ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ನೆರಿಯಾ ಗ್ರಾಮದ ಸುಂದರ ಮಲೆಕುಡಿಯ ಎಂಬವರ ಕೈ ಹಾಗೂ ಬೆರಳು ಕತ್ತರಿಸಿ ನಾಪತ್ತೆಯಾಗಿದ್ದ ಆರೋಪಿ ಭೂಮಾಲಕ ಗೋಪಾಲ ಗೌಡ ( 67 )ನನ್ನು ಬಂಧಿಸುವಲ್ಲಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ.
ಜುಲೈ 26ರಂದು ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಭೂಮಾಲಕ ಗೋಪಾಲ ಗೌಡ ಹಾಗೂ ಇನ್ನಿತರರು ಸೇರಿ ಪರಿಶಿಷ್ಟ ಪಂಗಡಕ್ಕೆ ಸೇರಿದ್ದಸುಂದರ ಮಲೆಕುಡಿಯ ಎಂಬವರ ಮೇಲೆ ಹಲ್ಲೆ ನಡೆಸಿ, ಮರ ಕಡಿಯುವ ಯಂತ್ರದಿಂದ ಗೋಪಾಲ ಗೌಡ ಅವರ ಕೈಬೆರಳುಗಳನ್ನು ಕತ್ತರಿಸಿ ಪರಾರಿಯಾಗಿದ್ದರು. ಗೋಪಾಲ ಗೌಡ ಅವರು ನಗರದ ಸರಕಾರಿ ವೆನ್‌ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಲೆಮರೆಸಿಕೊಂಡಿದ್ದ ಪ್ರಕರಣದ ಪ್ರಮುಖ ಆರೋಪಿ ಗೋಪಾಲ ಗೌಡನನ್ನು ಶನಿವಾರ ಅಂದ್ರ ಪ್ರದೇಶದ ಪುಟಪರ್ತಿಯಲ್ಲಿ ಬಂಧಿಸಲಾಗಿದೆ. ಬಳಿಕ ಅತನ ಹೇಳಿಕೆಯಂತೆ ಪ್ರಕರಣದ ಇನ್ನೋರ್ವ ಆರೋಪಿ ಗೋಪಾಲ ಗೌಡನ ಅಕ್ಕ ( ಇನ್ನೋರ್ವ ಆರೋಪಿ) ದಮಯಂತಿಯ ಕಾರು ಚಾಲಕ ವಸಂತ ಗೌಡನನ್ನು ಹಾಸನ ಜಿಲ್ಲೆಯ ಗೋರೂರು ದಿನೇಶ್ ಕಾರ್ಲೆತವರ ರೆಸಾರ್ಟ್ ಒಂದರಲ್ಲಿ ಪತ್ತೆ ಹಚ್ಚಿ ಬಂಧಿಸಲಾಗಿದೆ ಎಂದು ದ.ಕ.ಜಿಲ್ಲಾ ಎಸ್ಪಿ ಡಾ.ಶರಣ್ಣಪ್ಪ ಅವರು ರವಿವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಪಾಲ ಗೌಡನ ಪತ್ನಿ ಪುಷ್ಪಲತಾ ಸೇರಿದಂತೆ ಒಟ್ಟು ಮೂರು ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನೋರ್ವ ಆರೋಪಿ ಗೋಪಾಲ ಗೌಡನ ಅಕ್ಕ ದಮಯಂತಿಯವರ ಬಂಧನ ಬಾಕಿಯಿದೆ ಎಂದು ಅವರು ತಿಳಿಸಿದರು.
