ಕಾಸರಗೋಡು, ಆ.29: ಸಿಪಿಎಂ ಕಾರ್ಯ ಕರ್ತನೊಬ್ಬನನ್ನು ಬೈಕ್ನಲ್ಲಿ ಬಂದ ತಂಡವೊಂದು ಮಾರಕಾಯುಧಗಳಿಂದ ಕೊಚ್ಚಿ ಕೊಲೆಗೈದ ಘಟನೆ ಶುಕ್ರವಾರ ಅಪರಾಹ್ನ 3 ಗಂಟೆ ಸುಮಾರಿಗೆ ಕಾಞಂಗಾಡ್ ಸಮೀಪದ ಕಾಯಕುನ್ನು ಎಂಬಲ್ಲಿ ನಡೆದಿದೆ. ತಿರು ಓಣಂ ಸಂಭ್ರಮದಂದೇ ಕಾಸರಗೋಡಿನಲ್ಲಿ ಮತ್ತೆ ರಕ್ತ ಚೆಲ್ಲಿದ್ದು, ಅಲ್ಲಿನ ಜನತೆಯ ಆತಂಕಕ್ಕೆ ಕಾರಣವಾಗಿದೆ.
ಹತ್ಯೆಗೀಡಾದವರನ್ನು ಕೋಡೊಬೇಳೂರಿನ ಸಿ.ನಾರಾಯಣ(42) ಎಂದು ಗುರುತಿಸಲಾಗಿದೆ . ಘಟನೆಯ ವೇಳೆ ನಾರಾಯಣರ ಜೊತೆಗೆ ಇದ್ದ ಅವರ ಸಹೋದರ ಅರವಿಂದರಿಗೂ ದುಷ್ಕರ್ಮಿಗಳು ಇರಿದು ಗಂಭೀರ ಗಾಯಗೊಳಿಸಿದ್ದಾರೆ. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ವಿವರ: ನಾರಾಯಣ ಮತ್ತು ಅರವಿಂದ ಇಂದು ಅಪರಾಹ್ನ ಕಾಯಕುನ್ನುವಿನ ವಾಚನಾಲಯದಲ್ಲಿ ಕುಳಿತಿದ್ದ ವೇಳೆ ಈ ದುಷ್ಕೃತ್ಯ ಎಸಗಲಾಗಿದೆ. ಬೈಕ್ನಲ್ಲಿ ಬಂದ ಮೂವರು ನಾರಾಯಣರ ಮೇಲೆ ಮಾರಕಾಯುಧಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ದುಷ್ಕರ್ಮಿ ಗಳು ತಡೆಯಲೆತ್ನಿಸಿದ ಅರವಿಂದರಿಗೂ ಇರಿದು ಗಂಭೀರ ಗಾಯಗೊಳಿಸಲಾಗಿದೆ.
ಮಾರಕಾಯುಧಗಳ ದಾಳಿಗೆ ಸಿಲುಕಿ ಗಂಭೀರ ಗಾಯಗೊಂಡಿದ್ದ ಇಬ್ಬರನ್ನು ಕಾಞಂಗಾಡ್ ಆಸ್ಪತ್ರೆಗೆ ತಲುಪಿಸಲಾಯಿತಾದರೂ ಅಷ್ಟರಲ್ಲಿ ನಾರಾಯಣ ಮೃತಪಟ್ಟಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಅರವಿಂದರನ್ನು ಹೆಚ್ಚಿ ನ ಚಿಕಿತ್ಸೆಗಾಗಿ ಕೂಡಲೇ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊಲೆ ಕೃತ್ಯದ ಜಾಡು ಹಿಡಿದಿರುವ ಹೊಸದುರ್ಗ ಪೊಲೀಸರಿಗೆ ಇಬ್ಬರು ದುಷ್ಕರ್ಮಿಗಳ ಸುಳಿವು ಲಭ್ಯವಾಗಿರುವುದಾಗಿ ಹೇಳಲಾಗಿದೆ. ನಾರಾಯಣರ ಮೃತದೇಹವನ್ನು ಪರಿಯಾರಂ ವೈದ್ಯಕೀಯ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಘಟನೆಯ ಬಗ್ಗೆ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶನಿವಾರ ಕಾಸರಗೋಡಿನಲ್ಲಿ ಹರತಾಳ
ಕೊಲೆ ಕೃತ್ಯದ ಹಿಂದೆ ಬಿಜೆಪಿ ಕಾರ್ಯಕರ್ತರ ಕೈವಾಡ ಇದೆ ಎಂದು ಸಿಪಿಎಂ ಆರೋಪಿಸಿದೆ. ಕೃತ್ಯ ಖಂಡಿಸಿ ಆ.29ರಂದು ಬೆಳಗ್ಗೆ 6ರಿಂದ ಸಂಜೆ 6 ತನಕ ಕಾಸರ ಗೋಡು ಜಿಲ್ಲೆಯಲ್ಲಿ ಹರತಾಳಕ್ಕೆ ಸಿಪಿಎಂ ಕರೆ ನೀಡಿದೆ. ಯಾವುದೇ ಅಹಿತಕರ ಘಟನೆ ಮರುಕಳಿಸದಂತೆ ಪರಿಸರದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಜಿಲ್ಲಾ ಎಸ್ಪಿ ಎ. ಶ್ರೀನಿವಾಸ್ ನೇತೃತ್ವದ ತಂಡ ಘಟನಾ ಸ್ಥಳದಲ್ಲಿ ಮೊಕ್ಕಾಂ ಹೂಡಿದೆ. ಈ ಪರಿಸರದಲ್ಲಿ ಧ್ವಜ ನಾಶದ ಬಗ್ಗೆ ಸಿಪಿಎಂ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಕೆಲವು ದಿನ ಗಳ ಹಿಂದೆ ಘರ್ಷಣೆ ನಡೆದಿತ್ತು. ಇದೇ ವಿಚಾರವಾಗಿ ಈ ದುಷ್ಕೃತ್ಯ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ತಿರು ಓಣಂ ದಿನ ಮತ್ತೆ ಚೆಲ್ಲಿದ ರಕ್ತ
ಎರಡು ವರ್ಷಗಳ ಬಳಿಕ ಮತ್ತೆ ಓಣಂ ಹಬ್ಬದ ಸಂಭ್ರಮದಂದೇ ನಡೆದ ಭೀಕರ ಹತ್ಯೆ ಜಿಲ್ಲೆಯನ್ನು ತಲ್ಲಣಗೊಳಿಸಿದೆ. 2013ರ ತಿರುಓಣಂ ದಿನ ಉದುಮದಲ್ಲಿ ಸಿಪಿಎಂ ಕಾರ್ಯಕರ್ತ ಬಾಲಕೃಷ್ಣನ್ ಎಂಬವರನ್ನು ಕೊಲೆಗೈಯ್ಯಲಾಗಿತ್ತು. ಕಾಂಗ್ರೆಸ್ ಕಾರ್ಯಕರ್ತರು ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದರು. ಅಂದು ಕೂಡಾ ತಿರು ಓಣಂನ ಮರುದಿನ ಜಿಲ್ಲೆಯಲ್ಲಿ ಹರತಾಳ ನಡೆದಿತ್ತು.