ಕುಂದಾಪುರ; ಕಸಾಯಿಖಾನೆಗೆ ಜಾನುವಾರುಗಳನ್ನು ಸಾಗಾಟ ಮಾಡಲು ತಯಾರಿ ನಡೆಸುತ್ತಿದ್ದಾಗ ಹಿಂದೂ ಸಂಘಟನೆಯ ಸದಸ್ಯರು ಅದನ್ನು ತಡೆದು ಇಬ್ಬರು ಆರೋಪಿಗಳನ್ನು ಪೊಲೀಸರಿಗೊಪ್ಪಿಸಿದ ಘಟನೆ ಶಿರಿಯಾರ ಸಮೀಪ ಹರ್ಕಾಡಿಯಲ್ಲಿ ನಡೆದಿದೆ.
ಇಲ್ಲಿನ ನಿವಾಸಿಗಳಾದ ಹಿರಿಯಣ್ಣ ಶೆಟ್ಟಿ, ಚಂದ್ರ ಶೆಟ್ಟಿ ಹಾಗೂ ಭಾಸ್ಕರ ಶೆಟ್ಟಿ ಎನ್ನುವವರು ನಾಲ್ಕು ಗಂಡು ಕರು ಹಾಗೂ ಒಂದು ದನವನ್ನು ಕೇರಳದ ಕಸಾಯಿಖಾನೆಗೆ ಸಾಗಿಸುವ ಸಲುವಾಗಿ ಇಲ್ಲಿನ ಶಾಲೆಯ ಸಮೀಪ ಹಾಡಿಯಲ್ಲಿ ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಹಾಕಿದ ಸಂದರ್ಭ ವಿಷಯ ತಿಳಿದ ಸ್ಥಳೀಯ ಹಿಂದೂ ಸಂಘಟನೆಯ ಸದಸ್ಯರಾದ ಚಂದ್ರ ಆಚಾರ್ಯ ಹಾಗೂ ಸ್ನೇಹಿತರು ಪರಿಶೀಲಿಸಲು ಸ್ಥಳಕ್ಕೆ ತೆರಳಿದ್ದು, ಈ ಸಂದರ್ಭ ಅಲ್ಲಿದ್ದ ಮೂವರು ಆರೋಪಿಗಳಲ್ಲಿ ಭಾಸ್ಕರ ಶೆಟ್ಟಿ ಸ್ಥಳದಿಂದ ಪರಾರಿಯಾಗಿದ್ದಾನೆ. ಹಿರಿಯಣ್ಣ ಶೆಟ್ಟಿ ಮತ್ತು ಚಂದ್ರ ಶೆಟ್ಟಿ ಅವರನ್ನು ಹಿಡಿದು ವಿಚಾರಿಸಿದಾಗ ತಮ್ಮ ಕೃತ್ಯವನ್ನು ಒಪ್ಪಿಕೊಂಡು ಜಾನುವಾರುಗಳನ್ನು ಕಟ್ಟಿ ಹಾಕಿದ ಸ್ಥಳವನ್ನು ತೋರಿಸಿದ್ದಾರೆ. ಅನಂತರ ಚಂದ್ರ ಆಚಾರ್ ಅವರು ಕೋಟ ಪೊಲೀಸ್ ಠಾಣೆಗೆ ವಿಷಯ ತಿಳಿಸಿ, ಪೊಲೀಸರ ಉಪಸ್ಥಿತಿಯಲ್ಲಿ ಜಾನುವಾರುಗಳನ್ನು ರಕ್ಷಿಸಿದ್ದಾರೆ.
ಪ್ರತಿದೂರು ದಾಖಲು: ಹರ್ಕಾಡಿ, ಸಾಲಿಮಕ್ಕಿಯ ಚಂದ್ರ ಶೆಟ್ಟಿ ಎನ್ನುವವರು ತಮ್ಮ ನೆರೆಮನೆಯ ಹೆರಿಯಣ್ಣ ಶೆಟ್ಟಿ ಅವರ ಜತೆ ಮನೆಯಲ್ಲಿ ಮಾತನಾಡುತ್ತಿದ್ದಾಗ ಚಂದ್ರ ಆಚಾರ್ ಹಾಗೂ ಬಜರಂಗದಳದ ಸದಸ್ಯರು ಎಂದು ಹೇಳಿಕೊಂಡ 15ಮಂದಿ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಚಂದ್ರಶೆಟ್ಟಿ ಹಾಗೂ ಹೆರಿಯಣ್ಣ ಶೆಟ್ಟಿ ಅವರಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿ ತಮ್ಮ ವಾಹನದಲ್ಲಿ ಕರೆದುಕೊಂಡು ಹೋಗಿದ್ದಾರೆ ಎಂದು ಚಂದ್ರ ಶೆಟ್ಟಿ ಅವರ ಪತ್ನಿ ಬಾಬಿ ಶೆಡ್ತಿಯವರು ಕೋಟ ಠಾಣೆಯಲ್ಲಿ ಪ್ರತಿದೂರು ನೀಡಿದ್ದಾರೆ.