ನವದೆಹಲಿ: ಕಂಠ ಪೂರ್ತಿ ಕುಡಿದು ದೆಹಲಿ ಮೆಟ್ರೋ ಏರಿದ್ದ ಪೊಲೀಸ್ ಪೇದೆಯನ್ನು ಅಮಾನತುಗೊಳಿಸಲಾಗಿದೆ.
ಪಾನಮತ್ತ ಪೇದೆ ಮೆಟ್ರೋ ರೈಲಿನಲ್ಲಿ ತೂರಾಡುತ್ತಿದ್ದ ವಿಡಿಯೋ ಆ.24 ರಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು. ಪಾನಮತ್ತ ಪೊಲೀಸ್ ಪೇದೆಯನ್ನು ಗುರುತಿಸಲಾಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸಿದ್ದ ಪೊಲೀಸ್ ಪೇದೆಯನ್ನು ಅಮಾನತುಗೊಳಿಸಲಾಗಿದೆ ಎಂದು ದೆಹಲಿ ಪೊಲೀಸ್ ಆಯುಕ್ತ ಬಸ್ಸಿ ಹೇಳಿದ್ದಾರೆ.
ಇದೇ ವೇಳೆ ಪೊಲೀಸ್ ಇಲಾಖೆಯ ಪೇದೆಗಳಿಗೆ ಎಚ್ಚರಿಕೆ ನೀಡಿರುವ ಬಸ್ಸಿ, ಯಾವುದೇ ಪೇದೆ ಸಮವಸ್ತ್ರ ಧರಿಸಿ ಮದ್ಯಪಾನ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಮದ್ಯದ ಅಮಲಿನಲ್ಲಿದ್ದ ಪೇದೆ ನಿಂತಿಕೊಳ್ಳಲು ಸಾಧ್ಯವಾಗದೆ ಅತ್ತಿಂದಿತ್ತ ತೂರಾಡಿ ಜೊತೆಗೆ ನಿಯಂತ್ರಣ ಕಳೆದುಕೊಂಡು ರೈಲಿನಲ್ಲಿ ಬಿದ್ದಿದ್ದ ಪೊಲೀಸ್ ಪೇದೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗಿತ್ತು.