ಕನ್ನಡ ವಾರ್ತೆಗಳು

ಎಲ್ಲೆಡೆ ‘ ಶ್ರೀಕೃಷ್ಣ’ ನಾಮಾವಳಿ | ದೇವಳನಗರಿ ಉಡುಪಿಯಲ್ಲಿ ಶ್ರೀಕೃಷ್ಣಾಷ್ಟಮಿ ಸಂಭ್ರಮ

Pinterest LinkedIn Tumblr

ಉಡುಪಿ: ಜಗದೊಡೆಯ ಶ್ರೀಕೃಷ್ಣನು ಭುವಿಯಲ್ಲಿ ಅವತರಿಸಿದ ಕೃಷ್ಣಪಕ್ಷದ ಅಷ್ಟಮಿಗೆ ಕೃಷ್ಣಾಷ್ಟಮಿ ಎಂದು ಹೆಸರು. ಶ್ರೀಕೃಷ್ಣ‌ಅವತರಿಸಿದ್ದರಿಂದ, ಕೃಷ್ಣಪಕ್ಷದ ಅಷ್ಟಮಿಯಾದುದರಿಂದ ಈ ಎರಡು ಕಾರಣಗಳಿಂದಲೂ ಈ ಅಷ್ಟಮಿಗೆ ಕೃಷ್ಣಾಷ್ಟಮಿ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತಿದೆ. ಚಾಂದ್ರಮಾನದ ಪ್ರಕಾರ ಕೆಲವರು ಈ ಹಬ್ಬವನ್ನು ಆಚರಿಸುತ್ತಾರೆ. ಚಾಂದ್ರಮಾನದ ಪ್ರಕಾರವಾದರೆ ಈ ಹಬ್ಬವನ್ನು ಶ್ರಾವಣಮಾಸದ, ಕೃಷ್ಣಪಕ್ಷದ, ಅಷ್ಟಮಿಯಂದು ಆಚರಿಸಬೇಕು. ಆದರೆ ತೌಳವಮಂಡಲದಲ್ಲಿ ಸೌರಮಾನದ ಪ್ರಕಾರವೇ ಈ ಹಬ್ಬವನ್ನು ಆಚರಿಸುವ ಸಂಪ್ರದಾಯ ಅನಾದಿಕಾಲದಿಂದಲೂ ರೂಢಿಯಲ್ಲಿದೆ. ಸೌರಮಾನದ ಪ್ರಕಾರ ಹಬ್ಬ ಆಚರಿಸುವವರು ಸಿಂಹ ಮಾಸದ ಕೃಷ್ಣಪಕ್ಷದ ಅಷ್ಟಮಿಯಂದು ಕೃಷ್ಣಾಷ್ಟಮಿಯನ್ನು ಆಚರಿಸಬೇಕು.

udp_shri Krishna_Ashtami (2) udp_shri Krishna_Ashtami (5) udp_shri Krishna_Ashtami (1) udp_shri Krishna_Ashtami (3) udp_shri Krishna_Ashtami (4)

ಪೊಡವಿಗೊಡೆಯನ ನಾಡು ಹಬ್ಬದ ಸಂಭ್ರಮ:
ದೇವಳ ನಗರಿ, ಪೊಡವಿಗೊಡೆಯನ ನಾಡು ಎಂದೇ ಖ್ಯಾತಿಯಾದ ಉಡುಪಿ ನಗರದ ತುಂಬೆಲ್ಲಾ ಈಗ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯ ಸಡಗರ, ಸಂಭ್ರಮ. ಶ್ರೀ ಕೃಷ್ಣನ ಆರಾಧನೆ ನಡೆಯುವಲ್ಲೆಲ್ಲಾ ವಿಶೇಷ ಕಾರ್ಯಕ್ರಮಗಳೊಂದಿಗೆ ನಡೆಯುವ ಶ್ರೀ ಕೃಷ್ಣ ಜಯಂತಿ ಹಾಗೂ ವಿಟ್ಲಪಿಂಡಿ ಕಾರ್ಯಕ್ರಮಗಳಿಗೆ ಉಡುಪಿ ಸಜ್ಜಾಗಿದೆ. ವಿಟ್ಲಪಿಂಡಿಯ ಲೀಲೋತ್ಸವ, ಬಣ್ಣಗಳ ಓಕುಳಿಯಾಟಕ್ಕಾಗಿ ಈಗಾಗಲೇ ನಾಡಿನ ನಾನಾ ಭಾಗಗಳಿಂದ ಜನತೆ ಉಡುಪಿಯಲ್ಲಿ ಸೇರತೊಡಗಿದ್ದಾರೆ. ಉಡುಪಿ ನಗರ ಶ್ರೀಕೃಷ್ಣನ ಹುಟ್ಟಿನ ಹಬ್ಬಾಚರಣೆಗೆ ಸಿಂಗಾರವಾಗಿದೆ.

ಸೆ.5 ರಂದು ರಾತ್ರಿ 12.13ಕ್ಕೆ ಸರಿಯಾಗಿ ಪರ್ಯಾಯ ಶ್ರೀಗಳು ಶ್ರೀಕೃಷ್ಣನಿಗೆ ಅರ್ಘ್ಯಪ್ರದಾನ ಮಾಡಲಿದ್ದಾರೆ. ಸೆ.6 ಮಧ್ಯಾಹ್ನ 3 ಗಂಟೆಯಿಂದ ಶ್ರೀಕೃಷ್ಣ ಲೀಲೋತ್ಸವ (ವಿಟ್ಲಪಿಂಡಿ) ನಡೆಯಲಿದೆ.
ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮದ ಅಷ್ಟ ದಿನದ ಕಾರ್ಯಕ್ರಮ (ಎಂಟು ದಿನದ ಕಾರ್ಯಕ್ರಮ)ಸೆ.1 ರ ಮಂಗಳವಾರ ಆರಂಭಗೊಂಡಿದ್ದು ನಿರಂತರವಾಗಿ ವಿವಿಧ ಧಾರ್ಮಿಕ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯುತ್ತಿವೆ.

ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರ ಆಶೀರ್ವಾದದೊಂದಿಗೆ ಶ್ರೀಕೃಷ್ಣಮುಖ್ಯಪ್ರಾಣ ಸೇವಾ ಸಮಿತಿ, ಕಿದಿಯೂರು ಹೊಟೇಲ್, ಯುವರಾಜ್ ಸಂಕೇಶ್ ಮಸ್ಕತ್ ಪ್ರಾಯೋಜಕತ್ವದಲ್ಲಿ ಸೆ. 5ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಸೆ. 6ರಂದು ವಿಟ್ಲಪಿಂಡಿ ಮಹೋತ್ಸವ ವಿಜೃಂಭಣೆಯಿಂದ ಜರಗಲಿದೆ. ಸೆ. 5ರ ಬೆಳಗ್ಗೆ 10ರಿಂದ ಸಂಜೆ 6 ಗಂಟೆ ವವರೆಗೆ ಮಧ್ವಮಂಟಪದಲ್ಲಿ ಪ್ರಶಸ್ತಿ ಪುರಸ್ಕೃತ ಪುರುಷ ತಂಡಗಳಿಂದ ಭಜನೆ ನಡೆಯಲಿದೆ. ಶ್ರೀಕೃಷ್ಣ ಮಠದಲ್ಲಿ ವಿಶೇಷ ಹೂವಿನ ಅಲಂಕಾರ ಸೇವೆ ಇದೆ. ಸೆ. 6ರಂದು ರಾಜಾಂಗಣದಲ್ಲಿ, ಭೋಜನ ಶಾಲೆಯ ಮೇಲೆ ಬೆಳಗ್ಗೆ 10 ಗಂಟೆಯಿಂದ 3 ಗಂಟೆವರೆಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಸಮಿತಿ ತಿಳಿಸಿದೆ.

ಉಂಡೆ, ಚಕ್ಕುಲಿ ತಯಾರಿ ಜೋರು:
ಶ್ರೀಕೃಷ್ಣಮಠದ ಶ್ರೀಕೃಷ್ಣಜನ್ಮಾಷ್ಟಮಿ ಹಬ್ಬದಲ್ಲಿ ಉಂಡೆ, ಚಕ್ಕುಲಿ ಪ್ರಸಾದ ವಿತರಣೆ ವರ್ಷಂಪ್ರತಿ ನಡೆಯುತ್ತದೆ. ಜನ್ಮಾಷ್ಟಮಿ ಮರುದಿನ ವಿಟ್ಲಪಿಂಡಿ ಹಬ್ಬದಂದು ಸಾರ್ವಜನಿಕರಿಗೆ ಪ್ರಸಾದರೂಪವಾಗಿ ಉಂಡೆ, ಚಕ್ಕುಲಿಗಳನ್ನು ವಿತರಿಸಲಾಗುತ್ತದೆ. ಒಂದೇ ದಿನದಲ್ಲಿ ಇಷ್ಟೊಂದು ಚಕ್ಕುಲಿ, ಉಂಡೆಗಳನ್ನು ತಯಾರಿಸುವುದು ಕಷ್ಟದಾಯಕವಾದ ಕಾರಣ ಮೂರ್ನಾಲ್ಕು ದಿನಗಳಿಂದಲೇ ತಯಾರಿಸುವ ಕೆಲಸ ನಡೆಯುತ್ತಿದೆ. ಸತತ ಮೂರು ದಿನ 120 ಜನರು ಉಂಡೆ, ಚಕ್ಕುಲಿ ತಯಾರಿಸುವರು. 15 ಕ್ವಿಂಟಾಲ್ ಚಕ್ಕುಲಿ ಹಿಟ್ಟು, 35 ಕ್ವಿಂಟಾಲ್ ಉಂಡೆ ಹಿಟ್ಟು, ಅರಳನ್ನು ಬಳಸಿ 1.7 ಲಕ್ಷ ಉಂಡೆ, 1.2 ಲಕ್ಷ ಚಕ್ಕುಲಿ ತಯಾರಿಸಲಾಗುತ್ತದೆ. ಜನ್ಮಾಷ್ಟಮಿ ದಿನ ಸೆ. 5 ರಂದೂ ಉಂಡೆ, ಚಕ್ಕುಲಿ ತಯಾರಾಗುತ್ತದೆ. ಅಂದು ಬೆಳಗ್ಗೆ ಪರ್ಯಾಯ ಶ್ರೀಗಳವರು ಸ್ವತಃ ಉಂಡೆ ಕಟ್ಟುವುದು, ಇದೇ ಉಂಡೆಗಳನ್ನು ರಾತ್ರಿ ದೇವರಿಗೆ ಸಮರ್ಪಿಸುವುದು ವಿಶೇಷ.

ಬಿಗಿ ಬಂದೋಬಸ್ತ್: ಉತ್ಸವದ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಿಂದ ಬಿಗು ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವರದಿ- ಯೋಗೀಶ್ ಕುಂಭಾಸಿ

Write A Comment