ಹೈದರಾಬಾದ್,ಆ.28: ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಭೀತಿಯನ್ನು ಸೃಷ್ಟಿಸಿರುವ ‘ಸಿರಿಂಜ್ ಸೈಕೋ’ಗಾಗಿ ಪೊಲೀಸರು ವ್ಯಾಪಕ ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ. ಈ ವಿಕ್ಷಿಪ್ತ ವ್ಯಕ್ತಿಯ ಗುರುತು ಪತ್ತೆ ಹಚ್ಚಲು ನೆರವಾಗುವ ಮಾಹಿತಿಗಳನ್ನು ಒದಗಿಸುವವರಿಗೆ ಒಂದು ಲಕ್ಷ ರೂ.ಬಹುಮಾನವನ್ನೂ ಘೋಷಿಸಲಾಗಿದೆ. ಬೈಕ್ನಲ್ಲಿ ಒಂಟಿಯಾಗಿ ಸಂಚರಿಸುವ ಈತ ಕಳೆದೊಂದು ವಾರದಲ್ಲಿ ಕನಿಷ್ಠ ಒಂಬತ್ತು ಮಹಿಳೆಯರಿಗೆ ಸಿರಿಂಜ್ ಸೂಜಿಯನ್ನು ಚುಚ್ಚಿದ್ದಾನೆ. ಆದರೆ ಆತ ಯಾವುದೇ ಅಪಾಯಕಾರಿ ದ್ರವವನ್ನು ಅವರ ಶರೀರಗಳಲ್ಲಿ ಸೇರಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಮುಖವನ್ನು ಕರ್ಚೀಫ್ನಿಂದ ಮುಚ್ಚಿಕೊಂಡು ಕಪ್ಪುಬಣ್ಣದ ಬಜಾಜ್ ಪಲ್ಸರ್ ಬೈಕ್ನಲ್ಲಿ ಸಂಚರಿಸುವ 30ರ ಹರೆಯದ ಈ ವ್ಯಕ್ತಿ ಬೆಳಗಿನ ಹೊತ್ತು ರಸ್ತೆಯಲ್ಲಿ ಓಡಾಡುವ ಮಹಿಳೆಯರಿಗೆ ಹೆಚ್ಚಾಗಿ ಪೃಷ್ಠಕ್ಕೆ ಸಿರಿಂಜ್ನ ಸೂಜಿ ಚುಚ್ಚಿ ಪರಾರಿಯಾಗುತ್ತಿದ್ದಾನೆ.
ಇಂತಹ ಮೊದಲ ಪ್ರಕರಣ ವರದಿಯಾಗಿದ್ದು ಆ.22,ಶನಿವಾರದಂದು. ಬಳಿಕ ಮಂಗಳವಾರ ಮತ್ತು ಬುಧವಾರ ಇಂತಹ ಇನ್ನಷ್ಟು ಪ್ರಕರಣಗಳು ವರದಿಯಾಗಿವೆ. ಈ ವ್ಯಕ್ತಿ ತನ್ನ ಕುಚೇಷ್ಟೆಯನ್ನು ಆನಂದಿಸುವ ವಿಕ್ಷಿಪ್ತನಿರುವಂತಿದೆ. ಪೊಲೀಸರು ಈತನ ಬಂಧನಕ್ಕಾಗಿ ವ್ಯಾಪಕ ಮಾನವಬೇಟೆಯಲ್ಲಿ ತೊಡಗಿದ್ದಾರೆ ಎಂದು ಪಶ್ಚಿಮ ಗೋದಾವರಿ ಜಿಲ್ಲಾ ಎಸ್ಪಿ ಭಾಸ್ಕರ ಭೂಷಣ್ ತಿಳಿಸಿದರು.
ಕೆಲವು ಪ್ರತ್ಯಕ್ಷದರ್ಶಿಗಳು ನೀಡಿರುವ ಮಾಹಿತಿಗಳ ಆಧಾರದಲ್ಲಿ ಪೊಲೀಸರು ಶಂಕಿತನ ರೇಖಾಚಿತ್ರವೊಂದನ್ನು ಬಿಡುಗಡೆಗೊಳಿಸಿದ್ದಾರೆ. ಜಿಲ್ಲೆಯ ಹಲವಾರು ಕಡೆಗಳಲ್ಲಿ ರಸ್ತೆಗಳಲ್ಲಿ ಬ್ಯಾರಿಕೇಡ್ಗಳನ್ನು ನಿರ್ಮಿಸಲಾಗಿದ್ದು,ಬೈಕ್ ಸವಾರರನ್ನು ತಪಾಸಣೆಗೊಳಪಡಿಸಲಾಗುತ್ತಿದೆ.
ಸ್ಥಳೀಯ ನಿವಾಸಿಗಳ ನೆರವಿನೊಂದಿಗೆ ಈ ವಿಕ್ಷಿಪ್ತನನ್ನು ಸೆರೆ ಹಿಡಿಯಲು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ.
ಹೆಚ್ಚಿನ ಘಟನೆಗಳು ಭೀಮಾವರಂ-ಪಲಕೋಲೆ-ಪೆನುಗೊಂಡ ಪ್ರದೇಶಗಳಿಂದ ವರದಿಯಾಗಿವೆ. 12ಕ್ಕೂ ಹೆಚ್ಚಿನ ಮಹಿಳೆಯರು ಈತನ ವಿಕೃತಿಯ ಬಲಿಪಶುಗಳಾಗಿದ್ದಾರೆ ಎಂದು ಸ್ಥಳೀಯ ಟಿವಿ ವಾಹಿನಿಗಳು ವರದಿ ಮಾಡಿವೆ.
ಅಪರಿಚಿತನ ದಾಳಿಯಿಂದ ಮಹಿಳೆಯರು ಆಘಾತಕ್ಕೊಳಗಾಗಿದ್ದಾರೆ. ಆದರೆ ಪ್ರಾಥಮಿಕ ಪರೀಕ್ಷೆಗಳಲ್ಲಿ ಸೂಜಿಗಳಲ್ಲಿ ಅಥವಾ ಮಹಿಳೆಯರ ದೇಹಗಳಲ್ಲಿ ಯಾವುದೇ ಹಾನಿಕಾರಕ ವಸ್ತು ಪತ್ತೆಯಾಗಿಲ್ಲ. ದಾಳಿಗೊಳಗಾದ ಮಹಿಳೆಯರ ದೇಹಸ್ಥಿತಿ ಸ್ಥಿರವಾಗಿದ್ದು,ಅವರ ರಕ್ತದ ಮಾದರಿಗಳನ್ನು ಹೈದರಾಬಾದಿನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.
ತ್ವರಿತವಾಗಿ ಆರೋಪಿಯನ್ನು ಬಂಧಿಸುವಂತೆ ರಾಜ್ಯ ಸರಕಾರವು ಪೊಲೀಸರಿಗೆ ಆದೇಶಿಸಿದೆ. ಆದರೆ ಆತ ಇನ್ನೂ ಪೊಲೀಸರ ಬಲೆಗೆ ಬಿದ್ದಿಲ್ಲ. ಹೀಗಾಗಿ ಜಿಲ್ಲೆಯ ಮಹಿಳೆಯರು ತೀವ್ರ ಕಳವಳದಲ್ಲಿದ್ದು,ಮನೆಯಿಂದ ಹೊರಗೆ ಹೋಗಲೂ ಭಯ ಪಡುತ್ತಿದ್ದಾರೆ.
ರಾಷ್ಟ್ರೀಯ