ಮಂಗಳೂರು : ಮಂಗಳೂರಿನ ಹೊರವಲಯದ ನೀರುಮಾರ್ಗ ಸಮೀಪದ ಸರಿಪಳ್ಳದಲ್ಲಿನ ಗುಡ್ಡವೊಂದರ ನಿರ್ಜನ ಪ್ರದೇಶದಲ್ಲಿ ಎರಡು ಬೈಕ್ ಮತ್ತು ಮಾರಕಾಯುಧಗಳು ಪತ್ತೆಯಾಗಿದೆ.
ಸೋಮವಾರ ಸರಿಪಳ್ಳದ ಗುಡ್ಡವೊಂದರ ನಿರ್ಜನ ಪ್ರದೇಶದಲ್ಲಿ ಬೈಕ್ ನಿಲ್ಲಿಸಿದ್ದನ್ನು ಕಂಡು ಸಂಶಯಗೊಂಡ ಸ್ಥಳೀಯರು ಸ್ಥಳಕ್ಕೆ ಭೇಟಿ ನೀಡಿದಾಗ, ಸ್ವಲ್ಪ ದೂರದಲ್ಲಿ ಇನ್ನೊಂದು ಬೈಕ್ ನಿಲ್ಲಿಸಿದ್ದು ಕಾಣಿಸಿತ್ತು. ಈ ಎರಡೂ ಬೈಕ್ ಗಳ ಪೆಟ್ರೋಲ್ ಟ್ಯಾಂಕ್‌ನ ಮುಚ್ಚಳ ತೆರೆದು ಟ್ಯಾಂಕ್‌ನ ಒಳಗೆ ಕಸ ತುಂಬಿಸಿಡಲಾಗಿತ್ತು.
ಸ್ಥಳೀಯರು ಸ್ಥಳವನ್ನು ಇನ್ನಷ್ಟು ಪರಿಶೀಲಿಸಿದಾಗ ಅನತಿ ದೂರದ ಪೊದೆಯೊಂದರಲ್ಲಿ ಡೇರೆಯೊಂದು ಕಂಡು ಬಂದಿದ್ದು, ಸ್ಥಳೀಯರು ಡೇರೆ ಬಳಿ ಸಮೀಪಿಸುತ್ತಿದ್ದಂತೆ ಇವರನ್ನು ನೋಡಿ ಡೇರೆಯೊಳಗಿನಿಂದ ಇಬ್ಬರೂ ಯುವಕರು ಪರಾರಿಯಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಡೇರೆಯ ಒಳಗೆ ಹರಿತವಾದ ಕತ್ತಿಗಳು, ಕಬ್ಬಿಣದ ರಾಡ್, ಇನ್ನಿತರ ಮಾರಕಾಯುಧಗಳು ಪತ್ತೆಯಾಗಿದೆ. ತಕ್ಷಣ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಗ್ರಾಮಾಂತರ ಪೊಲೀಸರು ಡೇರೆಯ ಒಳಗೆ ಪರಿಶೀಲನೆ ನಡೆಸಿದಾಗ ಡೇರೆಯೊಳಗೆ ಸೊಳ್ಳೆ ನಿವಾರಕ ಬತ್ತಿಗಳು ಉರಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಯುವಕರು ಹಿಂದಿನ ದಿನ ರಾತ್ರಿಯೇ ಇಲ್ಲಿ ತಂಗಿರ ಬೇಕೆಂದು ಊಹಿಸಲಾಗಿದೆ. ಪರಾರಿಯಾಗಿರುವ ಆರೋಪಿಗಳು ಯಾವೂದೋ ಅಪರಾಧ ಕೃತ್ಯ ಎಸಗುವ ಹಿನ್ನೆಲೆಯಲ್ಲಿ ಇಲ್ಲಿ ಅಡಗಿರ ಬೇಕು ಎಂದು ಪೊಲೀಸರು ಶಂಕೀಸಿದ್ದಾರೆ
ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ.