ಅಹ್ಮದಾಬಾದ್: ಮೀಸಲಾತಿ ಆಗ್ರಹಿಸಿ ಹಾರ್ದಿಕ್ ಪಟೇಲ್ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾ ರೂಪ ತಾಳಿದ್ದು, ಬುಧವಾರ ಆರು ಮಂದಿಯನ್ನು ಬಲಿ ತಗೆದುಕೊಂಡಿದೆ.
ಬುಧವಾರ ಪಾಟಿದಾರ್ ಅನಾಮತ್ ಆಂದೋಲನ್ ಸಮಿತಿ ಕರೆ ನೀಡಿದ್ದ ರಾಜ್ಯ ಬಂದ್ ವೇಳೆ ನಡೆಯುತ್ತಿದ್ದ ಪ್ರತಿಭಟನೆ ಹಿಂಸೆಗೆ ತಿರುಗಿದ್ದರಿಂದ, ಉದ್ವಿಗ್ನಗೊಂಡಿದ್ದ ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಗೋಲಿಬಾರ್ ನಡೆಸಬೇಕಾಯಿತು. ಇದಕ್ಕೆ ಆರು ಮಂದಿ ಬಲಿಯಾಗಿದ್ದಾರೆ.
ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತೆರಳದಂತೆ ತಡೆಯಲು ಕೇಂದ್ರೀಯ ಮೀಸಲು ಪಡೆ ಹಾಗೂ ಗಡಿ ಭದ್ರತಾ ಪಡೆಯನ್ನು ಕರೆಯಿಸಲಾಗಿದ್ದು, ಶಾಂತಿ ಮತ್ತು ಕಾನೂನು ವ್ಯವಸ್ಥೆ ಕಾಪಾಡಲು ಸಕಲ ಕ್ರಮ ಕೈಗೊಳ್ಳಲಾಗಿದೆ.
ಅಹ್ಮದಾಬಾದ್‌ನ ಒಂಬತ್ತು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿಗೊಳಿಸಿದ್ದು, ಐದು ಮಾರ್ಗಗಳಲ್ಲಿ ಸೇನಾ ಪಥ ಸಂಚಲನ ನಡೆಸಲಿದೆ, ಎಂದು ಜಿಲ್ಲಾಧಿಕಾರಿ ರಾಜ್‌ಕುಮಾರ್ ಬೇನಿವಾಲ್ ಖಚಿತಪಡಿಸಿದ್ದಾರೆ.
ಪರಿಸ್ಥಿತಿ ಹತೋಟಿಯಲ್ಲಿ: ಪಟೇಲರು ಹೆಚ್ಚಿನ ಸಂಖ್ಯೆಯಲ್ಲಿರುವ ಸೂರತ್‌ನ ಕಪೋಡ್ರಾ, ಸರ್ಥಾನ ಮತ್ತು ವರಾಚ್ಚಾ ಪ್ರದೇಶಗಳಲ್ಲಿ ನಿನ್ನೆ ರಾತ್ರಿ ಹಿಂಸಾಚಾರ ಬುಗಿಲೆದ್ದಿದ್ದು, ಬುಧವಾರ ಮಧ್ಯಾಹ್ನದ ವೇಳೆ ಪರಿಸ್ಥಿತಿ ಹತೋಟಿಗೆ ಬಂದಿತ್ತು.
ಪಾಲನ್‌ಪುರ ತಾಲೂಕಿನ ಗದ್ ಹಳ್ಳಿಯಲ್ಲಿ ಠಾಣೆ ಮೇಲೆ ಹಲ್ಲೆ ನಡೆಸಿದ ಗುಂಪಿನ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದರಿಂದ, ಇಬ್ಬರು ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಶಾಂತಿ ಕಾಪಾಡಲು ಮಿತಿ ಮೀರಿ ಶ್ರಮಿಸಲಾಗುತ್ತಿದೆ, ಎಂದು ಗುಜರಾತ್ ಮುಖ್ಯಮಂತ್ರಿ ಆನಂದಿಬೇನ್ ಪಾಟೀಲ್ ಹೇಳಿದ್ದಾರೆ. ವದಂತಿಗಳು ಹರಡದಂತೆ ಎಚ್ಚರವಹಿಸಲು ರಾಜ್ಯದಲ್ಲಿ ಜಾಲತಾಣಗಳಿಗೆ ನಿರ್ಬಂಧ ಹೇರಲಾಗಿದೆ.
ಪ್ರಧಾನಿ ಮೋದಿಯೂ ಶಾಂತಿ ಕಾಪಾಡುವಂತೆ ರಾಜ್ಯದ ಜನರಲ್ಲಿ ಮನವಿ ಮಾಡಿದ್ದು, ಪ್ರತಿಭಟನೆಯ ನೇತೃತ್ವ ವಹಿಸಿರುವ ಹಾರ್ದಿಕ್ ಪಟೇಲ್ ಸಹ ಪರಿಸ್ಥಿತಿ ಕೈ ಮೀರದಂತೆ ಜಾಗೃತಿ ವಹಿಸಲು ಧರಣಿ ನಿರತರಲ್ಲಿ ಮನವಿ ಮಾಡಿಕೊಂಡಿದ್ದಾರೆ.