ಸುಂದರ ಮಲೆಕುಡಿಯ ಕೊಲೆ ಯತ್ನದ ಪ್ರಮುಖ ಆರೋಪಿ ಪುಟ್ಟಪರ್ತಿಯಲ್ಲಿ ಸೆರೆ ( Updated News)
ಸುಂದರ ಮಲೆಕುಡಿಯ ಕೊಲೆ ಯತ್ನದ ಪ್ರಮುಖ ಆರೋಪಿಯಾಗಿದ್ದು ತಲೆಮರೆಸಿಕೊಂಡಿದ್ದ ಬೆಳ್ತಂಗಡಿಯ ಗೋಪಾಲ ಗೌಡ(67)ನನ್ನು ಆಂಧ್ರಪ್ರದೇಶದ ಪುಟ್ಟಪರ್ತಿಯ ವಸತಿಗೃಹವೊಂದರಲ್ಲಿ ಶನಿವಾರ ಬಂಧಿಸಲಾಗಿದೆ ಎಂದು ದ.ಕ. ಜಿಲ್ಲಾ ಎಸ್ಪಿ ಡಾ.ಶರಣಪ್ಪ ಎಸ್.ಡಿ. ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಪ್ರಕರಣದ ಆರೋಪಿಗಳಲ್ಲಿ ಒಬ್ಬಳಾಗಿರುವ ಗೋಪಾಲನ ಹಿರಿಯ ಸಹೋದರಿ ದಮಯಂತಿ ತಲೆಮರೆಸಿಕೊಂಡಿದ್ದು, ಆಕೆಗಾಗಿ ಶೋಧ ಮುಂದುವರಿದಿದೆ. ದಮಯಂತಿಯ ಕಾರು ಚಾಲಕ ವಸಂತ ಗೌಡ ಕೂಡಾ ಪ್ರಕರಣದ ಆರೋಪಿಯಾಗಿದ್ದು, ಗೋಪಾಲ ಗೌಡ ನೀಡಿದ ಮಾಹಿತಿಯ ಆಧಾರದಲ್ಲಿ ಆತನನ್ನು ಹಾಸನದ ರೆಸಾರ್ಟ್‌ವೊಂದರಿಂದ ಶನಿವಾರ ರಾತ್ರಿ ಬಂಧಿಸಲಾಗಿದೆ.
ಆತ ಅಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಮತ್ತೊಬ್ಬಳು ಆರೋಪಿ, ಗೋಪಾಲ ಗೌಡನ ಪತ್ನಿ ಪುಷ್ಪಲತಾಳನ್ನು ಈ ಹಿಂದೆಯೇ ಬಂಧಿಸಲಾಗಿದೆ ಎಂದು ಎಸ್ಪಿ ಹೇಳಿದರು. ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಕಾಟಾಜೆಯಲ್ಲಿ ಅರಣ್ಯ ಇಲಾಖೆಯವರು ಬಿಟ್ಟುಕೊಟ್ಟಿರುವ ಜಾಗದಲ್ಲಿ ಜುಲೈ 26ರಂದು ಸಂಜೆ ಸುಂದರ ಮಲೆಕುಡಿಯ ಮತ್ತು ಅವರ ಪತ್ನಿ, ಮಗನ ಜೊತೆ ಸೇರಿ ಸೊಪ್ಪು ಕಡಿಯುತ್ತಿದ್ದ ವೇಳೆ ಈ ದುಷ್ಕೃತ್ಯ ಎಸಗಲಾಗಿತ್ತು.
ಆರೋಪಿಗಳಾದ ಗೋಪಾಲ ಗೌಡ, ಪತ್ನಿ ಪುಷ್ಪಲತಾ, ಸಹೋದರಿ ದಮಯಂತಿ ಹಾಗೂ ದಮಯಂತಿಯ ಕಾರು ಚಾಲಕ ವಸಂತ ಗೌಡ ಸುಂದರ ಮಲೆಕುಡಿಯ ಹಾಗೂ ಪತ್ನಿ, ಮಗನ ಮೇಲೆ ಮೆಣಸಿನ ಹುಡಿ ಎರಚಿ ಹಲ್ಲೆ ನಡೆಸಿದ್ದರು. ಈ ಸಂದರ್ಭ ಗೋಪಾಲ ಗೌಡ ಮರ ಕಡಿಯುವ ಯಂತ್ರದಿಂದ ಸುಂದರ ಅವರ ಮೇಲೆ ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದ. ಈ ವೇಳೆ ಕೈ ಅಡ್ಡ ಹಿಡಿದ ಕಾರಣ ಸುಂದರ ಅವರ ಬಲಕೈ ಭಾಗಶಃ ತುಂಡರಿಸಲ್ಪಟ್ಟಿತಲ್ಲದೆ, ಬೆರಳುಗಳು ಕತ್ತರಿಸಲ್ಪಟ್ಟಿದ್ದವು. ಅಲ್ಲದೆ ಆರೋಪಿಗಳು ನಿಂದಿಸಿ ಜೀವ ಬೆದರಿಕೆ ಕೂಡಾ ಒಡ್ಡಿದ್ದರು ಎಂದು ಸುಂದರ ಅವರ ಕುಟುಂಬಸ್ಥರು ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದರು ಎಂದು ಎಸ್ಪಿ ತಿಳಿಸಿದರು.
