ಲಂಡನ್: ಲಿಯೋನಾರ್ಡೋ ಡಾವಿಂಚಿಯ ಅತ್ಯುನ್ನತ ಕಲಾಕೃತಿ ಮೊನಾಲಿಸಾಳ ಮುಗುಳ್ನಗೆ ಮತ್ತೆ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದೆ. ಬ್ರಿಟಿಷ್ ಸಂಶೋಧಕರು ಆ ನಿಗೂಢ ಮಂದಸ್ಮಿತ ಮುಖದ ಬಗೆಗಿನ ರಹಸ್ಯಗಳನ್ನು ಬಿಚ್ಚಿಡುವ ಪ್ರಯತ್ನ ನಡೆಸಿದ್ದಾರೆ.
ವಿಶೇಷವೆಂದರೆ ಈ ಅಧ್ಯಯನಕ್ಕೆ ಸಹಾಯ ಮಾಡಿದ್ದು ಅದೇ ಡಾ ವಿಂಚಿಯ ಇನ್ನೊಂದು ಅಪೂರ್ವ ಪೇಂಟಿಂಗ್! ಡಾ ವಿಂಚಿ ರಚಿಸಿದ್ದ ಮಿಲಾನೀ ಶ್ರೀಮಂತನೊಬ್ಬನ ಮಗಳು, ಲೀ ಬೆಲ್ಲಾಪ್ರಿನ್ಸಿಪೆಸ್ಸಾಳ ಚಿತ್ರವೊಂದು ಅಧ್ಯಯನಕಾರರಿಗೆ ಇತ್ತೀಚೆಗೆ ಸಿಕ್ಕಿದ್ದು, ಮೊನಾಲಿಸಾ ಪೇಂಟಿಂಗ್‍ನಲ್ಲಿ ಆ ವಿಭಿನ್ನ ಮುಗುಳ್ನಗೆ ಚಿತ್ರಿಸಲು ಸಾಧ್ಯವಾದದ್ದು ಹೇಗೆ ಎಂಬುದನ್ನು ವ್ಯಾಖ್ಯಾನಿಸಲು ಈ ಚಿತ್ರ ಬಲ ನೀಡಿದೆ.
ಪಾಶ್ರ್ವಕೋನದಲ್ಲಿರುವ ಪ್ರಿನ್ಸಿಪೆಸ್ಸಾ ಚಿತ್ರ ನೋಡಿದ ಅವರು, ಮೊನಾಲಿಸಾಳ ಫೋಟೋವನ್ನು ಎದುರಿನಿಂದ ನೋಡಿದರೆ, ಆಕೆಯ ಮುಗುಳ್ನಗು ಪೂರ್ತಿ ಅಭಿವ್ಯಕ್ತಿಯಾಗುವುದಿಲ್ಲ. ಆದರೆ ಅದೇ ಮೊನಾಲಿಸಾಳನ್ನು ಸೈಡ್ ಪೋಸ್‍ನಲ್ಲಿ ವೀಕ್ಷಿಸಿದ್ದೇ ಆದರೆ, ನಗು ತುಂಬ ಸ್ಪಷ್ಟವಾಗಿ ಕಾಣಿಸುತ್ತದೆ ಎಂದು ಹೇಳಿದ್ದಾರೆ. ಶೆಫೀಲ್ಡ್ ಹ್ಯಾಲಮ್ ವಿವಿಯ ಸಂಶೋಧಕರ ಪ್ರಕಾರ ಫುಮ್ಯಾಟೋ ಎಂಬ ತಂತ್ರ ಬಳಸಿ ಈ ಎರಡೂ ಚಿತ್ರವನ್ನು ಡಾವಿಂಚಿ ರಚಿಸಿದ್ದಾರೆ.
ಫುಮ್ಯಾಟೋ ಅಂದರೆ ಮಂದ ಅಥವಾ ಮೃದು ಎಂದರ್ಥ. ಕೆಲವು ಡಲ್ ಬಣ್ಣಗಳನ್ನು ಬಳಸಿ ಬಾಯಿಯ ಭಾಗವನ್ನು ಚಿತ್ರಿಸುವುದರಿಂದ ಅದು ನೋಡುಗರಲ್ಲಿ ಭ್ರಮೆ ಸೃಷ್ಟಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಮೊನಾಲಿಸಾ ಚಿತ್ರದಲ್ಲಿ ಬರೀ ಕಣ್ಣನ್ನೇ ನೋಡಿದರೆ, ತುಟಿಗಳು ಬಟ್ಟಲಂತೆ ಕಂಡು ಚಿಕ್ಕದೊಂದು ಸ್ಮೈಲ್ ಇರುವಂತೆ ಕಾಣುತ್ತದೆ. ಆದರೆ ನೇರವಾಗಿ ಬಾಯನ್ನೇ ಗಮನಿಸಿದರೆ, ತುಟಿಗಳು ನಿರ್ಲಿಪ್ತವಾಗಿದ್ದಂತೆ ನಿರ್ಭಾವುಕವೆಂಬಂತೆ ಕಾಣಿಸುತ್ತದೆ ಎಂದಿದ್ದಾರೆ.
ಮಂದ ಬಣ್ಣಗಳೇ ಕಾರಣವಂತೆ!
ಮಿಲಾನಿಯಾ ಧನಿಕನ ಪುತ್ರಿ ಪ್ರಿನ್ಸಿಪೆಸ್ಸಾ ಚಿತ್ರವೇ ಮೊನಾಲಿಸಾ ಪೇಂಟಿಂಗ್‍ಗೆ ಸ್ಪೂರ್ತಿ
ಡಾವಿಂಚಿ ಬಳಸುತ್ತಿದ್ದ ಮಂದ ಬಣ್ಣಗಳೇ ಇದಕ್ಕೆ ಕಾರಣ
ಮೊನಾಲಿಸಾ ಚಿತ್ರದಲ್ಲಿ ನೇರವಾಗಿ ನೋಡಿದರೆ ಕಾಣದ ನಗು ಪಾಶ್ರ್ವಕೋನದಿಂದ ಕಾಣುತ್ತದೆ.