ಮನೋರಂಜನೆ

ಅಣ್ಣಾವ್ರ ಮಕ್ಕಳು ಸ್ವಾತಂತ್ರ್ಯ ಹೋರಾಟಗಾರರಾಗಿ ಮಿಂಚಲಿದ್ದಾರೆಯೇ…!

Pinterest LinkedIn Tumblr

shiv

ಈಸೂರು ದಂಗೆ ಚಿತ್ರದಲ್ಲಿ ಶಿವರಾಜ್‌ಕುಮಾರ್ ಸ್ವಾತಂತ್ರ್ಯ ಹೋರಾಟಗಾರನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಗೊತ್ತಿರುವ ವಿಷಯ. ಇದೀಗ ಇವರ ಸಹೋದರ ಪುನೀತ್ ರಾಜ್‌ಕುಮಾರ್ ಕೂಡ ಇಂಥ ಸಿನಿಮಾದಲ್ಲಿ ನಟಿಸುವ ಇಚ್ಛೆ ಹೊಂದಿದ್ದಾರೆ.

ಹಾಗೇನಾದರೂ ಆದರೆ, ಮೂವರೂ ರಾಜ್ ಪುತ್ರರನ್ನು ಈಸೂರು ದಂಗೆ ಚಿತ್ರದಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನಾಗಿ ತೋರಿಸುವ ಇಂಗಿತವನ್ನು ಈ ಚಿತ್ರದ ನಿರ್ದೇಶಕ ವೈಭವ್ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಶಿವಮೊಗ್ಗದಲ್ಲಿ ಮಾತನಾಡುತ್ತಿದ್ದ ಪುನೀತ್, ‘ಈಸೂರು ದಂಗೆ ಬಗ್ಗೆ ನಾನೂ ಕೇಳಿದ್ದೇನೆ. ಇಂಥ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕರೆ ಖಂಡಿತ ಒಪ್ಪಿಕೊಳ್ಳುತ್ತೇನೆ’ ಎಂದಿದ್ದಾರೆ.

‘ಈಸೂರು ದಂಗೆ ಚಿತ್ರದಲ್ಲಿ ನಾಯಕನ ಪಾತ್ರದಷ್ಟೇ ಪ್ರಮುಖವಾದ ಹಲವು ಪಾತ್ರಗಳು ಇನ್ನೂ ಇವೆ. ಪುನೀತ್ ಒಪ್ಪಿದಲ್ಲಿ ನಿಜಕ್ಕೂ ಅಪರೂಪದ ಚಿತ್ರ ಇದಾಗಲಿದೆ. ಮೂವರೂ ಸಹೋದರರನ್ನು ಸ್ವಾತಂತ್ರ್ಯ ಹೋರಾಟಗಾರರನ್ನಾಗಿ ತೋರಿಸುವ ಆಸೆ ನನಗಿದೆ’ ಎಂದಿದ್ದಾರೆ ನಿರ್ದೇಶಕ ವೈಭವ್. ಹೊಸ ರೀತಿಯ ಪಾತ್ರಗಳನ್ನು ಬಯಸುವ ಪುನೀತ್, ಈಸೂರು ದಂಗೆಯಂಥ ಚಿತ್ರದಲ್ಲಿ ನಟಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ರವಿವರ್ಮ ನಿರ್ದೇಶನದ ಹೊಸ ಚಿತ್ರವೊಂದರಲ್ಲಿ ಶಿವರಾಜ್ ಕುಮಾರ್ ಮತ್ತು ಪುನೀತ್ ಒಟ್ಟಿಗೆ ನಟಿಸಲಿರುವುದು ಅವರ ಅಭಿಮಾನಿಗಳಲ್ಲಿ ರೋಮಾಂಚನ ಉಂಟುಮಾಡಿದೆ. ಈಗ ಈಸೂರು ದಂಗೆಯಲ್ಲೂ ನಟಿಸಿದ್ದಲ್ಲಿ ಸಹೋದರರನ್ನು ಸ್ವಾತಂತ್ರ್ಯ ಹೋರಾಟಗಾರರನ್ನಾಗಿ ಒಟ್ಟಿಗೆ ನೋಡುವ ಅವಕಾಶ ಅಭಿಮಾನಿಗಳದ್ದಾಗಲಿದೆ.

ಬ್ರಿಟಿಷರ ವಿರುದ್ಧ ಸೆಡ್ಡು ಹೊಡೆದು ಪ್ರತ್ಯೇಕ ಸರಕಾರವನ್ನು ಸ್ಥಾಪಿಸಿ ಜಗತ್ತಿನ ಗಮನ ಸೆಳೆದ ಗ್ರಾಮ ಈಸೂರು. ಐವರು ಸ್ವಾತಂತ್ರ್ಯ ಹೋರಾಟಗಾರರ ಕೆಚ್ಚೆದೆಯ ಹೋರಾಟಕ್ಕೆ ಸಾಕ್ಷಿ ಈ ಗ್ರಾಮ. ಈ ಐವರಲ್ಲಿ ಒಬ್ಬರಾದ ಸೂರಿಯ ಪಾತ್ರದಲ್ಲಿ ಶಿವರಾಜ್ ಕುಮಾರ್ ಅಭಿನಯಿಸಲಿದ್ದಾರೆ. -ಪದ್ಮಾ

ಈ ಚಿತ್ರದಲ್ಲಿ ಐವರು ಹೋರಾಟಗಾರರಿದ್ದಾರೆ. ಅದರಲ್ಲಿ ಒಂದು ಪ್ರಮುಖ ಪಾತ್ರ ಪುನೀತ್ ಅಭಿನಯಿಸುವುದಕ್ಕೆ ಒಪ್ಪಿದರೆ ನಮಗೆ ತುಂಬ ಖುಷಿ. ರಾಘವೇಂದ್ರ ರಾಜ್ ಕುಮಾರ್ ಅವರೂ ಅಭಿನಯಿಸಲು ಒಪ್ಪಿದರೆ, ಈಸೂರಿನ ಚರಿತ್ರೆಯನ್ನು ಅಣ್ಣಾವ್ರ ಮಕ್ಕಳ ಮೂಲಕ ಪರಿಚಯಿಸುವ ಭಾಗ್ಯ ನಮ್ಮದಾಗುತ್ತದೆ. – ವೈಭವ್, ನಿರ್ದೇಶಕ

Write A Comment