ಮಂಗಳೂರು, ಆ.29: ದ.ಕ. ಜಿಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕೊಟ್ಪಾ ಕಾಯ್ದೆಯ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಸಮರ್ಪಕ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಕಳೆದ ಎರಡು ತಿಂಗಳ ಅವಧಿಯಲ್ಲಿ 1,837 ಪ್ರಕರಣಗಳನ್ನು ದಾಖಲಿಸಿ 3,28,870 ರೂ. ದಂಡವನ್ನು ಸಂಗ್ರಹಿಸಲಾಗಿದೆ ಎಂದು ದ.ಕ. ಜಿಲ್ಲಾ ಎಸ್ಪಿ ಡಾ. ಶರಣಪ್ಪ ಎಸ್.ಡಿ. ತಿಳಿಸಿದ್ದಾರೆ.
ಶುಕ್ರವಾರ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಕೊಟ್ಪಾ ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ 2013ರಲ್ಲಿ 659 ಪ್ರಕರಣಗಳನ್ನು ದಾಖಲಿಸಿ 57,000 ರೂ. ದಂಡ, 2014ರಲ್ಲಿ 246 ಪ್ರಕರಣಗಳನ್ನು ದಾಖಲಿಸಿ 41,500 ರೂ. ದಂಡ, 2015ರಲ್ಲಿ ಈವರೆಗೆ 1,991 ಪ್ರಕರಣಗಳನ್ನು ದಾಖಲಿಸಿ 3,48,870 ರೂ. ದಂಡ ಸಂಗ್ರಹಿಸಲಾಗಿದೆ ಎಂದು ಹೇಳಿದರು.
ದ.ಕ. ಜಿಲ್ಲೆಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಹಾಗೂ ತಂಬಾಕು ಪದಾರ್ಥ ಗಳ ಸೇವನೆಯನ್ನು ನಿಷೇಧಿಸುವ ನಿಟ್ಟಿನಲ್ಲಿ ಜುಲೈ 1ರಿಂದ ಆಗಸ್ಟ್ 28ರವರೆಗೆ ಅಭಿಯಾನ ಕೈಗೊಳ್ಳಲಾಗಿದೆ. ಈ ಮೂಲಕ ಯುವ ಪೀಳಿಗೆಯನ್ನು ಮಾದಕ ದ್ರವ್ಯಗಳಿಂದ ದೂರ ಉಳಿಸುವ ಪ್ರಯತ್ನ ಮಾಡಲಾಗುವುದು.
ಸಾರ್ವಜನಿಕ ಸ್ಥಳಗಳಾದ ಕಚೇರಿ, ಪಾರ್ಕ್, ಸಿನೆಮಾ ಟಾಕೀಸ್, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಮೊದಲಾದ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸುವ ಜತೆಗೆ ಗುಟ್ಕಾ ಮೊದಲಾದ ತಂಬಾಕು ಉತ್ಪನ್ನಗಳ ಸೇವನೆಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲಾಗುತ್ತಿದೆ. ಶಾಲಾ ಕಾಲೇಜುಗಳ 100 ಮೀ. ವ್ಯಾಪ್ತಿಯಲ್ಲಿ ಧೂಮಪಾನ ನಿಷೇಧಿತ ವಲಯ ಎಂಬ ಫಲಕಗಳನ್ನು ಅಳವಡಿಸುವುದು ಮತ್ತು ಈ ಪ್ರದೇಶಗಳಲ್ಲಿ ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಮಾರಾಟವನ್ನು ನಿಷೇಧಿಸಲಾಗಿದೆ ಎಂದವರು ತಿಳಿಸಿದರು
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಕೊಟ್ಪಾ ಕಾಯ್ದೆ ಅನುಷ್ಠಾನದ ವೌಲ್ಯಮಾಪನ ಮಾಡುವ ಸಾರ್ವಜನಿಕ ಆರೋಗ್ಯ ಸಂಸ್ಥೆಯ ನೋಡಲ್ ಅಧಿಕಾರಿ ಜಾನ್ ಕೆನಡಿ ಅವರು ಮಾತನಾಡಿ, ಗದಗ, ಕೋಲಾರ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಈಗಾಗಲೇ ಕೊಟ್ಪಾ ಕಾಯ್ದೆಯನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಲಾಗಿದೆ. ದ.ಕ. ಜಿಲ್ಲಾ ಪೊಲೀಸ್ ಠಾಣಾ ವ್ಯಾಪ್ತಿ ಯಲ್ಲೂ ಕಳೆದ ಎರಡು ತಿಂಗಳಿನಿಂದ ಕಾಯ್ದೆ ಜಾರಿಗೆ ಅಭಿಯಾನವನ್ನು ಅತ್ಯಂತ ಸಮರ್ಪಕವಾಗಿ ನಡೆಸಲಾಗಿದೆ. ಶೇ.80ರಷ್ಟು ಕಾನೂನಿನ ಅನುಷ್ಠಾನ ಹಾಗೂ ಶೇ.80ರಷ್ಟು ಜನರಿಗೆ ಜಾಗೃತಿ ತಲುಪಿಸುವ ಆಧಾರದಲ್ಲಿ ಜಿಲ್ಲೆಯಲ್ಲಿ ಸಂಪೂರ್ಣ ಕೊಟ್ಪಾ ಕಾಯ್ದೆಯನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಿರುವುದಾಗಿ ಘೋಷಿಸಲಾಗುತ್ತದೆ. ದ.ಕ. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕಾಯ್ದೆ ಕಟ್ಟು ನಿಟ್ಟಾಗಿ ಅನುಷ್ಠಾನಗೊಳಿಸಲಾಗಿದೆ ಎಂದು ತಿಳಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿನ್ಸೆಂಟ್ ಶಾಂತ ಕುಮಾರ್ ಉಪಸ್ಥಿತರಿದ್ದರು.