂಘರ್ಷಕ್ಕೆ ಇಳಿದಿವೆ.

ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಸರ್ತಾಜ್ ಅಝೀಝ್ ಮತ್ತು ಭಾರತದ ಸಹವರ್ತಿ ಅಜಿತ್ ದೋವಲ್ ನಡುವೆ ರವಿವಾರ ಮಾತುಕತೆ ನಿಗದಿಯಾಗಿದ್ದು, ಇದಕ್ಕಾಗಿ ಸರ್ತಾಜ್ ಹೊಸದಿಲ್ಲಿಗೆ ಆಗಮಿಸುವವರಿದ್ದರು.

ಹೊಸದಿಲ್ಲಿಯಲ್ಲಿ ಸರ್ತಾಜ್ ಜೊತೆಗೆ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕರ ಮಾತುಕತೆಯನ್ನು ಭಾರತವು ಸ್ಪಷ್ಟವಾಗಿ ವಿರೋಧಿಸಿದೆ. ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕರನ್ನು ಗುರುವಾರ ಎರಡು ಗಂಟೆ ಕಾಲ ಗೃಹಬಂಧನದಲ್ಲಿರಿಸಿ ಬಿಡುಗಡೆ ಮಾಡಿರುವ ಭಾರತ, ಈ ಸಂಬಂಧವಾಗಿ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶವನ್ನು ನೀಡಿದೆ. ಭಾರತದಲ್ಲಿದ್ದಾಗ ಹುರಿಯತ್ ಧುರೀಣರೊಂದಿಗೆ ಸರ್ತಾಜ್ ಅಝೀಜ್ ಭೇಟಿ ಮತ್ತು ಮಾತುಕತೆ ಸೂಕ್ತವಾದುದಲ್ಲ ಎಂಬುದನ್ನು ಗುರುವಾರ ಪಾಕಿಸ್ತಾನಕ್ಕೆ ತಿಳಿಸಲಾಗಿದೆ. ಭಯೋತ್ಪಾದನೆಯ ವಿರುದ್ಧ ಜಂಟಿ ಹೋರಾಟದ ಸಂಬಂಧವಾಗಿ ರಶ್ಯದ ಉಫಾದಲ್ಲಿ ಎರಡೂ ದೇಶಗಳ ಪ್ರಧಾನಿಗಳು ಪರಸ್ಪರ ಒಪ್ಪಿಕೊಂಡಿರುವ ನಿಲುವಿಗೆ ಇಂತಹ ಮಾತುಕತೆಗಳು ಅನುಗುಣವಾಗಿಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ ಶುಕ್ರವಾರ ಹೇಳಿದ್ದಾರೆ.

ಪಾಕಿಸ್ತಾನ ದೂಷಣೆ: ಭಾರತದ ಈ ನಿಲುವಿಗೆ ಕೆಲವೇ ಗಂಟೆಗಳಲ್ಲಿ ತೀಕ್ಣವಾಗಿ ಪ್ರತಿಕ್ರಿಯೆ ನೀಡಿರುವ ಪಾಕ್, ಭಾರತವು ಮಾತುಕತೆಗಳಿಂದ ನುಣುಚಿಕೊಳ್ಳುತ್ತಿದೆ. ಅಝೀಝ್-ದೋವಲ್ ನಡುವಣ ಮಾತುಕತೆಯ ಕಾರ್ಯಸೂಚಿ ಹಾಗೂ ವ್ಯವಸ್ಥೆಗಳಿಗೆ ಸಂಬಂಧಿಸಿದ ಪ್ರಸ್ತಾವನೆಯನ್ನು ಭಾರತವು ಇನ್ನಷ್ಟೇ ಕಳುಹಿಸಿಕೊಡಬೇಕಾಗಿದೆ ಎಂದು ದೂಷಿಸಿದೆ.

