ಕರ್ನಾಟಕ

ಪ್ರೊ ಕಬಡ್ಡಿ ಲೀಗ್‌: ಫೈನಲ್‌ಗೆ ಲಗ್ಗೆ ಇಟ್ಟ ಬೆಂಗಳೂರು ಬುಲ್ಸ್‌; ಚಿಲಾರ ಮಿಂಚು; ಪ್ರಶಸ್ತಿಗಾಗಿ ಯು ಮುಂಬಾ ವಿರುದ್ಧ ಹೋರಾಟ

Pinterest LinkedIn Tumblr

kabaddi

ಮುಂಬೈ (ಪಿಟಿಐ): ದ್ವಿತೀಯಾರ್ಧದಲ್ಲಿ ಎದುರಾಳಿಗಳು ಒಡ್ಡಿದ ಸವಾಲನ್ನು ದಿಟ್ಟತನದಿಂದ ಮೆಟ್ಟಿನಿಂತ ಬೆಂಗಳೂರು ಬುಲ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ನ ಸೆಮಿಫೈನಲ್‌ನಲ್ಲಿ ರೋಚಕ ಗೆಲುವಿನ ಸವಿಯುಂಡಿತು.

ಎನ್‌ಎಸ್‌ಸಿಐ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನಡೆದ ಹಣಾಹಣಿಯಲ್ಲಿ ಮಂಜಿತ್‌ ಚಿಲಾರ ಬಳಗ 39–38ರಲ್ಲಿ ಬಲಿಷ್ಠ ತೆಲುಗು ಟೈಟಾನ್ಸ್‌ ತಂಡವನ್ನು ಮಣಿಸಿತು.

ಇದರೊಂದಿಗೆ ಇದೇ ಮೊದಲ ಬಾರಿ ಫೈನಲ್‌ ಪ್ರವೇಶಿಸಿದ ಶ್ರೇಯಕ್ಕೂ ಭಾಜನವಾಯಿತು. ಹೋದ ವರ್ಷ ಮಂಜಿತ್‌ ಪಡೆ ನಾಲ್ಕರ ಘಟ್ಟದಲ್ಲಿ ಎಡವಿ ಪ್ರಶಸ್ತಿ ಸುತ್ತಿನಿಂದ ಹೊರಬಿದ್ದಿತ್ತು. ಹೀಗಾಗಿ ಈ ಬಾರಿ ತಂಡ ವಿಭಿನ್ನ ರಣತಂತ್ರದೊಂದಿಗೆ ಕಣಕ್ಕಿಳಿದಿತ್ತು.

ಲೀಗ್‌ ಹಂತದಲ್ಲಿ ಬಲಿಷ್ಠ ತಂಡಗಳನ್ನು ಮಣಿಸಿ ಎರಡನೇ ತಂಡವಾಗಿ ಸೆಮಿಫೈನಲ್‌ ಅರ್ಹತೆ ಗಳಿಸಿದ್ದ ಟೈಟಾನ್ಸ್‌ ತಂಡ ಅತಿ ಆತ್ಮ ವಿಶ್ವಾಸದಿಂದ ಆಡಲಿಳಿದಿತ್ತು. ಟಾಸ್‌ ಗೆದ್ದ ಈ ತಂಡದ ನಾಯಕ ಮೆರಾಜ್‌ ಶೇಖ್‌ ಬಲಬದಿಯ ಕೋರ್ಟ್‌ ಆಯ್ಕೆ ಮಾಡಿಕೊಂಡರು.

ತಮ್ಮ ತಂಡ ರಕ್ಷ ಣಾ ವಿಭಾಗದಲ್ಲಿ ಬಲಿಷ್ಠವಾಗಿರುವುದರಿಂದ ಎದುರಾಳಿ ರೈಡರ್‌ಗಳನ್ನು ಬೇಗನೆ ಕಟ್ಟಿಹಾಕಿ ಒತ್ತಡ ಹೇರಬಹುದು ಎಂಬುದು ಅವರ ತಂತ್ರವಾಗಿತ್ತು.

‌ ಪರ ಮೊದಲ ದಾಳಿ ನಡೆಸಿದ ಅಜಯ್‌ ಠಾಕೂರ್‌ ಪಾಯಿಂಟ್‌ ಗಳಿಸದೆ ವಾಪಸಾದರು. ಆದರೆ ತಮ್ಮ ಚೊಚ್ಚಲ ರೈಡ್‌ನಲ್ಲೇ ಮಿಂಚಿನ ವೇಗದಲ್ಲಿ ಎದುರಾಳಿ ತಂಡದ ರಕ್ಷಣಾ ಕೋಟೆಯೊಳಗೆ ನುಗ್ಗಿದ ರಾಹುಲ್‌ ಚೌಧರಿ ಟೈಟಾನ್ಸ್‌ ಪಾಯಿಂಟ್‌ ಖಾತೆ ತೆರೆದರು. ನಂತರ ಮಂಜಿತ್‌ ಚಿಲಾರ ಪಾಯಿಂಟ್‌ ತಂದಿತ್ತು ಬುಲ್ಸ್‌ 1–1ರಲ್ಲಿ ಸಮಬಲ ಸಾಧಿಸುವಂತೆ ಮಾಡಿದರು.

ಆನಂತರದ ಎರಡು ನಿಮಿಷ ಪಾಯಿಂಟ್‌ ರಹಿತವಾಗಿತ್ತು. ನಾಲ್ಕನೇ ನಿಮಿಷದಲ್ಲಿ ಚಿಲಾರ ಮತ್ತೊಂದು ಪಾಯಿಂಟ್‌ ಕಲೆಹಾಕಿ ಮುನ್ನಡೆಯನ್ನು 2–1ಕ್ಕೆ ಹಿಗ್ಗಿಸಿದರು. ಬಳಿಕ ಟೈಟಾನ್ಸ್‌ ತಿರುಗೇಟು ನೀಡಿತು.

