ಕೊಲಂಬೊ: ಶ್ರೀಲಂಕಾ ಪ್ರವಾಸದಲ್ಲಿರುವ ಭಾರತ ತಂಡ ತನ್ನ 2ನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ 278 ರನ್ ಗಳ ಜಯ ಸಾಧಿಸಿದೆ.
ಭಾರತ ನೀಡಿದ್ದ 413 ರನ್ ಗಳ ಗುರಿ ಬೆನ್ನು ಹತ್ತಿದೆ ಶ್ರೀಲಂಕಾ ತಂಡ ಕೇವಲ 134 ರನ್ ಗಳಿಗೆ ಸರ್ವ ಪತನ ಕಾಣುವ ಮೂಲಕ ಸೋಲಿಗೆ ಶರಣಾಗಿದೆ. ಆ ಆಮೂಲಕ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 1-1ರಿಂದ ಸಮಬಲ ಸಾಧಿಸಿದೆ. ಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕಾರ ಅವರಿಗೆ ಇಂದು ವಿದಾಯದ ಪಂದ್ಯವಾಗಿದ್ದು, ಪಂದ್ಯದ ಸೋಲಿನಿಂದಾಗಿ ಅವರು ನಿರಾಶೆಯಿಂದಲೇ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಹೇಳುವಂತಾಯಿತು.
ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಕೆಎಲ್ ರಾಹುಲ್ (108 ರನ್), ನಾಯಕ ವಿರಾಟ್ ಕೊಹ್ಲಿ (78 ರನ್), ರೋಹಿತ್ ಶರ್ಮಾ (79 ರನ್) ಮತ್ತು ವೃದ್ಧಿಮಾನ್ ಸಹಾ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ 393ರನ್‌ಗಳ ಉತ್ತಮ ಮೊತ್ತವನ್ನು ಕಲೆ ಹಾಕಿತ್ತು. ಇದಕ್ಕೆ ಉತ್ತರವಾಗಿ ಲಂಕಾ ತಂಡ ಮ್ಯಾಥ್ಯೂಸ್ (102 ರನ್), ತಿರುಮಾನ್ನೆ (62 ರನ್ ) ಮತ್ತು ಸಿಲ್ವಾ (51 ರನ್)ಅವರ ಸಮಯೋಚಿತ ಆಟದ ನೆರವಿನಿಂದ 306 ರನ್‌ಗಳಿಸಲಷ್ಟೇ ಶಕ್ತವಾಯಿತು. ಆ ಭಾರತ ತಂಡ 87 ರನ್ ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿ, 8 ವಿಕೆಟ್ ನಷ್ಟಕ್ಕೆ 325 ರನ್ ಗೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.
ಆ ಮೂಲಕ ಶ್ರೀಲಂಕಾಕ್ಕೆ ಗೆಲ್ಲಲು ಒಟ್ಟು 413 ರನ್ ಗಳ ಉತ್ತಮ ಗುರಿ ನೀಡಿತು. ನಾಲ್ಕನೇ ದಿನದಾಟದ ಅಂತ್ಯಕ್ಕೆ ಲಂಕಾ ತಂಡ ಎರಡು ವಿಕೆಟ್ ಕಳೆದುಕೊಂಡು 72 ರನ್ ಬಾರಿಸಿತ್ತು. ಇಂದು ತನ್ನ ಆಟವನ್ನು ಮುಂದುವರಿಸಿದ ಲಂಕಾ ತಂಡಕ್ಕೆ ಭಾರತ ಬಿಗುವಿನ ಬೌಲಿಂಗ್ ದಾಳಿ ಸೋಲಿನ ರುಚಿ ತೋರಿಸಿತು. ಉತ್ತಮವಾಗಿ ಬೌಲಿಂಗ್ ಮಾಡಿದ ಆರ್ ಅಶ್ವಿನ್ ಎರಡನೇ ಇನ್ನಿಂಗ್ಸ್ ನಲ್ಲಿ ಒಟ್ಟು 5 ವಿಕೆಟ್ ಮತ್ತು ಅಮಿತ್ ಮಿಶ್ರಾ 3 ವಿಕೆಟ್ ಕಬಳಿಸುವ ಮೂಲಕ ಲಂಕಾ ಸೋಲಿಗೆ ಕಾರಣರಾದರು. ಭೋಜನ ವಿರಾಮದ ವೇಳೆಗೆ ಲಂಕಾ ಕೇವಲ130 ರನ್ ಗಳಿಗೆ ತನ್ನ 9 ವಿಕೆಟ್‌ಗಳನ್ನು ಕಳೆದುಕೊಳ್ಳುವ ಮೂಲಕ ಸೋಲಿನ ಭೀತಿ ಎದುರಿಸಿತು. ಈ ವೇಳೆ ದಿಢೀರನೆ ಮಳೆ ಸುರಿದಿದ್ದರಿಂದ ಆಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆದರೆ ಮತ್ತೆ ಮಳೆ ನಿಂತ ಬಳಿಕ ಆಟ ಮುಂದುವರೆಸಿದ ಭಾರತ ತಂಡ ಲಂಕಾ ತಂಡವನ್ನು 134 ರನ್ ಗಳಿಗೆ ಕಟ್ಟಿಹಾಕುವ ಮೂಲಕ ಭರ್ಜರಿ 278 ರನ್ ಗಳ ಜಯ ಸಾಧಿಸಿತು.
ದ್ವಿತೀಯ ಇನ್ನಿಂಗ್ಸ್ ನಲ್ಲಿ ಲಂಕಾಪರ ದಿಮುತ್ ಕರುಣರತ್ನೆ ಅವರು 46 ರನ್ ಬಾರಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡದ್ದನ್ನು ಬಿಟ್ಟರೆ ಉಳಿದ ಯಾವ ಆಟಗಾರರೂ 23ಕ್ಕಿಂತ ದೊಡ್ಡ ಮೊತ್ತದ ಕಾಣಿಕೆಯನ್ನು ನೀಡಲಿಲ್ಲ. ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಿದ ಕೆಎಲ್ ರಾಹುಲ್ ಅರ್ಹವಾಗಿಯೇ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.
ಸಂಕ್ಷಿಪ್ತ ಸ್ಕೋರ್ ವಿವರ
ಭಾರತ ಮೊದಲ ಇನ್ನಿಂಗ್ಸ್ 393/10
ಶ್ರೀಲಂಕಾ ಮೊದಲ ಇನ್ನಿಂಗ್ಸ್ 306/10
ಭಾರತ ಎರಡನೇ ಇನ್ನಿಂಗ್ಸ್ 325/8 (ಡಿಕ್ಲೇರ್)
ಶ್ರೀಲಂಕಾ ಎರಡನೇ ಇನ್ನಿಂಗ್ಸ್ 134/10
ಫಲಿತಾಂಶ: ಭಾರತಕ್ಕೆ 278 ರನ್ ಗಳ ಭರ್ಜರಿ ಜಯ
ಪಂದ್ಯ ಪುರುಷೋತ್ತಮ: ಕೆಎಲ್ ರಾಹುಲ್