ನವದೆಹಲಿ: 1993ರ ಮುಂಬೈ ಸರಣಿ ಸ್ಪೋಟದ ರುವಾರಿ ಹಾಗೂ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಇರುವ ಬಗ್ಗೆ ಭಾರತೀಯ ಭದ್ರತಾ ಸಂಸ್ಥೆ ಮಾಹಿತಿ ಹೊಸ ಸಾಕ್ಷ್ಯಗಳನ್ನು ಕಲೆಹಾಕಿದ್ದು, ಪಾಕಿಸ್ತಾನ ಈಗಲಾದರೂ ದಾವೂದ್ ಇಬ್ರಾಹಿಂನನ್ನು ಭಾರತದ ವಶಕ್ಕೆ ಒಪ್ಪಿಸಬೇಕು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಎಂ.ವೆಂಕಯ್ಯ ನಾಯ್ಡು ಶನಿವಾರ ಹೇಳಿದ್ದಾರೆ.
ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿಲ್ಲ ಎಂದು ಪಾಕಿಸ್ತಾನ ತನ್ನ ವಾದವನ್ನು ಮುಂದುವರೆಸಿಕೊಂಡು ಬಂದಿರುವ ಹಿನ್ನೆಲೆಯಲ್ಲೇ, ಭಾರತೀಯ ಭದ್ರತಾ ಸಂಸ್ಥೆ ದಾವೂದಾ ಪಾಕಿಸ್ತಾನದಲ್ಲೇ ಇದ್ದಾನೆ ಎಂಬುದನ್ನು ಸಾಬೀತು ಪಡಿಸಲು ಆತನ ಪಾಸ್ ಪೋರ್ಟ್ ಹಾಗೂ ಪತ್ನಿಯ ಫೋನ್ ಬಿಲ್ ನಲ್ಲಿ ಪಾಕಿಸ್ತಾನದ ಕರಾಚಿ ವಿಳಾಸವಿರುವ ದಾಖಲೆಯೊಂದನ್ನು ಬಹಿರಂಗ ಪಡಿಸಿದೆ.
ದಾವೂದ್ ದಾಖಲೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ವೆಂಕಯ್ಯನಾಯ್ಡು ಅವರು, ದಾವೂದ್ ಪಾಕ್ ನಲ್ಲಿ ಇಲ್ಲ ಎಂದು ಪಾಕಿಸ್ತಾನ ಹೇಳುತ್ತಲೇ ಬರುತ್ತಿದೆ. ಆದರೆ, ಇದೀಗ ಆತ ಪಾಕಿಸ್ತಾನದಲ್ಲೇ ಇರುವ ಕುರಿತಂತೆ ಭಾರತೀಯ ಅಧಿಕಾರಿಗಳು ಮಾಹಿತಿ ಕಲೆಹಾಕಿದ್ದು, ಪಾಕಿಸ್ತಾನ ಈ ಪುರಾವೆಗಳನ್ನು ಅಲ್ಲಗೆಳೆಯುವಂತಿಲ್ಲ. ಪಾಕಿಸ್ತಾನ ಈಗಾಗಲಾದರೂ ಅರ್ಥ ಮಾಡಿಕೊಂಡು ದಾವೂದ್ ನನ್ನು ಭಾರತದ ವಶಕ್ಕೆ ನೀಡಬೇಕೆಂದು ಹೇಳಿದ್ದಾರೆ.
ಶಿವಸೇನಾ ನಾಯಕ ಸಂಜಯ್ ರಾವತ್ ಮಾತನಾಡಿ, ದಾವೂದ್ ನ ಹೊಸ ಫೋಟೋಯಿಂದ ಏನೂ ಸಾಧ್ಯವಾಗಲ್ಲ. ಈ ಹಿಂದೆಯೂ ಪಾಕಿಸ್ತಾನ ದಾವೂದ್ ಪಾಕಿಸ್ತಾನದಲ್ಲೇ ಇರುವ ದಾಖಲೆಗಳನ್ನೂ ತಿರಸ್ಕರಿಸಿತ್ತು. ಎನ್ ಡಿಎ ಸರ್ಕಾರ ಇದೀಗ ಮತ್ತೆ ಪಾಕಿಸ್ತಾನದೊಂದಿಗೆ ಮಾತುಕತೆಗೆ ಮುಂದಾಗಿದೆ. ಎನ್ ಡಿಎ ಸರ್ಕಾರ ಮತ್ತೆ ಹಿಂದೆ ಮಾಡಿದ ತಪ್ಪನ್ನೇ ಮತ್ತೆ ಮಾಡುತ್ತಿದೆ ಎಂದು ಹೇಳಿದ್ದಾರೆ.