ಈ ದೂರಿನ ಆಧಾರದಲ್ಲಿ ಆರೋಪಿಗಳ ಪತ್ತೆಗೆ ಬಲೆ ಬೀಸಿ ದ್ದರು. ಆದರೆ ಅಷ್ಟರಲ್ಲಿ ಆರೋಪಿಗಳು ತಲೆಮರೆಸಿಕೊಂಡಿ ದ್ದರು. ಈ ಹಿನ್ನೆಲೆಯಲ್ಲಿ ಬಂಟ್ವಾಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ರಾಹುಲ್‌ಕುಮಾರ್ ನೇತೃತ್ವದಲ್ಲಿ 4 ತಂಡ ಗಳನ್ನು ರಚಿಸಿ ತನಿಖೆಯನ್ನು ತೀವ್ರಗೊಳಿಸಲಾಯಿತು.
ಅದರಂತೆ ಸುಳ್ಯ ಇನ್ಸ್‌ಪೆಕ್ಟರ್ ಮತ್ತು ಪೂಂಜಾಲಕಟ್ಟೆ ಎಸ್ಸೈ, ಬೆಳ್ತಂಗಡಿ ಠಾಣಾ ಸಿಬ್ಬಂದಿ ಹರೀಶ್, ಸುಳ್ಯ ಠಾಣಾ ಸಿಬ್ಬಂದಿ ಮಹೇಶ್ ಹಾಗೂ ದೇವರಾಜ್‌ರನ್ನು ಒಳಗೊಂಡ ತಂಡ ಆ.20ರಂದು ಬೆಂಗಳೂರಿಗೆ ತೆರಳಿ ಮಾಹಿತಿ ಕಲೆ ಹಾಕುತ್ತಿದ್ದಾಗ ಗೋಪಾಲ ಗೌಡ ಆಂಧ್ರ ಪ್ರದೇಶದಲ್ಲಿರುವ ಸುಳಿವು ದೊರೆತಿತ್ತು. ಈ ಸುಳಿವಿನ ಆಧಾರದಲ್ಲಿ ಕಾರ್ಯಾಚರಣೆ ನಡೆಸಿ ಆಂಧ್ರದ ಪುಟ್ಟಪರ್ತಿಯ ವಸತಿಗೃಹವೊಂದರಿಂದ ಗೋಪಾಲ ಗೌಡನನ್ನು ಶನಿವಾರ ಬಂಧಿಸಲಾಗಿದೆ. ಇನ್ನೋರ್ವ ಆರೋಪಿ ವಸಂತ ಗೌಡನನ್ನು ಹಾಸನದ ರೆಸಾರ್ಟ್‌ವೊಂದರಿಂದ ಬಂಧಿಸಲಾಯಿತು ಎಂದು ಎಸ್ಪಿ ವಿವರಿಸಿದರು.
ಎಸ್ಸಿ/ಎಸ್ಟಿ ಆ್ಯಕ್ಟ್ ಪ್ರಕಾರ ಪ್ರಕರಣ ದಾಖಲು :
ಆರೋಪಿಗಳನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಕೇಳಲಾಗುವುದು. ಪ್ರಕರಣದಲ್ಲಿ ದಲಿತ ವ್ಯಕ್ತಿಯ ಮೇಲೆ ದೌರ್ಜನ್ಯ ನಡೆದಿರುವುದರಿಂದ ಜಿಲ್ಲಾ ಪರಿಶಿಷ್ಟ ಜಾತಿ-ಪಂಗಡದವರ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ. ಆರೋಪಿ ಗೋಪಾಲ ಗೌಡನ ವಿರುದ್ಧ ಗೂಂಡಾ ಕಾಯ್ದೆಯನ್ನು ಹಾಕುವ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ. ಆರೋಪಿ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಅ.ಕ್ರ.319/2015ಕಲಂ 447, 504, 326, 506 ಮತ್ತು 307 ಜೊತೆಗೆ 34 ಭಾ.ದಂ.ಸಂ ಮತ್ತು 3(1)9(ಎಕ್ಸ್)ಮತ್ತು ಕಲಂ:3(2)(ವಿ) ಎಸ್ಸಿ/ಎಸ್ಟಿ ಆ್ಯಕ್ಟ್ ಪ್ರಕಾರ ಪ್ರಕರಣ ದಾಖಲಾಗಿದೆ ಎಂದು ಡಾ.ಶರಣಪ್ಪ ಎಸ್.ಡಿ ಅವರು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಸಿಬ್ಬಂದಿಗೆ ಇಲಾಖಾ ಮಟ್ಟದ ಪುರಸ್ಕಾರ ನೀಡಲಾಗುವುದು ಎಂದು ಎಸ್ಪಿ ಡಾ.ಶರಣಪ್ಪ ಎಸ್.ಡಿ. ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿ.ಶಾಂತಕುಮಾರ್ ಉಪಸ್ಥಿತರಿದ್ದರು.