ತುಮಕೂರು, ಆ.28: ಕಳಪೆ ಕಾಮಗಾರಿಯ ಹಿನ್ನೆಲೆಯಲ್ಲಿ ಕಾಂಪೌಂಡ್ ಗೋಡೆ ಕುಸಿದು ಬಡವರ ಮನೆಗಳಿಗೆ ಹಾನಿ ಉಂಟಾಗಿದ್ದ ಶಾಂತಿನಗರ ಗೂಡ್‌ಶೆಡ್ ಕಾಲನಿಗೆ ಇಂದು ಸಂಸದ ಎಸ್.ಪಿ.ಮುದ್ದಹನುಮೇಗೌಡ,ತುಮಕೂರು ನಗರ ಶಾಸಕ ಡಾ.ರಫೀಕ್ ಅಹ್ಮದ್, ನಗರಪಾಲಿಕೆ ಸದಸ್ಯರು ಹಾಗೂ ರೈಲ್ವೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತುಮಕೂರು-ತಿಪಟೂರು ದ್ವಿಪಥ ರೈಲ್ವೆ ಹಳಿ ನಿರ್ಮಾಣದ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ತನ್ನ ವಶದಲ್ಲಿರುವ ಭೂಮಿಗೆ ರಕ್ಷಣಾ ಗೋಡೆ ನಿರ್ಮಿಸುವ ಕಾರ್ಯಕ್ಕೆ ಮುಂದಾಗಿತ್ತು. ಶಾಂತಿನಗರ ಗೂಡ್ ಶೆಡ್ ಕಾಲನಿ ಬಳಿ ಸುಮಾರು 15 ಅಡಿ ಎತ್ತರದ ಗೋಡೆಯನ್ನು ನಿರ್ಮಿಸಲಾಗಿತ್ತು. ಕಳಪೆ ಕಾಮಗಾರಿಯಿಂದಾಗಿ ಆಗಸ್ಟ್ 26ರಂದು ಸಂಜೆ ಗೋಡೆ ಕುಸಿದು ಬಿದ್ದು ನಾಲ್ಕೈದು ಮನೆಗಳಿಗೆ ಹಾನಿಯಾಗಿದ್ದ ಹಿನ್ನೆಲೆಯಲ್ಲಿ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಹಾನಿಗೊಳಗಾದ ಮನೆಗಳ ಮಾಲಕರಿಗೆ ಸಾಂತ್ವನ ಹೇಳಿದ್ದಲ್ಲದೆ, ಪರಿಹಾರದ ಭರವಸೆ ನೀಡಿದ್ದರು.
ಇಂದು ಸಂಸದ ಎಸ್.ಪಿ.ಮುದ್ದಹನುಮೇಗೌಡ ಹಿರಿಯ ರೈಲ್ವೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಕಾಂಪೌಂಡ್ ಗೋಡೆ ಕುಸಿದು ಹಾನಿಗೊಳಗಾದ ಮನೆಗಳ ಮಾಲಕರ ಅಹವಾಲು ಆಲಿಸಿ, ರೈಲ್ವೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದರು. ಕಳಪೆ ಕಾಮಗಾರಿಯಿಂದ ಕಾಂಪೌಂಡ್ ಗೋಡೆ ಕುಸಿದು ಬಿದ್ದಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ಕೂಡಲೇ ಸಂಬಂಧಪಟ್ಟ ಗುತ್ತಿಗೆದಾರರು ಹಾನಿಗೊಳಗಾದ ಮನೆಗಳನ್ನು ತಮ್ಮ ಹಣದಲ್ಲಿಯೇ ದುರಸ್ತಿಗೊಳಿಸಿಕೊಡಬೇಕು ಎಂದು ಸಂಸದರು ಸೂಚಿಸಿದ್ದು, ಇದಕ್ಕೆ ಗುತ್ತಿಗೆದಾರರು ಒಪ್ಪಿದರು. ಅಲ್ಲದೆ, ಈ ಭಾಗದ ನಾಗರಿಕರ ಮನವಿಯಂತೆ ರೈಲ್ವೆ ಅಂಡರ್‌ಪಾಸ್ ಜೊತೆಗೆ, ನಾಗರಿಕರು ರೈಲ್ವೆ ಹಳಿ ದಾಟಿ ನಗರಕ್ಕೆ ಬರಲು ಅನುಕೂಲವಾಗುವಂತೆ ಪಾದಚಾರಿ ಮೇಲ್ಸೇತುವೆ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ತುಮಕೂರು ತಹಶೀಲ್ದಾರ್ ಕಾಂತರಾಜು ಅವರು ಸ್ಥಳ ಪರಿಶೀಲನೆ ನಡೆಸಿ ಕಾಂಪೌಂಡ್‌ಗೋಡೆ ಕುಸಿತದಿಂದ ಜನರಿಗೆ ಆಗಿರುವ ತೊಂದರೆ ಕುರಿತ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದಾರೆ. ವರದಿಯ ಆಧಾರದಲ್ಲಿ ಜಿಲ್ಲಾಡಳಿತ ಪರಿಹಾರ ನೀಡಲಿದೆ.ಇದರ ಜೊತೆಗೆ ಗುತ್ತಿಗೆದಾರರು ಮನೆ ನಿರ್ಮಿಸಿ ಕೊಡಲಿದ್ದಾರೆ.ಇದರಿಂದ ಸಂತ್ರಸ್ತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಸಂಸದರು ತಿಳಿಸಿದರು.
ಈ ಸಂದರ್ಭದಲ್ಲಿ ಮೇಯರ್ ಲಲಿತಾ, ಪಾಲಿಕೆ ಸದಸ್ಯರಾದ ಟಿ.ಅರ್.ನಾಗರಾಜು,ಪ್ರೆಸ್ ರಾಜಣ್ಣ, ಆ ಭಾಗದ ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.