ಮಂಗಳೂರು : ಜನ್ಮ ಕ್ರಿಯೇಷನ್ಸ್ ನಿರ್ಮಾಣದ ಅಷ್ಟ ಕ್ಷೇತ್ರಗಳ ಇತಿಹಾಸ ಮತ್ತು ಮಹಿಮೆಯನ್ನು ಸುಮಧುರ ಸಂಗೀತದ ಮೂಲಕ ಸಾರುವ “ಅಷ್ಟ ಕ್ಷೇತ್ರ ಗಾನ ವೈಭವ” ಧ್ವನಿ ಸುರುಳಿಯು ಎಂಟು ರಾಷ್ಟ್ರಗಳಲ್ಲಿ ಮೊಳಗಲಿದೆ.
ಭಾರತ್ ಸಮ್ಮಾನ್ ರಾಷ್ಟ್ರ ಪ್ರಶಸ್ತಿ ವಿಜೇತ ಡಾ. ಹರ್ಷ ಕುಮಾರ ರೈ ಮಾಡಾವು ನಿರ್ಮಾಣದ “ಅಷ್ಟ ಕ್ಷೇತ್ರ ಗಾನ ವೈಭವ” ಕನ್ನಡ ಧ್ವನಿ ಸುರುಳಿಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ಡಾ. ವಿರೇಂದ್ರ ಹೆಗ್ಗಡೆಯವರು ಇತ್ತೀಚೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲೋಕಾರ್ಪಣೆ ಮಾಡಿದರು.
ಈ ಭಕ್ತಿಗೀತೆಗಳು ಭಾರತವೂ ಸೇರಿದಂತೆ ಅಷ್ಟ ರಾಷ್ಟ್ರಗಳಾದ ಅಮೇರಿಕಾ, ಯುರೋಪ್, ದುಬೈ, ಸಿಂಗಾಪುರ್, ಒಮಾನ್, ಕತಾರ್ ಮತ್ತು ಅಭುದಾಬಿ ರಾಷ್ಟ್ರಗಳಲ್ಲಿ ಬಿಡುಗಡೆಗೊಳ್ಳಲಿದೆ.
ಈ ಧ್ವನಿ ಸುರುಳಿಯಲ್ಲಿ ಶ್ರೀ ಕ್ಷೇತ್ರ ತಿರುಪತಿ, ಪೊಳಲಿ, ಶಬರಿಮಲೆ, ಸುಬ್ರಮಣ್ಯ. ಕೊಲ್ಲೂರು, ಕಟೀಲು, ಧರ್ಮಸ್ಥಳ ಹಾಗೂ ಶ್ರೀ ಕ್ಷೇತ್ರ ಪುತ್ತೂರಿಗೆ ಸಂಬಂಧಿಸಿದ ಈ ಭಕ್ತಿಗೀತೆಗಳಿದ್ದು ಕರ್ನಾಟಕದ ಖ್ಯಾತ ಗಾಯಕರಾದ ಪುತ್ತೂರು ನರಸಿಂಹ ನಾಯಕ್ ಮತ್ತು ಚಲನಚಿತ್ರ ಹಿನ್ನೆಲೆ ಗಾಯಕಿ ಸುರೇಖಾ ಕೆ. ಎಸ್ ಹಾಡಿದ್ದಾರೆ.
ಇದಕ್ಕೆ ಸಾಹಿತ್ಯವನ್ನು ಪುತ್ತೂರಿನ ಯುವ ಸಾಹಿತಿ ಉಮೇಶ್ ನಾಯಕ್ ನೀಡಿದ್ದು ಸುಂದರವಾಗಿ ಮೂಡಿ ಬಂದಿದೆ. ಈ ಧ್ವನಿ ಸುರುಳಿಯು ವಿಶ್ವದಾದ್ಯಂತ ಟೋಟಲ್ ಕನ್ನಡ, ಅಮೇಜಾನ್, ಮತ್ತು ಫ್ಲಿಪ್ ಕಾರ್ಟ್ ಆನ್ ಲೈನ್ ಮಾರುಕಟ್ಟೆ ಸಂಸ್ಥೆಗಳ ಮೂಲಕ ಲಭ್ಯವಿದೆ.
ಧ್ವನಿ ಸುರುಳಿ ಬಿಡುಗಡೆ ಸಂದರ್ಭ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಲಿಮ್ಕಾ ದಾಖಲೆಯ ಪುತ್ತೂರು ಸುರೇಶ್ ನಾಯಕ್, ಕೆ.ಎಂ.ಮೋಹನ ರೈ ಮಾಡಾವು ಹಾಗೂ ಬೈಟ್ವೇ ಸಂಸ್ಥೆಯ ನಿರ್ದೇಶಕ ಮನಮೋಹನ ರೈ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.