ಜೈಪುರ್, ಆ.29: ದೇಶಾದ್ಯಂತ ರಕ್ಷಾಬಂಧನದ ಸಂಭ್ರಮ ಮನೆಮಾಡಿದೆ. ಈ ಮಧ್ಯೆ ಈರುಳ್ಳಿ, ತರಕಾರಿ ಸೇರಿದಂತೆ ಎಲ್ಲ ದಿನಸಿಗಳ ಬೆಲೆ ಗಗನಕ್ಕೇರಿದೆ. ಅದಕ್ಕಾಗಿ ರಕ್ಷಾಬಂಧನದ ಹಿನ್ನೆಲೆಯಲ್ಲಿ ಕಣ್ಣಲ್ಲಿ ನೀರು ತರಿಸಿರುವ ಈರುಳ್ಳಿ ಸದ್ದುಮಾಡಿದ್ದು, ಕಾಂಗ್ರೆಸ್ ವಿನೂತನ ರೀತಿಯಲ್ಲಿ ಕೇಂದ್ರದ ವಿರುದ್ಧ ಪ್ರತಿಭಟನೆ ಮಾಡಿದೆ.
ಅದೇನೆಂದರೆ, ಕಾಂಗ್ರೆಸ್ ನಾಯಕರು ಬೆಲೆ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಜೈಪುರದಲ್ಲಿ ಜನರಿಗೆ ಈರುಳ್ಳಿಯನ್ನು ಕಾಣಿಕೆಯಾಗಿ ನೀಡಿದರು. ಸಹೋದರಿಯರಿಂದ ರಾಖಿ ಕಟ್ಟಿಸಿಕೊಂಡಿದ್ದಕ್ಕೆ ಪ್ರತಿಯಾಗಿ ಈರುಳ್ಳಿಯನ್ನು ಕಾಣಿಕೆಯಾಗಿ ನೀಡಿ ಎಂದು ಕಾಂಗ್ರೆಸ್ ನಾಯಕರು ಜನರಿಗೆ ಈರುಳ್ಳಿ ಗಿಫ್ಟ್ ನೀಡಿದರು.
ಇನ್ನು ಸಂಗಮನಗರಿ ಅಲಹಾಬಾದ್ನಲ್ಲಿ ಅಂಗಡಿಯೊಂದು ವಿಶಿಷ್ಟವಾಗಿ ಗಮನ ಸೆಳೆಯಿತು. ಈ ಅಂಗಡಿಯಲ್ಲಿ 10 ರಾಖಿ ಖರೀಸಿದರೆ 1 ಕಿಲೋ ಈರುಳ್ಳಿ ಪಡೆಯುವ ಆಫರ್ ನೀಡಿತ್ತು. ಜೊತೆಗೆ 20 ರಾಖಿ ಖರೀದಿಸಿದರೆ 1 ಕಿಲೋ ತೊಗರಿಬೇಳೆ ಪಡೆಯುವ ಆಫರ್ ಕೂಡ ಕೊಟ್ಟಿದೆ. ಹೀಗೆಂದು ಬೋರ್ಡ್ ಅನ್ನು ಅಂಗಡಿಯ ಮುಂದೆ ಇಟ್ಟಿದ್ದು, ಎಲ್ಲರ ಗಮನ ಸೆಳೆಯಿತು.
ಮುಂಗಾರು ಮಳೆ ಕೈಕೊಟ್ಟಿದ್ದರಿಂದ ತರಕಾರಿ ಬೆಲೆ ಗಗನಕ್ಕೇರಿದ್ದು, ಜನತೆ ಕಂಗಾಲಾಗಿದ್ದಾರೆ. ಈರುಳ್ಳಿ ಬೆಲೆ 80 ರೂ. ತಲುಪಿದ್ದು, ಜನತೆಯ ಕಣ್ಣಲ್ಲಿ ನೀರೂರಿಸಿದೆ.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್, ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಈರುಳ್ಳಿ ಗಿಫ್ಟ್ ನೀಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿತು.