ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಸದ್ಯ ಬಿಡುವಿಲ್ಲದ ನಟಿ. ಒಂದೆಡೆ ಬೇರೆ ಸಿನಿಮಾಗಳಿಗೆ ಶುಭಹಾರೈಸಲು ಪತ್ರಿಕಾಗೋಷ್ಠಿಯಲ್ಲಿ ಕಾಣಿಸಿಕೊಂಡರೆ, ಇನ್ನೊಂದೆಡೆ ಮುಂದಿನ ಸಿ.ಎಂ ಆಗುವ ಭರದಿಂದ ತಿರುಗುತ್ತಿದ್ದಾರೆ. ರಾಗಿಣಿ ಕರ್ನಾಟಕದ ಮೊದಲ ಮಹಿಳಾ ಮುಖ್ಯಮಂತ್ರಿ ಪಟ್ಟ ಅಲಂಕರಿಸಲೋಸಗ ಪ್ರಚಾರದಲ್ಲಿ ತೊಡಗಿದ್ದಾರೆ ಅಂದುಕೊಳ್ಳಬೇಡಿ. ಅವರ ಮುಂದಿನ ಚಿತ್ರವೇ ‘ನಾನೇ ನೆಕ್ಸ್ಟ್ ಸಿ.ಎಂ’. ಇತ್ತೀಚೆಗೆ ಮೈಸೂರಿನಲ್ಲಿ ಚಿತ್ರದ ಮುಹೂರ್ತ ನಡೆಯಿತು. ಅದರ ಚಿತ್ರೀಕರಣಕ್ಕಾಗಿಯೇ ರಾಗಿಣಿ ಬೇರೆ ಬೇರೆ ಕಡೆ ಸುತ್ತುತ್ತಿದ್ದಾರೆ.
ಮುಸ್ಸಂಜೆ ಮಹೇಶ್ ಚಿತ್ರದ ನಿರ್ದೇಶಕರು. ‘ರಾಜಕೀಯಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಇಲ್ಲಿ ರಾಜಕೀಯ ಮೇಲಾಟವಾಗಲಿ, ವಿಡಂಬನೆಯಾಗಲಿ ಇಲ್ಲ’ ಎಂಬುದು ನಿರ್ದೇಶಕರ ಸ್ಪಷ್ಟ ನುಡಿ. ಸಾಮಾನ್ಯ ಪ್ರಜೆಯೊಬ್ಬ ತಾನು ಮುಖ್ಯಮಂತ್ರಿಯಾದರೆ ಏನೆಲ್ಲ ಜನೋಪಯೋಗಿ ಕೆಲಸ ಮಾಡಬೇಕೆಂದು ಯೋಚಿಸಬಹುದು ಎಂಬುದನ್ನು ಸಿನಿಮಾದ ಮೂಲಕ, ರಾಗಿಣಿಯ ಮೂಲಕ ಹೇಳಲು ಹೊರಟಿದ್ದಾರೆ ಮಹೇಶ್.
ಸಿನಿಮಾ ಮೂಲಕವಾದರೂ ಕರ್ನಾಟಕಕ್ಕೆ ಮಹಿಳಾ ಮುಖ್ಯಮಂತ್ರಿ ಇಲ್ಲವೆಂಬ ಕೊರತೆ ನಿವಾರಿಸುವ ಪ್ರಯತ್ನ ಮಾಡುತ್ತಿದ್ದಾರೆ ರಾಗಿಣಿ. ಚಿತ್ರದಲ್ಲಿ ಮಧ್ಯಮ ವರ್ಗದ ಕುಟುಂಬದ ಹುಡುಗಿಯಾಗಿ ಸಿ.ಎಂ ಆಗುವ ಆಕಾಂಕ್ಷೆ ಹೊಂದಿರುತ್ತಾರೆ. ಇದೇ ಸಂದರ್ಭದಲ್ಲಿ ನಿಜಜೀವನದಲ್ಲಿ ರಾಜಕೀಯದ ಬಗ್ಗೆ ಅವರಿಗಿರುವ ಒಲವನ್ನೂ ಹಂಚಿಕೊಂಡರು. ಸಿನಿಮಾದಲ್ಲಿ ಅಭಿಮಾನಿಗಳನ್ನು ರಂಜಿಸಿದಂತೆ ರಾಜಕೀಯ ಪ್ರವೇಶಿಸಿ ಪ್ರಜೆಗಳ ಸೇವೆ ಮಾಡಬೇಕೆಂಬ ಮಹತ್ವಾಕಾಂಕ್ಷೆ ಅವರಿಗಿದೆ.
ಆದರೆ ಸದ್ಯ ಸಮಯದ ಅಭಾವದಿಂದಾಗಿ ಆ ಕುರಿತು ಅವರು ಹೆಚ್ಚು ಯೋಚಿಸುತ್ತಿಲ್ಲ. ಐದಾರು ವರ್ಷಗಳ ನಂತರ ಅದು ಸಾಧ್ಯವಾಗಬಹುದು ಎಂಬುದು ಅವರ ಅನಿಸಿಕೆ. ಬೆಂಗಳೂರು, ಮೈಸೂರಿನಲ್ಲಿ ಚಿತ್ರೀಕರಣ ನಡೆಯಲಿದೆ. ಐದು ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಲಿದ್ದು, ಜೆ.ಜಿ. ಕೃಷ್ಣ ಕ್ಯಾಮೆರಾ ನಿರ್ವಹಿಸಲಿದ್ದಾರೆ. ಮೈಸೂರಿನ ಪ್ರೀಮಿಯರ್ ಸ್ಟುಡಿಯೊಸ್‌ನ ನಾಗ ಕುಮಾರ್ ಈ ಚಿತ್ರದ ಮೂಲಕ ನಿರ್ಮಾಣಕ್ಕೂ ಇಳಿದಿದ್ದಾರೆ.