ಹುರಿಯತ್ ಧುರೀಣರಿಗೆ ನೀಡಿರುವ ಆಹ್ವಾನದ ವಿಷಯದಲ್ಲಿ ಎರಡೂ ದೇಶಗಳ ಕಠಿಣ ನಿಲುವಿನ ಹಿನ್ನೆಲೆಯಲ್ಲಿ ಉದ್ದೇಶಿತ ಮಾತುಕತೆಯ ಮೇಲೆ ಗಾಢ ಕಾರ್ಮೋಡಗಳು ಕವಿದಿದ್ದರೂ, ಯಾರೂ ಈವರೆಗೆ ಮಾತುಕತೆಯನ್ನು ರದ್ದುಗೊಳಿಸಿಲ್ಲ.ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕ್ ಸಹವರ್ತಿ ನವಾಝ್ ಶರೀಫ್ ಕಳೆದ ತಿಂಗಳು ರಶ್ಯದ ಉಫಾದಲ್ಲಿ ಕೈಗೊಂಡ ನಿರ್ಧಾರದಂತೆ ಆಗಸ್ಟ್ 23ರಂದು ಹೊಸದಿಲ್ಲಿಯಲ್ಲಿ ಅಝೀಝ್-ದೋವಲ್ ನಡುವಿನ ಮಾತುಕತೆ ನಿಗದಿಯಾಗಿದೆ. ಇದೇ ಮೊದಲ ಬಾರಿಗೆ ಭಯೋತ್ಪಾದನೆ ಸಂಬಂಧಿ ವಿಷಯಗಳ ಕುರಿತು ಎರಡೂ ದೇಶಗಳು ಮಾತುಕತೆ ನಡೆಸಲಿವೆ.

ಶುಕ್ರವಾರದ ಬೆಳವಣಿಗೆಗಳು
ಹುರಿಯತ್ ನಾಯಕರಿಗೆ ನೀಡಿರುವ ಆಹ್ವಾನ ರದ್ದುಗೊಳಿಸಲು ಪಾಕ್ ನಕಾರ.
ರವಿವಾರ ಸಂಜೆ ಆರು ಗಂಟೆಗೆ ಹೊಸದಿಲ್ಲಿಯಲ್ಲಿನ ಪಾಕಿಸ್ತಾನ ಭವನದಲ್ಲಿ ಸರ್ತಾಜ್ ಅಝೀಝ್ ಜೊತೆಗೆ ನಮ್ಮ ಭೇಟಿ ನಿಗದಿಯಾಗಿದೆ ಎಂದು ಹುರಿಯತ್ ನಾಯಕ ಶಬ್ಬೀರ್ ಶಾ ತಿಳಿಸಿದ್ದಾರೆ.

ದೋವಲ್-ಅಝೀಝ್ ಮಾತುಕತೆಗೆ ಮುನ್ನ ಇಲ್ಲವೇ ನಂತರ ಕಾಶ್ಮೀರದ ಪ್ರತ್ಯೇಕತಾವಾದಿಗಳ ಜೊತೆಗೆ ಪಾಕ್‌ನ ಅಧಿಕಾರಿಗಳ ಸಭೆ ತನಗೆ ಒಪ್ಪಿತವಲ್ಲವೆಂದು ಭಾರತ ಸ್ಪಷ್ಟಪಡಿಸಿದೆ.

ದೋವಲ್-ಅಝೀಝ್ ಮಾತುಕತೆಯಲ್ಲಿ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಲಾಗುವುದೇ ಎಂಬುದನ್ನು ಹೇಳಿಕೆಯಲ್ಲಿ ಸ್ಪಷ್ಟಪಡಿಸುವಂತೆ ಪಾಕಿಸ್ತಾನಕ್ಕೆ ಭಾರತದ ಒತ್ತಾಯ. ಪಾಕಿಸ್ತಾನದ ಕಾರ್ಯಸೂಚಿಯನ್ನು ಭಾರತವು ನಿರ್ದೇಶಿಸುವಂತಿಲ್ಲ. ಕಾಶ್ಮೀರ ವಿಷಯದಲ್ಲಿ ನಮ್ಮನ್ನು ಭಾರತ ಬೆದರಿಸುವಂತಿಲ್ಲ ಎಂದು ಪಾಕಿಸ್ತಾನ ಉತ್ತರ ನೀಡಿದೆ.

Write A Comment