ಮಂಗಳೂರು: ಕರ್ನಾಟಕದ ಬಂದರು ಮತ್ತು ಜವುಳಿ ಸಚಿವ ಬಾಬುರಾವ್ ಚಿಂಚನಸೂರು ಅವರು ಬುಧವಾರ ನಗರಕ್ಕೆ ಆಗಮಿಸಿ, ಮಂಗಳೂರು ಹಳೇ ಬಂದರಿನಲ್ಲಿ ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪದ ಹಡಗುಗಳಿಗಾಗಿಯೇ ಜೆಟ್ಟಿ ನಿರ್ಮಿಸಲು ಕರ್ನಾಟಕ ಸರ್ಕಾರ ಮತ್ತು ಲಕ್ಷದ್ವೀಪ ಸರ್ಕಾರಗಳ ನಡುವೆ ಒಡಂಬಡಿಕೆಗೆ ಸಹಿ ಹಾಕಿದರು.
ಬಳಿಕ ಸುದ್ಧಿಗಾರರ ಜೊತೆ ಮಾತನಾಡಿದ ಸಚಿವರು, ಕರ್ನಾಟಕ ಸರ್ಕಾರ ಈ ಜೆಟ್ಟಿ ನಿರ್ಮಿಸಲು ಎಲ್ಲಾ ರೀತಿಯ ಸಹಕಾರ ನೀಡುತ್ತದೆ ಮತ್ತು ಕಾಲಮಿತಿಯಲ್ಲಿ ಕಾಮಗಾರಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸುವುದಾಗಿ ಹೇಳಿದರು.
ಬಂದರು ಅಭಿವೃದ್ಧಿಗಾಗಿ ಹೆಚುವರಿಯಾಗಿ 200 ಕೋಟಿ ರೂಪಾಯಿ ಅನುದಾನ ಕೊಡುವಂತೆ ಕೇಂದ್ರ ಸಚಿವರನ್ನು ಕೇಳಿಕೊಂಡಿದ್ದು ಅವರು ಧನಾತ್ಮಕವಾಗಿ ಪ್ರತಿಕ್ರಿಯೆಸಿದ್ದಾರೆ. ಈಗ ನಿರ್ಮಾಣ ಮಾಡುತ್ತಿರುವ ಜೆಟ್ಟಿ ಶಾಸಕ ಜೆ.ಆರ್.ಲೋಬೋ ಅವರ ಕನಸಿನಕೂಸು. ಕಳೆದ 35 ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಅವರ ಪ್ರಯತ್ನದ ಫಲವಾಗಿ 50 ಕೋಟಿ ರೂಪಾಯಿ ಅನುದಾನ ಪಡೆಯುತ್ತಿದ್ದೇವೆ ಎಂದು ಸಚಿವರು ತಿಳಿಸಿದರು.
ಶಾಸಕ ಜೆ.ಆರ್.ಲೋಬೋ ಅವರು ಮಾತನಾಡಿ ಇಂದು ಜೆಟ್ಟಿ ನಿರ್ಮಾಣದ ಒಡಂಬಡಿಕೆಗೆ ಸಹಿ ಹಾಕುವ ಮೂಲಕ ಮಹತ್ವದ ಸಾಧನೆಗೆ ನಾಂದಿಯಾಗಿದೆ. ಮೂಲಭ್ಯ್ತ ಸೌಕರ್ಯಗಳ ಕೊರತೆಯ ಕಾರಣಕ್ಕೆ ಮಂಗಳೂರು ಮತ್ತು ಲಕ್ಷದ್ವೀಪದ ನಡುವೆ ವಹಿವಾಟು ಇಳಿಮುಖವಾಗಿತ್ತು. ಜೆಟ್ಟಿ ನಿರ್ಮಾಣವಾದ ಮೇಲೆ ಮತ್ತೆ ವ್ಯಾಪಾರ ಕುದುರುತ್ತದೆ ಎನ್ನುವ ವಿಶ್ವಾಸವಿದೆ ಎಂದರು.
ಇದೇ ಸಂದರ್ಭದಲ್ಲಿ ಶಾಸಕರು ಬಂದರಿನ ಹೂಳು ಎತ್ತುವಂತೆ ಮನವಿ ಮಾಡಿ ಸುಮಾರು 7 ಮೀಟರ್ ಆಳವಾಗಬೇಕು, ಆಗ ದೊಡ್ಡ ಹಡಗುಗಳು ಇಲ್ಲಿಗೆ ಬರಲು ಅನುಕೂಲವಾಗುತ್ತದೆ ಎಂದರು.
ಸಂಸದ ನಳಿನ್ ಕುಮಾರ್ ಕಟೀಲ್ ಕೂಡಾ ಲೋಬೋ ಅವರ ಮಾತನ್ನು ಬೆಂಬಲಿಸಿ ಬಂದರಿನ ಹೂಳು ತೆಗೆಸುವುದು ಅಗತ್ಯವೆಂದು ಪ್ರತಿಪಾದಿಸಿದರು.
ಇದೇ ಸಂದರ್ಭದಲ್ಲಿ ಲಕ್ಷದ್ವೀಪದ ಸಂಸದ ಪಿಪಿ. ಮೊಹಮ್ಮದ್ ಫೈಸಲ್ ಮಾತನಾಡಿ ಈ ಒಡಂಬಡಿಕೆ ಮೂಲಕ ಮಂಗಳೂರು ಮತ್ತು ಲಕ್ಷದ್ವೀಪದ ಮಧ್ಯೆ ವ್ಯಾಪಾರ ವೃದ್ಧಿಯಾಗುತ್ತದೆ ಎಂದರಲ್ಲದೇ ತಾತ್ಕಾಲಿಕವಾಗಿ ತಕ್ಷಣಕ್ಕೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಮನವಿ ಮಾಡಿದರು.
ಈ ಸಂದರ್ಭ ಎಂಎಲ್ ಸಿ ಐವನ್ ಡಿಸೋಜಾ, ಕಾರ್ಪೊರೇಟರ್ ಲತೀಫ್, ಲಕ್ಷದ್ವೀಪ ಆಡಳಿತಾಧಿಕಾರಿ ರಾಜೇಶ್ ಪ್ರಸಾದ್, ಪೋರ್ಟ್ ಡೈರೆಕ್ಟರ್ ಕ್ಯಾ.ಮೋಹನ್ ಜೊತೆಗಿದ್ದರು.