-ಇ.ಎಸ್.ಸುಧೀಂದ್ರ ಪ್ರಸಾದ್
ಧಾರವಾಡ: ಹಿರಿಯ ಸಂಶೋಧಕ ಡಾ.ಎಂ. ಎಂ.ಕಲಬುರ್ಗಿ ಅವರ ಹತ್ಯೆ ನಡೆದು ಎಂಟು ದಿನಗಳು ಕಳೆದಿವೆ. ಪ್ರಕರಣದ ತನಿಖೆಯನ್ನು ಸಿಐಡಿ ತೀವ್ರಗತಿಯಲ್ಲಿ ನಡೆಸುತ್ತಿದೆ. ಆದರೆ, ಈವರೆಗೂ ಹಂತಕರ ಸುಳಿವಾಗಲಿ ಅಥವಾ ಹತ್ಯೆಗೆ ಕಾರಣವಾಗಲಿ ಪತ್ತೆಯಾಗಿಲ್ಲ.
ಈ ಹಿಂದೆ ಕೂಡ ಹೀಗೆ ವಿಚಾರವಾದಿಗಳ ಹಾಗೂ ಪ್ರಾಧ್ಯಾಪಕರ ಹತ್ಯೆ ನಡೆದಾಗ ಗಂಭೀರ ಸ್ವರೂಪದ ತನಿಖೆ ನಡೆದಿತ್ತು. ಕಾಲಕ್ರಮೇಣ ಆ ಗಂಭೀರತೆ ಕಡಿಮೆಯಾಗಿ ಜನರ ನೆನಪಿನಿಂದ ಹಿಂದಕ್ಕೆ ಸರಿದಿತ್ತು.
ಎರಡೂವರೆ ದಶಕದ ಹಿಂದೆ: ಧಾರವಾಡದ ಕರ್ನಾಟಕ ವಿ.ವಿ.ಯ ಕಾನೂನು ಕಾಲೇಜಿನ ಪ್ರಾಧ್ಯಾಪಕ ಕೆ.ಎನ್.ಶೇಷಾದ್ರಿ ಅವರ ಹತ್ಯೆ ನಡೆದದ್ದು 1990ರಲ್ಲಿ. ಆದರೆ ಹತ್ಯೆ ತನಿಖೆ ನಡೆದರೂ ಇಲ್ಲಿಯವರೆಗೂ ಹಂತಕರು ಪತ್ತೆಯಾಗಿಲ್ಲ.
ಆ ಸಂದರ್ಭದಲ್ಲಿ ಕಾನೂನು ಪದವಿಯಲ್ಲಿ ನಕಲು ಮಾಡಿ ಪಾಸು ಮಾಡಿದವರ ಸಂಖ್ಯೆ ಹೆಚ್ಚಾಗಿದೆ ಎನ್ನುವ ಸಾಕಷ್ಟು ಆರೋಪಗಳು ಕೇಳಿ ಬಂದಿದ್ದವು. ನಕಲು ಮಾಡಿ ಪಾಸಾದವರನ್ನು ಪತ್ತೆ ಮಾಡಲು ಸಮಿತಿಯೊಂದನ್ನು ರಚಿಸಲಾಗಿತ್ತು. ಸಮಿತಿಯ ಅಧ್ಯಕ್ಷರಾದ ಇಬ್ಬರು ತನಿಖೆ ಅರ್ಧದಲ್ಲಿರುವಾಗಲೇ ಸಮಿತಿಯಿಂದ ಹೊರಬಂದರು. ಅಂತಿಮವಾಗಿ ಸಮಿತಿಯ ಜವಾಬ್ದಾರಿಯನ್ನು ಶಿಸ್ತಿನ ಪ್ರಾಧ್ಯಾಪಕರು ಎನಿಸಿದ್ದ ಶೇಷಾದ್ರಿ ಅವರಿಗೆ ಒಪ್ಪಿಸಲಾಯಿತು. ಶೇಷಾದ್ರಿ ಅವರು ಆಗ ಜಿ.ಪಿ.ಅಜ್ಜಪ್ಪ ಕಾಲೇಜಿನಲ್ಲಿ ಪ್ರಾಚಾರ್ಯರಾಗಿದ್ದರು. ಹಿಂದಿನ 4 ವರ್ಷಗಳಲ್ಲಿ ಪಾಸಾಗಿದ್ದವರ ಉತ್ತರ ಪತ್ರಿಕೆ ತೆಗೆದು ಪರಿಶೀಲನೆ ನಡೆಸಲು ಶೇಷಾದ್ರಿ ಮುಂದಾದರು.
ಕ.ವಿ.ವಿಯ ಆವರಣದಲ್ಲಿರುವ ಪ್ರಾಧ್ಯಾಪಕರ ವಸತಿ ಸಮುಚ್ಚಯದಲ್ಲಿದ್ದ ಶೇಷಾದ್ರಿ ಅವರನ್ನು ಬಾಡಿಗೆ ಹಂತಕರು 15 ಬಾರಿ ಇರಿದು ಕೊಂದಿದ್ದರು. ಹಂತಕರನ್ನು ಶೀಘ್ರ ಬಂಧಿಸುವಂತೆ ದೊಡ್ಡ ಮಟ್ಟದ ಚಳವಳಿಯೂ ನಡೆದಿತ್ತು. ಹಂತಕರನ್ನು ಪೊಲೀಸರು ಬಂಧಿಸಿದರು. ಕೆಳ ಹಂತದ ನ್ಯಾಯಾಲಯ ಶಿಕ್ಷೆಯನ್ನೂ ವಿಧಿಸಿತು. ಆದರೆ ಹೈಕೋರ್ಟ್ನಲ್ಲಿ ಸಾಕ್ಷ್ಯಗಳ ಕೊರತೆಯಿಂದ ಅವರ ಬಿಡುಗಡೆಯಾಯಿತು. ಆದರೆ ಇಂದಿಗೂ ಹತ್ಯೆಯ ಹಿಂದಿರುವ ವ್ಯಕ್ತಿಗಳು ಯಾರು ಎಂಬುದು ಪತ್ತೆಯಾಗಿಲ್ಲ. ಮರೆತೇ ಹೋಗಿದ್ದ ಶೇಷಾದ್ರಿ ಕೊಲೆ ಪ್ರಕರಣದ ನೆನಪು ಡಾ.ಕಲಬುರ್ಗಿ ಅವರ ಹತ್ಯೆಯಿಂದಾಗಿ ಮತ್ತೆ ಮರುಕಳಿಸಿದೆ. ಈ ಎರಡೂ ಸಂಗತಿಗಳು ಈಗ ಧಾರವಾಡದ ಪ್ರಜ್ಞಾವಂತ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ.
ಸತ್ಯಂಪೇಟೆ ಹತ್ಯೆ: ಕಲಬುರ್ಗಿ ಅವರ ಆಪ್ತರಲ್ಲಿ ಒಬ್ಬರಾದ ಹಾಗೂ ಅವರಂತೆಯೇ ಬಸವ ತತ್ವ ವಿಚಾರದಲ್ಲಿ ನಂಬಿಕೆ ಇಟ್ಟಿದ್ದ ವಿಚಾರವಾದಿ, ಪತ್ರಕರ್ತ ಯಾದಗಿರಿ ಜಿಲ್ಲೆಯ ಶಹಾಪುರದ ಲಿಂಗಣ್ಣ ಸತ್ಯಂಪೇಟೆ 2012ರ ಜುಲೈ 25ರಂದು ನಿಗೂಢವಾಗಿ ಸಾವನ್ನಪ್ಪಿದ್ದರು.