ಹೀಗಾಗಿ 8ನೇ ನಿಮಿಷದ ಅಂತ್ಯಕ್ಕೆ ಉಭಯ ತಂಡಗಳು 4–4ರಲ್ಲಿ ಸಮಬಲ ಹೊಂದಿದ್ದವು. ಈ ಹಂತದಲ್ಲಿ ಟೈಟಾನ್ಸ್‌ ತಂಡದ ನಾಯಕ ಮಿರಾಜ್‌ ಗಾಯಗೊಂಡು ಪಂದ್ಯದಿಂದ ಹೊರಬಿದ್ದರು.

ಇದು ಮೊದಲ ಬಾರಿ ಸೆಮಿಫೈನಲ್‌ ಪ್ರವೇಶಿಸಿದ್ದ ಈ ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿತು. ಬಳಿಕ ಬುಲ್ಸ್‌ ತಂಡ ಲೀಲಾ ಜಾಲವಾಗಿ ಪಾಯಿಂಟ್‌ ಕಲೆಹಾಕುತ್ತಾ ಸಾಗಿತು. ಚಿಲಾರ ಮತ್ತು ಅಜಯ್‌ ಗಮನಾರ್ಹ ರೈಡಿಂಗ್‌ ಮಾಡಿ ತಂಡ ವಿರಾಮಕ್ಕೂ ಮುನ್ನ 16–10ರ ಮುನ್ನಡೆ ಗಳಿಸುವಂತೆ ನೋಡಿಕೊಂಡರು.

ವಿರಾಮದ ಬಳಿಕವೂ ಬುಲ್ಸ್‌ ಆಟಗಾರರ ಆರ್ಭಟ ಮುಂದುವರಿಯಿತು. ಚಿಲಾರ ಮತ್ತು ಅಜಯ್‌ ತಲಾ ಎಂಟು ಪಾಯಿಂಟ್ಸ್‌ ಗಳಿಸಿದರೆ, ಧರ್ಮರಾಜ ಚೇರಲಾತನ್‌ ಮೂರು ರೈಡ್‌ ಹಾಗೂ ಆರು ಟ್ಯಾಕಲ್‌ ಪಾಯಿಂಟ್ಸ್‌ ಗಳಿಸಿ ಮಿಂಚಿದರು.

ಹೀಗಾಗಿ ಬುಲ್ಸ್‌ 30 ನೇ ನಿಮಿಷದ ಆಟ ಕೊನೆಗೊಂಡಾಗ 31–15ರ ಮುನ್ನಡೆ ಗಳಿಸಿತ್ತು. ಆಗ ಚಿಲಾರ ಬಳಗದ ಗೆಲುವು ಸಲೀಸು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಟೈಟಾನ್ಸ್‌ ತಂಡದ ರೈಡರ್‌ ರಾಹುಲ್‌ ಚೌಧರಿ ಅಮೋಘ ರೈಡಿಂಗ್‌ ಮೂಲಕ ಬುಲ್ಸ್‌ ಪಾಳಯದಲ್ಲಿ ಭೀತಿ ಮೂಡಿಸಿದರು.

ಅವರು ಒಂಬತ್ತು ಪಾಯಿಂಟ್‌ ಗಳಿಸಿದರೆ ಸಂದೀಪ್‌ ನಾಲ್ಕು ರೈಡ್‌ ಮತ್ತು ಆರು ಟ್ಯಾಕಲ್‌ ಪಾಯಿಂಟ್‌ ಸಂಗ್ರಹಿಸಿ ಪಂದ್ಯ ರೋಚಕತೆ ಪಡೆದುಕೊಳ್ಳುವಂತೆ ಮಾಡಿದರು.

40 ನೇ ನಿಮಿಷದಲ್ಲಿ ರಾಹುಲ್‌ ಚೌಧರಿ ರೈಡ್‌ ಪಾಯಿಂಟ್‌ ತಂದು ಹಿನ್ನಡೆಯನ್ನು 37–38ಕ್ಕೆ ತಗ್ಗಿಸಿದರು. ಬಳಿಕ ಚಿಲಾರ ಒಂದು ಪಾಯಿಂಟ್‌ ಗಳಿಸಿ ಬುಲ್ಸ್‌ ಮುನ್ನಡೆಯನ್ನು 39–37ಕ್ಕೆ ಏರಿಸಿದರು. ಕೊನೆಯ ರೈಡ್‌ನಲ್ಲಿ ರಾಹುಲ್‌ ಪಾಯಿಂಟ್‌ ತಂದರೂ ಟೈಟಾನ್ಸ್‌ಗೆ ಸೋಲು ತಪ್ಪಲಿಲ್ಲ.

ಮುಂಬಾಗೆ ಸುಲಭ ಜಯ: ನಿರೀಕ್ಷೆಯಂತೆಯೇ ಬಲಿಷ್ಠ ಯು ಮುಂಬಾ ತಂಡ ಫೈನಲ್‌ ತಲುಪಿತು. ದಿನದ ಎರಡನೇ ಸೆಮಿಫೈನಲ್‌ನಲ್ಲಿ ಅನೂಪ್‌ ಕುಮಾರ್‌ ಬಳಗ 35–18ರಲ್ಲಿ ಪಟ್ನಾ ಪೈರೇಟ್ಸ್‌ ತಂಡವನ್ನು ಮಣಿಸಿತು.

Write A Comment